Advertisement
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಮೇ ವರೆಗಿನ ಬೇಸಗೆಯ 3 ತಿಂಗಳು ವಾಣಿಜ್ಯ ಕ್ಷೇತ್ರದಲ್ಲಿ ಬಿರುಸಿನ ವ್ಯಾಪಾರ ನಡೆಯುವ ಕಾಲ. ಕಳೆದ ವರ್ಷದಂತೆಯೇ ಈ ಬಾರಿಯೂ ಇದ್ದಿದ್ದರೆ ಕೋಟ್ಯಂತರ ರೂ. ವಹಿವಾಟು ನಡೆಯಬೇಕಿತ್ತು. ಆದರೆ ಕೋವಿಡ್ 19 ಕಾರಣದಿಂದ ಲಾಕ್‌ಡೌನ್ ಜಾರಿ ಮಾಡಲಾಯಿತು. ಅದರ ನೇರ ಪರಿಣಾಮ ವಾಣಿಜ್ಯ ಕ್ಷೇತ್ರದ ಮೇಲೆ ಬಿದ್ದಿತು. ಇಡೀ ಉದ್ಯಮ, ಕೈಗಾರಿಕೆ, ಸ್ಥಳೀಯ ಆರ್ಥಿಕ ಕ್ಷೇತ್ರ ಭಾರೀ ಹಿನ್ನಡೆ ಅನುಭವಿಸಿತು. ಜೂನ್‌ನಿಂದ ಲಾಕ್‌ಡೌನ್ ತೆರವಾಗಿ ವ್ಯಾಪಾರ ವಹಿವಾಟು ತುಸು ಚೇತರಿಕೆ ಕಾಣುತ್ತಿರುವಾಗ ಮತ್ತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರತೆ ಪಡೆದುಕೊಂಡು ಲಾಕ್‌ಡೌನ್‌ಗೆ ಒಳಗಾಗಿದೆ.
Related Articles
ಚಿನ್ನಾಭರಣ ವ್ಯಾಪಾರ ಡಿಸೆಂಬರ್‌ನಲ್ಲಿ ಏರುಗತಿಯಲ್ಲಿ ಸಾಗಿ ಎಪ್ರಿಲ್ ಹಾಗೂ ಮೇ ತಿಂಗಳು ಹೆಚ್ಚಿನ ಭರಾಟೆಯಲ್ಲಿ ನಡೆಯುವ ಅವಧಿ. ಇದೇ ಅವಧಿಯಲ್ಲಿ ಅಕ್ಷಯ ತೃತೀಯಾ ಬರುತ್ತದೆ. ಆದರೆ ಕೊರೊನಾದಿಂದಾಗಿ ಎರಡು ತಿಂಗಳ ಅವಧಿಯಲ್ಲೂ ಚಿನ್ನಭರಣ ವ್ಯಾಪಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಮೇ 15ರಿಂದ ಪುನರಾರಂಭಗೊಂಡರೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಳೆದ ಸಾಲಿಗೆ ಹೋಲಿಸಿದರೆ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿನ ವ್ಯವಹಾರದಲ್ಲಿ ಶೇ. 80ರಷ್ಟು ಕುಸಿತ ಅನುಭವಿಸಿದೆ. ಚಿನ್ನಾಭರಣ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಸುಮಾರು 150 ವ್ಯಾಪಾರ ಸಂಸ್ಥೆಗಳಿವೆ. ಸಿಬಂದಿ, ಚಿನ್ನದ ಕೆಲಸಗಾರರು ಸಹಿತ ಸುಮಾರು 15,000 ಮಂದಿ ಈ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಸರಕಾರ ಚಿನ್ನದ ಕೆಲಸಗಾರರಿಗೆ, ಉದ್ಯೋಗಿಗಳಿಗೆ ಯಾವುದೇ ರೀತಿಯ ಸಹಾಯಧನ ಘೋಷಿಸದಿರುವುದು ಅವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ.
