Advertisement

ವಿಹಿಂಪ ಧರ್ಮಸಿರಿ ಉದ್ಘಾಟನೆಗೆ ಸಜ್ಜು

12:54 PM Jun 03, 2022 | Team Udayavani |

ಹುಬ್ಬಳ್ಳಿ: ವಿಶ್ವ ಹಿಂದೂ ಪರಿಷದ್‌ನ ರಾಜ್ಯದ ಅತಿದೊಡ್ಡ ಹಾಗೂ ವಿವಿಧ ಸೌಲಭ್ಯಗಳನ್ನೊಳಗೊಂಡ ಸೇವೆ ಹಾಗೂ ಪ್ರೇರಣೆ ಉದ್ದೇಶದ “ಧರ್ಮಸಿರಿ’ ಭವ್ಯಸೌಧ ಶುಕ್ರವಾರ ಹುಬ್ಬಳ್ಳಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.

Advertisement

ವಿಶ್ವಹಿಂದೂ ಪರಿಷದ್‌ ಪ್ರಾಂತ ಕಚೇರಿ ಹುಬ್ಬಳ್ಳಿಯಲ್ಲಿದ್ದು, “ಹಿಂದೂ ಭವನ’ದಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು. ಸೇವಾಕಾರ್ಯ, ಕಾರ್ಯಕರ್ತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಜತೆಗೆ ಇನ್ನಷ್ಟು ಸೇವಾ ಕಾರ್ಯಕ್ಕೆ ಪೂರಕವಾಗುವ, ಹೆಚ್ಚಿನ ಸೌಲಭ್ಯಗಳನ್ನೊಳಗೊಂಡ ಭವನ ನಿರ್ಮಾಣಕ್ಕೆ ಚಿಂತನೆ ನಡೆದಿತ್ತು.
ವಿಶ್ವ ಹಿಂದೂ ಪರಿಷದ್‌ ಉತ್ತರ ಕರ್ನಾಟಕ ಟ್ರಸ್ಟ್‌, ಪ್ರೇರಣಾ ಸೇವಾ ಸಂಸ್ಥೆ ಕಾರ್ಯಕ್ಕೆ ಅನೇಕ ದೇಶಪ್ರೇಮಿ, ದಾನಿಗಳು ಕೈಜೋಡಿಸಿದ್ದರಿಂದ “ಧರ್ಮಸಿರಿ’ ಭವನ ತಲೆಎತ್ತಿದೆ. ಹುಬ್ಬಳ್ಳಿಯ ಪ್ರಾಂತ ಕಚೇರಿ ಉತ್ತರ ಕರ್ನಾಟಕದಲ್ಲಿ ವಿಎಚ್‌ ಪಿಯಿಂದ ನಡೆಯುವ ರಾಷ್ಟ್ರರಕ್ಷಣೆ, ಧರ್ಮರಕ್ಷಣೆ, ಶಿಕ್ಷಣ, ಆರೋಗ್ಯ ಇನ್ನಿತರೆ ಸೇವಾಕಾರ್ಯಗಳ ಬಗ್ಗೆ ಮಾರ್ಗದರ್ಶನ, ಯೋಜನೆ, ಅನುಷ್ಠಾನದ ನಿಟ್ಟಿನಲ್ಲಿ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸುತ್ತದೆ.

13,500 ಚ.ಅಡಿ ಭವ್ಯ ಭವನ: ವಿಶ್ವ ಹಿಂದೂ ಪರಿಷದ್‌ ರಾಷ್ಟ್ರಮಟ್ಟದಲ್ಲಿ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದಿದೆ. ನಂದಗೋಕುಲ ಹೆಸರಿನಲ್ಲಿ ಶಾಲೆಗಳಿಗೆ ಪ್ರೇರಣೆ ಹಾಗೂ ಮಾರ್ಗದರ್ಶನ ಕಾರ್ಯದಲ್ಲಿ ತೊಡಗಿದೆ. ಬೀದರ ಜಿಲ್ಲೆಯಲ್ಲಿ ಮೂರು ಕಡೆ ಶಾಲೆ ಹೊಂದಿದ್ದು, ಕಲಬುರಗಿಯಲ್ಲೂ ಶಾಲೆ ಇದೆ.

