Advertisement

ಇನ್ನೊಬ್ಬರಿಗೆ ಬದುಕು ಕಟ್ಟಿಕೊಳ್ಳಲು ಅನುವಾಗುವುದೇ ಜೀವನ: ಪೇಜಾವರ ಶ್ರೀ

12:41 AM Apr 22, 2024 | Team Udayavani |

ಉಡುಪಿ: ಯಾರ ಬದುಕು ಹತ್ತು ಮಂದಿಯ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೋ ಅದು ನಿಜವಾದ ಬದುಕು. ವ್ಯಕ್ತಿ ದಿನ ಕಳೆದಂತೆ ಸಾವಿಗೆ ಹತ್ತಿರವಾಗುತ್ತಾನೆ. ಆದರೆ ಸಮಾಜದ ನಡುವೆ ಇರುವ ಸಂಘಟನೆ ಗಟ್ಟಿಯಾಗಿ ಬೆಳೆಯುತ್ತ ಸಮಾಜಕ್ಕೆ ಹತ್ತಿರವಾಗುತ್ತದೆ ಎಂದು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.

Advertisement

ಶಾರದಾ ಕಲ್ಯಾಣ ಮಂಟಪ ರಸ್ತೆಯಲ್ಲಿ ನಿರ್ಮಿಸಲಾದ ಯಕ್ಷಗಾನ ಕಲಾರಂಗದ ನೂತನ ಕಟ್ಟಡ “ಇನ್ಫೋಸಿಸ್‌ ಫೌಂಡೇಶನ್‌ ಯಕ್ಷಗಾನ ಡೆವಲಪ್‌ಮೆಂಟ್‌ ಆ್ಯಂಡ್‌ ಟ್ರೈನಿಂಗ್‌ ರಿಸರ್ಚ್‌ ಸೆಂಟರ್‌ (ಐವೈಸಿ)ನ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ರವಿವಾರ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.

ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಕಲಾರಂಗಕ್ಕೆ ದಾನಿಗಳು ನಿರಂತರವಾಗಿ ಸಹಾಯಹಸ್ತ ಚಾಚಲು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಸಂಸ್ಥೆಯಿಂದ ಸಮಾಜಕ್ಕೆ ಇನ್ನಷ್ಟು ಕೊಡುಗೆ ಲಭಿಸಲಿ ಎಂದು ಹರಸಿದರು.

ಇನ್ಫೋಸಿಸ್‌ ಫೌಂಡೇಶನ್‌ನ ವಿಶ್ವಸ್ತ ಸುನಿಲ್‌ ಕುಮಾರ್‌ ಧಾರೇಶ್ವರ್‌ ಉದ್ಘಾಟಿಸಿ, ಯಕ್ಷಗಾನವು ಮನೋ ರಂಜನೆಯೊಂದಿಗೆ ಶಾಸ್ತ್ರೀಯ ವಿಚಾರಧಾರೆಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. ಕ್ಷೀಣಿಸುತ್ತಿರುವ ಕಲಾ ಪೋಷಕರಿಂದಾಗಿ ಪ್ರಸ್ತುತ ಯಕ್ಷಗಾನ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಕಲೆ ಮತ್ತು ಕಲಾಪೋಷಣೆ ಜತೆಯಾಗಿ ಹೆಜ್ಜೆ ಇರಿಸಿದಾಗ ಕಲೆಯನ್ನು ಉಳಿಸಿ ಬೆಳೆಸಬಹುದು. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಕಲಾ ಪೋಷಕರೆಲ್ಲರೂ ಪ್ರಯತ್ನಶೀಲರಾಗಬೇಕಾಗಿದೆ ಎಂದರು.

ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಾತನಾಡಿ, ಸತøಯತ್ನ ಬಿಡದೆ ಮುಂದುವರಿದಾಗ ಯಾವುದೇ ಕೆಲಸವನ್ನು ಪೂರ್ತಿಗೊಳಿಸಬಹುದು ಎಂಬುದಕ್ಕೆ ಕಲಾರಂಗದ ಸಾಧನಾ ಕಾರ್ಯಗಳು ಸಾಕ್ಷಿಯಾಗುತ್ತವೆ. ಕಲೆ ಉಳಿಸಲು ಯುವ ಕಲಾವಿದರಿಗೆ ಈ ಸಂಸ್ಥೆ ಸ್ಫೂರ್ತಿಯಾಗಲಿ ಎಂದು ಹರಸಿದರು.

Advertisement

ಶ್ರೀ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಫ‌ಲವನ್ನು ಬಯಸದೇ ಕೆಲಸ ಮಾಡಿದಾಗ, ದೇವರೇ ಫ‌ಲವನ್ನು ಕೊಡುತ್ತಾರೆ ಎಂಬುದಕ್ಕೆ ಯಕ್ಷ ಕಲಾರಂಗ ಉತ್ತಮ ನಿದರ್ಶನ. ಸಂಸ್ಥೆಯ ನಿಷ್ಕಾಮ ಕಾರ್ಯಕ್ಕೆ ನೂತನ ಕಟ್ಟಡದ ಮೂಲಕ ಫ‌ಲ ಸಿಕ್ಕಿದೆ ಎಂದು ಅನುಗ್ರಹ ಸಂದೇಶ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಶುಭ ಹಾರೈಸಿದರು. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಶುಭಾಶಂಸನೆಗೈದರು. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌, ಬೆಂಗಳೂರಿನ ಉದ್ಯಮಿ ರಮೇಶ್ಚಂದ್ರ ಹೆಗ್ಡೆ, ಕಲಾರಂಗದ ಉಪಾಧ್ಯಕ್ಷರಾದ ಎಸ್‌.ವಿ. ಭಟ್‌, ಕಿಶನ್‌ ಹೆಗ್ಡೆ ಪಳ್ಳಿ, ವಿ.ಜಿ. ಶೆಟ್ಟಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಮುರಲಿ ಕಡೆಕಾರ್‌ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ತಿಳಿಸಿ, ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.

ಗೌರವಾಭಿನಂದನೆ
ಯತಿತ್ರಯರು ಇನ್ಫೋಸಿಸ್‌ ಫೌಂಡೇಶನ್‌ ಪರವಾಗಿ ಸುನಿಲ್‌ ಕುಮಾರ್‌ ಧಾರೇಶ್ವರ್‌ ಅವರಿಗೆ ಯಕ್ಷಗಾನದ ಬೆಳ್ಳಿಯ ಕಿರೀಟದ ಪ್ರತಿಕ್ರತಿ ನೀಡಿ ಗೌರವಿಸಿದರು. ಡಾ| ಎಚ್‌.ಎಸ್‌. ಬಲ್ಲಾಳ್‌, ಡಾ| ಜಿ. ಶಂಕರ್‌, ಡಾ| ನಿ.ಬೀ. ವಿಜಯ ಬಲ್ಲಾಳ್‌, ರಮೇಶ್ಚಂದ್ರ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು. ತೆಂಕುತಿಟ್ಟಿನ ಸಭಾಲಕ್ಷಣ, ಬಡಗುತಿಟ್ಟಿನ ಬಾಲಗೋಪಾಲ ನರ್ತನ ನಡೆಯಿತು. ಸಭೆಯ ಬಳಿಕ ಒಡಿಸ್ಸಿ ನೃತ್ಯ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next