ಹುಬ್ಬಳ್ಳಿ: ಕೇವಲ ದಾಂಪತ್ಯ ಜೀವನದಲ್ಲಿ ಒಂದಾಗದೇ ಕಲಾ ಸೇವೆಯಲ್ಲಿ ಒಂದಾಗಿ ಜೊತೆಗೂಡಿರುವ ಎಂ.ಎಸ್. ಲಂಗೋಟಿ ದಂಪತಿ ಕಾರ್ಯ ಶ್ಲಾಘನೀಯ ಎಂದು ಕಲಾವಿದ ಎಂ.ಆರ್. ಬಾಳೇಕಾಯಿ ಹೇಳಿದರು. ಲ್ಯಾಮಿಂಗ್ಟನ್ ರಸ್ತೆಯ ಹೋಟೆಲ್ ಶ್ರೀಕೃಷ್ಣ ಭವನದಲ್ಲಿ ಮೂರು ದಿನ ನಡೆಯಲಿರುವ ಕಲಾವಿದ ದಂಪತಿಯಾದ ಎಂ.ಎಸ್. ಲಂಗೋಟಿ ಮತ್ತು ಮಂಜುಳಾ ಕೆ.ವಿ. ಅವರ ನಿಸರ್ಗದಲ್ಲಿ “ನೀ ನಾ’ದ ಚಿತ್ರಕಲಾ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಲಾವಿದ ದಂಪತಿಯ ಚಿತ್ರಕಲಾ ಪ್ರದರ್ಶನವು ನಿಸರ್ಗದೊಂದಿಗೆ ಕಳೆದ ಅನುಭೂತಿ ನೀಡುತ್ತದೆ. ಚಿತ್ರಕಲೆಯಲ್ಲೂ ಸಂಗೀತದ ನಿನಾದ ಹೊರಹೊಮ್ಮಿಸಿ, ತಮ್ಮಲ್ಲಿರುವ ಪ್ರಕೃತಿ ಪ್ರೇಮ ತೋರಿಸಿಕೊಟ್ಟಿದ್ದಾರೆ. ಅವರಲ್ಲಿರುವ ಕಲಾ ಪ್ರೀತಿ ಎಲ್ಲರಿಗೂ ಮಾದರಿಯಾಗಲಿ ಎಂದರು. ಕಲಾವಿದರು ನಿಸರ್ಗವನ್ನು ಹೊರಗಣ್ಣಿನಿಂದ ನೋಡದೆ, ತಮ್ಮಲ್ಲಿರುವ ಮನಸ್ಸಿನಿಂದ ನೋಡಿ ಅಲ್ಲಿಯ ಸೂಕ್ಷ್ಮತೆಯನ್ನು ರೇಖೆಗಳಲ್ಲಿ ವ್ಯಕ್ತಪಡಿಸಿ ಸಮಾಜಕ್ಕೆ ಹೊಸ ಸಂದೇಶ
ನೀಡುವಂತಿರಬೇಕೆಂದರು.
ಕಲಿಸಿದ ಗುರುವಿನ ಜೀವನ ಸಾರ್ಥಕವಾಗಬೇಕೆಂದರೆ ಮೊದಲು ವಿದ್ಯಾರ್ಥಿಯ ಮನಸ್ಸುಗಳನ್ನು ಗೆಲ್ಲಬೇಕು. ನಾವು ಕಲಿತ ವಿದ್ಯೆಯನ್ನು ದಾನ ಮಾಡಿ, ವಿದ್ಯಾರ್ಥಿ ಮನಸ್ಸು ಗೆಲ್ಲಬೇಕು. ಆಗ ಗುರುವಾದವನಿಗೆ ಜಗತ್ತನ್ನೇ ಗೆದ್ದಂಥ ಅನುಭವಾಗುತ್ತದೆ. ವಿದ್ಯಾರ್ಥಿಗಳು ಸಹ ಗುರುಸ್ಥಾನ ನೀಡಿ, ಪ್ರೀತಿಸಿ ಗೌರವಿಸುತ್ತಾರೆ ಎಂದರು.
ರೇಖಾ ಚಿತ್ರ ಕಲಾವಿದರಿಗೆ ತಾಯಿ ಇದ್ದಂತೆ. ಕಲ್ಪನೆಯಲ್ಲಿ ಮೂಡಿದ ರೇಖೆ ನಂತರ ಬಣ್ಣ ಬಳಿದುಕೊಳ್ಳುತ್ತದೆ. ಕಲೆ ನೀರಿನಷ್ಟೇ ಪವಿತ್ರವಾಗಿ ಸದಾ ಹರಿಯುತ್ತಿರುತ್ತದೆ. ಸಾಹಿತ್ಯ, ಧರ್ಮ, ಸಂಸ್ಕೃತಿ, ಆಚಾರ, ವಿಚಾರ ಹೀಗೆ ಎಲ್ಲದರಲ್ಲೂ ಕಲೆ ಸೇರಿಕೊಂಡಿದೆ. ಅದನ್ನು ಒಳಗಣ್ಣಿನಿಂದ ನೋಡುವ ಸಾಮರ್ಥ್ಯ ನಮ್ಮಲ್ಲಿರಬೇಕು ಎಂದರು.
ಕಲಾವಿದ ಆರ್.ಬಿ. ಗರಗ ಮಾತನಾಡಿ, ಜಲವರ್ಣದ ಚಿತ್ರಕಲೆಯಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಆದರೆ, ಈ ದಂಪತಿ ಅದರಲ್ಲಿ ಹಿಡಿತ ಸಾಧಿಸಿದ್ದು, ನಿಸರ್ಗದಲ್ಲಿಯೇ ನಿನಾದ ಹೊರಹೊಮ್ಮಿಸಿದ್ದಾರೆ ಎಂದರು. ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ವೈ.ನಾಗನಗೌಡರ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಜಯಾನಂದ ಮಾದರ, ಕರಿಯಪ್ಪ ಹಂಚಿನಮನಿ, ಗುರುನಾಥ ಶಾಸ್ತ್ರಿ, ಜಿ.ಆರ್. ಮಲ್ಲಾಪುರ, ಕೆ.ವಿ. ಶಂಕರ, ಚಿತ್ರ ಕಲಾಪ್ರದರ್ಶನ ಆಯೋಜಿಸಿದ್ದ ಎಂ.ಎಸ್. ಲಂಗೋಟಿ, ಮಂಜುಳಾ ಕೆ.ವಿ. ದಂಪತಿಗಳಿದ್ದರು.