Advertisement

ಹಂಪನಕಟ್ಟೆಯಲ್ಲಿ ಎ. 27ರಂದು ಶಂಕುಸ್ಥಾಪನೆ

10:30 AM Apr 27, 2022 | Team Udayavani |

ಮಹಾನಗರ: ಹಂಪನಕಟ್ಟೆಗೆ ನಾಲ್ಕು ವರ್ಷಗಳ ಹಿಂದೆ ಸ್ಥಳಾಂತರ ಗೊಂಡಿದ್ದ ಬೊಕ್ಕಪಟ್ಣ ಸರಕಾರಿ ಪದವಿಪೂರ್ವ ಕಾಲೇಜಿಗೆ ನೂತನ ಸುಸಜ್ಜಿತ ಕಟ್ಟಡದ ಕನಸು ಸಾಕಾರಗೊಳ್ಳುತ್ತಿದ್ದು, ನೂತನ ಕಾಲೇಜು ಕಟ್ಟಡದ ಶಂಕುಸ್ಥಾಪನೆ ಎ. 27ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

Advertisement

ಒಟ್ಟು 4.80 ಕೋ.ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡದ ಶಿಲಾನ್ಯಾಸವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ನೆರವೇರಿಸಲಿದ್ದು, ಶಾಸಕ ಡಿ. ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಸುನಿಲ್‌ ಕುಮಾರ್‌, ಅಂಗಾರ ಎಸ್‌, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ ಕುಮಾರ್‌ ಕಟೀಲು ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾಲೇಜು ಬೊಕ್ಕಪಟ್ಣದಿಂದ ಅಭ್ಯಾಸಿ ಪ್ರೌಢಶಾಲಾ ಆವರಣಕ್ಕೆ ಸ್ಥಳಾಂತರಗೊಂಡ ಬಳಿಕ ತರಗತಿ ಕೊಠಡಿಗಳ ಸಮಸ್ಯೆ ಎದುರಾಗಿತ್ತು. ಜತೆಗೆ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗತೊಡಗಿತ್ತು. ಇದಲ್ಲದೆ ಕಾಲೇಜಿಗೆ ಸುಸಜ್ಜಿತ ಕಟ್ಟಡ ಕೊರತೆ ಹಿನ್ನೆಲೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಅಳವಡಿಸಿ ಉನ್ನತೀಕರಣಕ್ಕೆ ಸಮಸ್ಯೆಯಾಗಿತ್ತು. ಹಾಗಾಗಿ ಶಾಸಕ ವೇದವ್ಯಾಸ ಕಾಮತ್‌ ಅವರು ಕಾಲೇಜಿಗೆ ನೂತನ ಕಟ್ಟಡ ಮಂಜೂರು ಮಾಡುವಂತೆ ಆಗಿನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿದ್ದ ಸುರೇಶ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿ ಶೀಘ್ರ ಮಂಜೂರುಗೊಳಿಸುವಂತೆ ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಕಾಲೇಜಿಗೆ 4.80 ಕೋ.ರೂ.ವೆಚ್ಚದ ನೂತನ ಕಟ್ಟಡ ಮಂಜೂರುಗೊಳಿಸಿದ್ದರು.

ಕಲಾ, ವಾಣಿಜ್ಯ ತರಗತಿಗಳನ್ನು ಒಳಗೊಂಡಿದ್ದ ಸರಕಾರಿ ಪ.ಪೂ. ಕಾಲೇಜು ಸರಕಾರಿ ಅಭ್ಯಾಸಿ ಪ್ರೌಢಶಾಲಾ ಆವರಣಕ್ಕೆ 2018ರಲ್ಲಿ ಸ್ಥಳಾಂತರಗೊಂಡು 19 ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಿತ್ತು. ಬಳಿಕ ಸಾರ್ವಜನಿಕ ಕಂಪೆನಿಗಳ ಸಿಎಸ್‌ಆರ್‌ ನಿಧಿಯಿಂದ ಎರಡು ಕೊಠಡಿಗಳನ್ನು ನಿರ್ಮಿಸಲಾಗಿತ್ತು. 2019ರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿ 56, 2020ರಲ್ಲಿ 58 ಆಗಿತ್ತು. ಈ ವರ್ಷ ಈಗಾಗಲೇ ನೂರಾರು ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.

ನೂತನವಾಗಿ ನಿರ್ಮಾಣಗೊಳ್ಳಲಿರುವ ಕಾಲೇಜು ಕಟ್ಟಡ ನೆಲ, 2 ಅಂತಸ್ತುಗಳನ್ನು ಒಳಗೊಂಡಿದೆ. ನೆಲಅಂತಸ್ತಿನಲ್ಲಿ ಸರಕಾರಿ ಅಭ್ಯಾಸಿ ಪ್ರೌಢಶಾಲೆ ಕಾರ್ಯಾಚರಿಸಲಿದ್ದು, ಮೇಲಿನ ಎರಡು ಅಂತಸ್ತು ಕಾಲೇಜು ಕಾರ್ಯಾಚರಿಸಲಿದೆ. ಪ್ರಸ್ತುತ ಇರುವ ಕಲಾ ಮತ್ತು ವಾಣಿಜ್ಯ ತರಗತಿಗಳ ಜತೆಗೆ ಮುಂದಿನ ವರ್ಷಗಳಲ್ಲಿ ವಿಜ್ಞಾನ ತರಗತಿಯನ್ನು ಕೂಡ ಇಲ್ಲಿ ಆರಂಭಿಸಲು ಯೋಜನೆ ರೂಪಿಸಲಾಗಿದೆ. ನೂತನ ಕಟ್ಟಡ ಕಲಾ, ವಾಣಿಜ್ಯ, ವಿಜ್ಞಾನ ತರಗತಿಗಳಿಗೆ ಸುಸುಜ್ಜಿತ ಕೊಠಡಿ, ಲ್ಯಾಬ್‌, ಗ್ರಂಥಾಲಯ, ಕಚೇರಿ, ಪ್ರಾಂಶುಪಾಲರ, ಉಪನ್ಯಾಸಕರ ಕೊಠಡಿಗಳು, ವಾಶ್‌ರೂಂಗಳನ್ನು ಒಳಗೊಳ್ಳಲಿದೆ.

Advertisement

ಸುಸಜ್ಜಿತ ಕಟ್ಟಡ ನಿರ್ಮಾಣ ಸಂಕಲ್ಪ

ಹಂಪನಕಟ್ಟೆಯ ಸರಕಾರಿ ಅಭ್ಯಾಸಿ ಪ್ರೌಢಶಾಲೆಯ ಆವರಣದಲ್ಲಿ ಕಾರ್ಯಾಚರಿಸುತ್ತಿರುವ ಬೊಕ್ಕಪಟ್ಣ ಸರಕಾರಿ ಪ.ಪೂ. ಕಾಲೇಜಿಗೆ ಸುಸಜ್ಜಿತ ಕಟ್ಟಡ ನಿರ್ಮಾಣದ ಬಗ್ಗೆ ಹಿಂದಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ 4.80 ಕೋ.ರೂ. ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದು ಅನುಮೋದನೆಗೊಂಡು ಇದೀಗ ನೂತನ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಶೀಘ್ರದಲ್ಲಿ ಇದರ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. -ವೇದವ್ಯಾಸ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ

Advertisement

Udayavani is now on Telegram. Click here to join our channel and stay updated with the latest news.

Next