ಬಂಟ್ವಾಳ: ಶಾಲಾ ಆವರಣದಲ್ಲೇ ಬ್ರಹ್ಮಾಂಡ ದರ್ಶನ ನೀಡುವ ಆರ್ಯಭಟ ಸಂಚಾರಿ ಪ್ಲಾನೆಟೋರಿಯಮ್‌ಗೆ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಸೋಮವಾರ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಗರದ ವಿದ್ಯಾರ್ಥಿಗಳಿಗೆ ಮಾತ್ರ ತಾರಾಲಯದ ಮೂಲಕ ಸೌರಮಂಡಲಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಇತ್ತು. ಆದರೆ ರೋಟರಿ ಕ್ಲಬ್ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲಾ ಅಂಗಳದಲ್ಲೇ ಬಾಹ್ಯಾಕಾಶ ವೀಕ್ಷಿಸುವ ಅವಕಾಶವನ್ನು ಒದಗಿಸಿಕೊಟ್ಟಿದೆ. ಎಳೆಯ ವಯಸ್ಸಿನಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆ ವೇಗವಾಗಿರುವುದರಿಂದ ವಿಜ್ಞಾನದ ಕೌತುಕಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಬಂಟ್ವಾಳ ರೋಟರಿ ಸುವರ್ಣ ವರ್ಷಾಚರಣೆಯ ಸಮಿತಿ ಸಂಚಾಲಕ ಡಾ| ರಮೇಶಾನಂದ ಸೋಮಾಯಾಜಿ, ರೋಟರಿ ಕ್ಲಬ್ ಸಹಾಯಕ ಗವರ್ನರ್ ಎನ್. ಪ್ರಕಾಶ್ ಕಾರಂತ್ ಶುಭ ಹಾರೈಸಿದರು. ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಾರದ ಪ್ರೌಢಶಾಲೆಯ ಸಂಚಾಲಕ ವೇ| ಮೂ| ಜನಾರ್ದನ ಭಟ್, ಎಸ್‌ಎಲ್‌ಎನ್‌ಪಿ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಸುಬೋಧ್ ಪ್ರಭು, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಹಿಂದೆಲ್ಲ ಬಾಹ್ಯಾಕಾಶದ ಬಗ್ಗೆ ಪುಸ್ತಕದಲ್ಲಿ ಓದುವ ಅವಕಾಶ ಮಾತ್ರ ಇತ್ತು. ಆದರೆ ಇಂದು ವಿಜ್ಞಾನ ಕ್ಷೇತ್ರ ಮುಂದುವರೆದಿದ್ದು ನಮಗೆ ಬೇಕಾದ ವಿಷಯಗಳನ್ನು ಕ್ಷಣಾರ್ಧದಲ್ಲಿ ನೋಡುವ ಅವಕಾಶ ಒದಗಿ ಬಂದಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ಮಾತನಾಡಿ, ಶಾಲೆಯಲ್ಲಿಯೇ ಬಾಹ್ಯಾಕಾಶದ ಬಗ್ಗೆ ತಿಳಿದುಕೊಳ್ಳುವ ಮೊಬೈಲ್ ಪ್ಲಾನೆ ಟೋರಿಯಂ ಜಿಲ್ಲೆಯಲ್ಲಿಯೇ ವಿನೂ ತನ ಪ್ರಯೋಗವಾಗಿದೆ. ಈ ಮಿನಿ ಪ್ಲಾನೆಟೋರಿಯಂನ ಒಳಗೆ ಹೋದರೆ ಇಡೀ ಜಗತ್ತಿನ ಪರಿಚಯವಾಗುತ್ತದೆ ಎಂದರು.