ಕಂಪ್ಯೂಟರ್‌, ಹೊಲಿಗೆ ತರಬೇತಿ ಸೇರಿದಂತೆ ವಿವಿಧ ಸೇವಾ ಕಾರ್ಯ ಕೈಗೊಳ್ಳುತ್ತಿದೆ. ಇಂತಹ ಸೇವಾ ಕಾರ್ಯಗಳಿಗೆ ಇನ್ನಷ್ಟು ಪ್ರೇರಣೆ ನೀಡಲು ವಿವಿಧ ಸೌಲಭ್ಯಗಳ ಭವನವನ್ನು ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗಿದೆ.

ವಿಎಚ್‌ಪಿ ಉತ್ತರ ಪ್ರಾಂತ ಕಾರ್ಯಾಲಯ “ಧರ್ಮಸಿರಿ’ ಕಟ್ಟಡವನ್ನು ಇಲ್ಲಿನ ವಿದ್ಯಾನಗರದ ಶಿರೂರು ಪಾರ್ಕ್‌ನ ಅಯ್ಯಪ್ಪಸ್ವಾಮಿ ದೇವಸ್ಥಾನ ಹಿಂಭಾಗದಲ್ಲಿ ನಿರ್ಮಿಸಲಾಗಿದೆ. ಸುಮಾರು 13,500 ಚದರ ಅಡಿ ವಿಸ್ತಾರದಲ್ಲಿ ಭವ್ಯ ಭವನ ಕಂಗೊಳಿಸುತ್ತಿದೆ.

Advertisement

ಬೆಂಗಳೂರಿನಲ್ಲಿ ವಿಎಚ್‌ಪಿ ಪ್ರಾಂತ ಕಚೇರಿ “ಧರ್ಮಶ್ರೀ’ ಸುಮಾರು 40 ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದರೂ ಹುಬ್ಬಳ್ಳಿಯ “ಧರ್ಮಸಿರಿ’ ಕಟ್ಟಡ ರಾಜ್ಯದಲ್ಲಿಯೇ ಅತಿ ದೊಡ್ಡದಾಗಿದೆ. ನೆಲಮಹಡಿ ಸೇರಿದಂತೆ ಒಟ್ಟು ಮೂರು ಮಹಡಿಯ ಕಟ್ಟಡ ಇದಾಗಿದೆ. ಕೆಳ ಮಹಡಿ ಪೂರ್ಣ ಪ್ರಮಾಣದಲ್ಲಿ ಸೇವಾ ಚಟುವಟಿಕೆಗಳಿಗೆಂದು ಇರಿಸಲಾಗುತ್ತಿದೆ. ಇದರಲ್ಲಿ ವಿಎಚ್‌ಪಿಯ ವಿವಿಧ ಚಟುವಟಿಕೆ ಹಾಗೂ ಸೇವಾ ಕಾರ್ಯಗಳಿಗೆ ಪೂರಕ ಕೆಲಸಗಳು ನಡೆಯಲಿವೆ.