Advertisement
ಜವುಳಿ ವ್ಯಾಪಾರ ಶೇ. 75ರಷ್ಟು ಕುಸಿತಜವುಳಿ ಇನ್ನೊಂದು ಪ್ರಮುಖ ಕ್ಷೇತ್ರ. ಬೃಹತ್, ಮಧ್ಯಮ ಹಾಗೂ ಸಣ್ಣ ಮಳಿಗೆಗಳ ಸಹಿತ ಜಿಲ್ಲೆಯಲ್ಲಿ ಸುಮಾರು 1,000 ಜವುಳಿ ಹಾಗೂ ಸಿದ್ಧ ಉಡುಪುಗಳ ಮಳಿಗೆಗಳಿವೆ. 5,000ರಷ್ಟು ಉದ್ಯೋಗಿಗಳಿದ್ದಾರೆ. ಚಿನ್ನಾಭರಣ ಕ್ಷೇತ್ರದಂತೆ ಇಲ್ಲೂ ಡಿಸೆಂಬರ್‌ನಲ್ಲಿ ವ್ಯವಹಾರ ಏರುಗತಿಯನ್ನು ಪಡೆದುಕೊಂಡು ಮಾರ್ಚ್, ಎಪ್ರಿಲ್ ಹಾಗೂ ಮೇಯಲ್ಲಿ ಬಿರುಸಿನ ವ್ಯಾಪಾರ ಇರುತ್ತದೆ. ಕಳೆದ ಬಾರಿಗೆ ಹೋಲಿಸಿದರೆ ಈ ಅವಧಿಯಲ್ಲಿ ಶೇ. 75ರಷ್ಟು ವ್ಯವಹಾರ ಕುಸಿದಿದೆ. ಇನ್ನೊಂಡೆದೆ ಜವುಳಿ ಸರಬರಾಜು ಆಗುತ್ತಿರುವ ಅಹ್ಮದಾಬಾದ್, ಸೂರತ್, ಮುಂಬಯಿ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಕೊರೊನಾದಿಂದಾಗಿ ಉತ್ಪಾದನ ಘಟಕಗಳು ಮುಚ್ಚಿದ್ದು ಸರಬರಾಜಿನಲ್ಲೂ ಕೊರತೆ ತಲೆದೋರಿದೆ. ಅದೇ ರೀತಿ ಮಾಲ್‌ಗಳೂ ಸಂಕಷ್ಟದಲ್ಲಿದೆ. ಮಂಗಳೂರು ನಗರವೊಂದರಲ್ಲೇ 5ಕ್ಕೂ ಹೆಚ್ಚು ಮಾಲ್‌ಗಳಿದ್ದು 5,000ಕ್ಕೂ ಅಧಿಕ ಮಂದಿ ದುಡಿಯುತ್ತಿದ್ದಾರೆ. ಕೊರೊನಾದಿಂದಾಗಿ ಇಲ್ಲೂ ವ್ಯಾಪಾರ ಕುಸಿದಿದ್ದು ಮಾಲಕರು ಹಾಗೂ ಉದ್ಯೋಗಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಗೃಹೋಪಯೋಗಿ ಉತ್ಪನ್ನಗಳ ಮಳಿಗೆ
ಗೃಹೋಪಯೋಗಿ ಉತ್ಪನ್ನಗಳ ಮಳಿಗೆಗಳಿಗೆ ಎಪ್ರಿಲ್ ಹಾಗೂ ಮೇ ಬಿರುಸಿನ ವ್ಯಾಪಾರ ಅವಧಿ. ಈ ಬಾರಿ ಲಾಕ್‌ಡೌನ್‌ನಿಂದಾಗಿ ಒಟ್ಟು ವ್ಯಾಪಾರದಲ್ಲಿ ಶೇ. 60ರಷ್ಟು ಕಡಿಮೆಯಾಗಿದೆ. ಈ ಕ್ಷೇತ್ರ ಕೂಡ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಸಹಜ ಸ್ಥಿತಿಗೆ ಬರಲು ಇನ್ನೂ ಕೆಲವು ಸಮಯ ಬೇಕಾದಿತು. ಹೊಟೇಲ್, ಕ್ಯಾಟರಿಂಗ್
ಜಿಲ್ಲೆಯಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಸಹಿತ ಸಾಧಾರಣ ಹಾಗೂ ಮಧ್ಯಮ ಗಾತ್ರದ 500ಕ್ಕೂ ಅಧಿಕ ಹೊಟೇಲ್‌ಗಳಿವೆ. ಈ ಉದ್ಯಮ ಕೊರೊನಾದಿಂದಾಗಿ ಸುಮಾರು ಮೂರು ತಿಂಗಳುಗಳಿಂದ ಮುಚ್ಚಿತ್ತು. ಸುಮಾರು 100 ಕೋ.ರೂ. ನಷ್ಟ ಅಂದಾಜಿಸಲಾಗಿದೆ. ಪ್ರಸ್ತುತ ಆರಂಭಗೊಂಡರೂ ವ್ಯಾಪಾರ ಚೇತರಿಸಿಕೊಂಡಿಲ್ಲ. ಹೊಟೇಲ್ ಉದ್ಯಮ ತರಕಾರಿ, ಹಾಲು ಬಿಟ್ಟು ಉಳಿದಂತೆ ಕಚ್ಚಾ ಸಾಮಗ್ರಿಗಳಿಗೆ ಶೇ. 18ರಷ್ಟು ಹಾಗೂ ಸಿದ್ಧಪಡಿಸಿದ ತಿಂಡಿ ತಿನಸುಗಳ ಮೇಲೆ ಶೇ. 5ರಷ್ಟು ಜಿಎಸ್‌ಟಿ ಸರಕಾರಕ್ಕೆ ಪಾವತಿಸುತ್ತದೆ. ಹೊಟೇಲ್ ಉದ್ಯಮದಲ್ಲಿ 8,000 ಮಂದಿ ದುಡಿಯುತ್ತಿದ್ದಾರೆ. ಸರಕಾರದಿಂದ ಹೊಟೇಲ್ ಕಾರ್ಮಿಕರಿಗೆ ಯಾವುದೇ ಸಹಾಯಧನ ಘೋಷಣೆಯಾಗಿಲ್ಲ. ಕ್ಯಾಟರಿಂಗ್ ಕ್ಷೇತ್ರದ ಮೇಲೂ ಭಾರೀ ಪರಿಣಾಮ ಬೀರಿದೆ. ದ.ಕ. ಜಿಲ್ಲೆಯಲ್ಲಿ ದೊಡ್ಡ ಮತ್ತು ಸಣ್ಣ ಸಹಿತ ಸುಮಾರು 300ಕ್ಕೂ ಅಧಿಕ ಕ್ಯಾಟರಿಂಗ್‌ಗಳಿದ್ದು 10,000ಕ್ಕೂ ಅಧಿಕ ಮಂದಿಗೆ ಇದು ಉದ್ಯೋಗ ನೀಡುತ್ತಿದೆ. ಆಗಬೇಕಾಗಿರುವುದು
– ಜನರಲ್ಲಿ ಉದ್ಯೋಗ ಭದ್ರತೆಯ ಬಗ್ಗೆ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಇರುವ ಅನಿಶ್ಚಿತತೆ ನಿವಾರಣೆಯಾಗಬೇಕು.
