Advertisement

ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ

09:39 PM Jul 01, 2019 | Team Udayavani |

ಮೈಸೂರು: ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಟ ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣ ಕಾಮಗಾರಿಯನ್ನು ಪೊಲೀಸ್‌ ಭದ್ರತೆಯಲ್ಲಿ ಕೈಗೊಳ್ಳಲಾಗಿದೆ.

Advertisement

ಮೈಸೂರಿನ ಎಚ್‌.ಡಿ.ಕೋಟೆ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 5 ಎಕರೆ ಜಮೀನು ಮಂಜೂರು ಮಾಡಿ, ವಿಷ್ಣು ಸ್ಮಾರಕ ನಿರ್ಮಾಣ ಸಮಿತಿಗೆ ಹಸ್ತಾಂತರಿಸಿತ್ತು. ಆದರೆ, ಆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ರೈತರು ಜಮೀನು ಬಿಟ್ಟು ಕೊಡುವುದಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇದರಿಂದಾಗಿ ಸ್ಮಾರಕ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು. ಆದರೆ, ಆ ರೈತರ ಹೆಸರಿಗೆ ಜಮೀನಿನ ಖಾತೆ ಆಗದಿರುವ ಹಿನ್ನೆಲೆಯಲ್ಲಿ ಕೋರ್ಟ್‌ ಇವರ ಮನವಿಗೆ ಮನ್ನಣೆ ನೀಡದೆ ಸ್ಮಾರಕ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತ್ತು. ಈ ಹಿನ್ನೆಲೆಯಲ್ಲಿ ನಟಿ ಭಾರತಿ ವಿಷ್ಣುವರ್ಧನ್‌ ಹಾಗೂ ಅಳಿಯ ಅನಿರುದ್ಧ ಅವರು ಸೋಮವಾರ ಆಗಮಿಸಿ ಸ್ಮಾರಕ ನಿರ್ಮಾಣ ಜಾಗದಲ್ಲಿ ಪೂಜೆ ನೆರವೇರಿಸಿದರು.

ಜಿಲ್ಲಾಡಳಿತದ ವತಿಯಿಂದ ಜಾಗವನ್ನು ಜೆಸಿಬಿ ಮೂಲಕ ಸ್ವತ್ಛಗೊಳಿಸುತ್ತಿದ್ದು, ಈ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ರೈತರು ಹಲವು ಬಾರಿ ಕಾಮಗಾರಿಗೆ ಅಡ್ಡಿಪಡಿಸಿದ್ದ ಹಿನ್ನೆಲೆಯಲ್ಲಿ ಪೊಲೀಸ್‌ ಭದ್ರತೆಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

ಭಾರತಿ ವಿಷ್ಣುವರ್ಧನ್‌ ಮಾತನಾಡಿ, ಸ್ಮಾರಕಕ್ಕೆ ಸರ್ಕಾರದಿಂದ ಈ ಹಣ ಹಂತ ಹಂತವಾಗಿ ಬಿಡುಗಡೆ ಆಗಲಿದೆ. ಮೊದಲು ನಾವು ಈ ಜಾಗದಲ್ಲಿದ್ದವರಿಗೆ ಮಾನವೀಯತೆ ದೃಷ್ಟಿಯಿಂದ ಹಣ ಕೊಡುವುದಾಗಿ ಹೇಳಿದ್ದೆವು. ಆದರೆ, ಅವರು ಅಂದು ಆಗೋದಿಲ್ಲ ಹೋರಾಟ ಮಾಡ್ತೀವಿ ಅಂದು ಹೋದರು. ಆದರೆ ಇದು ಸರ್ಕಾರದ ಜಾಗವಾಗಿರುವುದರಿಂದ ಈಗ ಅವರಿಗೆ ಮಾನವೀಯತೆಯಿಂದ ಹಣ ಕೊಡುವ ಅವಶ್ಯಕತೆ ಇಲ್ಲ ಎಂದರು.

Advertisement

ವಿಷ್ಣುವರ್ಧನ್‌ ಅಳಿಯ ಅನಿರುದ್ಧ ಮಾತನಾಡಿ, ಮೈಸೂರಿನಲ್ಲಿ ಸ್ಮಾರಕ ಆಗುತ್ತಿರುವುದು ತುಂಬಾ ಖುಷಿಯಾಗಿದೆ. ದಶಕಗಳ ಹೋರಾಟಕ್ಕೆ ಇಂದು ಫ‌ಲ ಸಿಕ್ಕಿದೆ ಎಂದರು. ಮೈಸೂರು ತಾಲೂಕು ತಹಶೀಲ್ದಾರ್‌ ಟಿ.ರಮೇಶ್‌ಬಾಬು, ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.

ಕಾಮಗಾರಿ ಸಂತಸ ತಂದಿದೆ: ಇದು 9 ತಿಂಗಳ ಪ್ರಸವ ಇದ್ದಂತೆ. ಮಗು ಹುಟ್ಟಿದ ನಂತರದ ಸಂತಸ ವರ್ಣಿಸಲಾಗದು, ಅದೇ ರೀತಿ ಈ ಕಾರ್ಯ ಕೂಡ. ಸ್ಮಾರಕ ವಿಷ್ಣು ಅಭಿಮಾನಿಗಳು ಹಾಗೂ ಸಾರ್ವಜನಿಕರ ಸ್ವತ್ತು. ಎಲ್ಲ ಅಡೆತಡೆ ಬಳಿಕ ವಿಷ್ಣು ಸ್ಮಾರಕ ಕಾಮಗಾರಿ ಶುರುವಾಗಿರುವುದು ಸಂತಸ ತಂದಿದೆ. ವಿಷ್ಣು ಸ್ಮಾರಕಕ್ಕೆ ಬೇಕಾದ ಯೋಜನೆಗಳೂ ನಮ್ಮಲ್ಲಿದ್ದು, 11 ಕೋಟಿ ವೆಚ್ಚ ತಗುಲಬಹುದು. ಈ ಸ್ಮಾರಕದಲ್ಲಿ ಮ್ಯೂಸಿಯಂ, ಚಲನಚಿತ್ರ ತರಬೇತಿ ಸಂಸ್ಥೆ ಎಲ್ಲವೂ ಇರಲಿದೆ ಎಂದು ಭಾರತಿ ವಿಷ್ಣುವರ್ಧನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next