ಗ್ರಂಥಾಲಯ, ಕಂಪ್ಯೂಟರ್‌ ತರಬೇತಿ ಇದ್ದು, ಹೊಲಿಗೆ ತರಬೇತಿ ಆರಂಭಿಸಲು ಯೋಜಿಸಲಾಗಿದೆ. ಉಳಿದ ಎರಡು ಮಹಡಿಗಳ ಪೈಕಿ ಒಂದರಲ್ಲಿ ಪಿಯು, ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿ-ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸುಮಾರು 15-20 ಬಡ ವಿದ್ಯಾರ್ಥಿಗಳಿಗೆ ಆಸರೆ ನೀಡಲಾಗುತ್ತಿದೆ. ಇನ್ನುಳಿದಂತೆ ವಿಎಚ್‌ಪಿ ಪೂರ್ಣಾವಧಿ ಕಾರ್ಯಕರ್ತರು, ಪ್ರಮುಖರ ವಾಸ್ತವ್ಯ, ಹೊರಗಡೆಯಿಂದ ಬರುವ ಕಾರ್ಯಕರ್ತರು ತಂಗಲು, ತರಬೇತಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಚೈತನ್ಯಸಿಂಧು ಸ್ಮರಣ ಸಂಚಿಕೆ: ವಿಶ್ವ ಹಿಂದೂ ಪರಿಷದ್‌ 1964ರಲ್ಲಿ ಆರಂಭವಾಗಿ ಇಲ್ಲಿಯವರೆಗೆ ಅನೇಕ ಸೇವಾ ಹಾಗೂ ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿದೆ. ಹೀಗೆ ಸರಿಸುಮಾರು 58 ವರ್ಷಗಳ ಸೇವಾ ಕಾರ್ಯದಲ್ಲಿ ತೊಡಗಿಕೊಂಡ ಪ್ರಮುಖರು ಹಾಗೂ ಕಾರ್ಯಕರ್ತರ ಸೇವೆ ಸ್ಮರಿಸಲು, ಹೊಸಬರಿಗೆ ಪ್ರೇರಣಾ ಶಕ್ತಿ ತುಂಬಲು ಇದೇ ವೇಳೆ “ಚೈತನ್ಯ ಸಿಂಧು’ ಸ್ಮರಣ ಸಂಚಿಕೆಯನ್ನೂ ಹೊರತರುತ್ತಿದೆ. ಸುಮಾರು 80-85 ಪುಟಗಳ ಈ ಸಂಚಿಕೆಯಲ್ಲಿ ಸಂಘಟನೆ ಬೆಳೆಯಲು ಶಕ್ತಿಯಾದವರು, ಜನರ ಸಂಕಷ್ಟ, ನೋವುಗಳಿಗೆ ಸ್ಪಂದಿಸಿ ನೆರವಾಗಿ ಸೇವಾ ಪರಂಪರೆಯನ್ನು ಕೊಡುಗೆಯಾಗಿ ನೀಡಿದ ಹಿರಿಯ ಕಾರ್ಯಕರ್ತರು, ಪ್ರಮುಖರನ್ನು ಸ್ಮರಿಸಲಾಗಿದೆ.

ಉತ್ತರ ಪ್ರಾಂತದ ಕಚೇರಿ ನಿರ್ವಹಣೆಗೆ ಅನುಕೂಲವಾಗಲು ಹಾಗೂ ಇನ್ನಷ್ಟು ಸೇವಾ ಕಾರ್ಯ ವಿಸ್ತರಿಸುವ ಉದ್ದೇಶದಿಂದ “ಧರ್ಮಸಿರಿ’ ನೂತನ ಕಟ್ಟಡ ನಿರ್ಮಿಸಲಾಗಿದೆ. ಜತೆಗೆ ಸಂಘಟನೆ ಬೆಳೆಯಲು ಶಕ್ತಿ ತುಂಬಿದ, ನಿಸ್ವಾರ್ಥ ಚಿಂತನೆಯೊಂದಿಗೆ ಸೇವಾಕಾರ್ಯ ಹಾಗೂ ಸಂಕಷ್ಟದಲ್ಲಿ ನೆರವಿನ ಕಾರ್ಯ ಮಾಡಿದ ಹಿರಿಯ ಕಾರ್ಯಕರ್ತರನ್ನು ಗೌರವಿಸುವ ನಿಟ್ಟಿನಲ್ಲಿ “ಚೈತನ್ಯಸಿಂಧು’ ಸ್ಮರಣ ಸಂಚಿಕೆ ಹೊರತರಲಾಗುತ್ತಿದೆ. “ಧರ್ಮಸಿರಿ’ ಕೇವಲ ಕಟ್ಟಡವಷ್ಟೇ ಅಲ್ಲ, ಅದೊಂದು ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸಲಿದೆ. ಕೆ.ಗೋವರ್ಧನರಾವ್‌, ಪ್ರಾಂತ ಕಾರ್ಯದರ್ಶಿ ವಿಎಚ್‌ಪಿ.

„ ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next