– ಗ್ರಾಹಕರಲ್ಲಿ ಖರೀದಿ ಶಕ್ತಿ (ಪರ್ಚೇಸಿಂಗ್ ಪವರ್) ವೃದ್ಧಿಸಲು ಪೂರಕ ಕ್ರಮಗಳು ಅಗತ್ಯ. ಈ ನಿಟ್ಟಿನಲ್ಲಿ ಸರಕಾರ ಈಗಾಗಲೇ ಹಣಕಾಸಿನ ಹರಿವು ಹೆಚ್ಚಾಗಬೇಕೆಂದು ಉದ್ಯೋಗಿಗಳನ್ನು ಕೇಂದ್ರೀಕರಿಸಿ ಕೆಲವು ಅವಕಾಶಗಳನ್ನು ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಯೋಜನೆಗಳನ್ನು ಸರಕಾರ ರೂಪಿಸಬೇಕಾಗಿದೆ.
– ಹೂಡಿಕೆಗೆ ಉತ್ತೇಜನ ನೀಡಲು ಸರಕಾರದಿಂದ ಪ್ರೋತ್ಸಾಹ ಲಭಿಸಿದರೆ ಹೆಚ್ಚಿನ ಬಂಡವಾಳ ಮಾರುಕಟ್ಟೆಗೆ ಹರಿದು ಬರಲು ಸಾಧ್ಯವಾಗುತ್ತದೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು ಆದಾಯ ವೃದ್ಧಿಯಾಗಲಿದೆ.
– ಸರಕಾರ ಕೆಲವು ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರಿಗೆ, ವೃತ್ತಿದಾರರಿಗೆ ನೆರವು ಘೋಷಿಸಿದೆ. ಇದೇ ರೀತಿ ಮೀನುಗಾರಿಕೆಯಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಠ 5 ಸಾವಿರ ರೂ. ನೆರವು ಘೋಷಿಸಿದರೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುತ್ತದೆ.
– ಗ್ರಾಹಕ ಸಮೂಹದಲ್ಲಿ ಬಹುದೊಡ್ಡ ಭಾಗವಾಗಿರುವ ಮಧ್ಯಮವರ್ಗದಲ್ಲಿ ಖರೀದಿಗೆ ಉತ್ತೇಜನ ನೀಡುವ ಬಗ್ಗೆ ಪ್ರೋತ್ಸಾಹಕ ರಿಯಾಯಿತಿಗಳನ್ನು ನೀಡುವುದು. ಇದು ವಾಣಿಜ್ಯ ವ್ಯವಹಾರಗಳ ವೃದ್ಧಿಗೆ ಸಹಕಾರಿಯಾಗಲಿದೆ. ಪೂರಕ ಕ್ರಮಗಳು ಅಗತ್ಯ
ಕೊರೊನಾದಿಂದಾಗಿ ವಾಣಿಜ್ಯ ಕ್ಷೇತ್ರ ಪ್ರಸ್ತುತ ಸಂಕಷ್ಟದಲ್ಲಿದೆ. ಉದ್ಯೋಗಿಗಳಲ್ಲಿ ಅನಿಶ್ಚಿತತೆ ಆವರಿಸಿದ್ದು ಗ್ರಾಹಕರ ಖರೀದಿ ಶಕ್ತಿಯ ಮೇಲೂ ತೀವ್ರ ಪರಿಣಾಮ ಬೀರಿದೆ. ಜನತೆಯಲ್ಲಿ ಆದಾಯ ವೃದ್ಧಿ ಮತ್ತು ಖರೀದಿ ಶಕ್ತಿ ಹೆಚ್ಚಾದಾಗ ಮಾರುಕಟ್ಟೆ ಚೇತರಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರದ ಕಾರ್ಯತಂತ್ರಗಳು ಅವಶ್ಯ.
– ಐಸಾಕ್ ವಾಸ್, ಅಧ್ಯಕ್ಷರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಉದಯವಾಣಿ ಅಧ್ಯಯನ ತಂಡ