Advertisement

ನಾಳೆ ನೇಚರ್‌ ಫ‌ಸ್ಟ್‌ ಇಕೋ ವಿಲೇಜ್‌ ಉದ್ಘಾಟನೆ

03:33 PM Apr 23, 2017 | |

ಧಾರವಾಡ: ಯಾವುದೇ ಅತ್ಯಾಧುನಿಕ ಸೌಕರ್ಯಗಳಿಲ್ಲದೆ, ಪರಿಸರ ನಿರ್ಮಿತ ವಸ್ತುಗಳ ಮಧ್ಯದಲ್ಲೇ ಅತ್ಯಂತ ಸುಂದರ ಹಾಗೂ ಸರಳ ಜೀವನ ಬದುಕುವ ಕಲೆಯನ್ನು ನಾಡಿನ ಜನತೆಗೆ ಪರಿಚಯಿಸುವ ಉದ್ದೇಶದಿಂದ ನೇಚರ್‌ ಫಸ್ಟ್‌ ಇಕೋ ವಿಲೇಜ್‌ ತಲೆ ಎತ್ತಿದೆ ಎಂದು ನೇಚರ್‌ ಫಸ್ಟ್‌ ಇಕೋ ವಿಲೇಜ್‌ ಸಂಸ್ಥಾಪಕ ಪಿ.ವಿ. ಹಿರೇಮಠ ಹೇಳಿದರು. 

Advertisement

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದಿಂದ 14 ಕಿಲೋ ಮೀಟರ್‌ ದೂರದಲ್ಲಿರುವ ಹಳ್ಳಿಗೇರಿ ಕ್ರಾಸ್‌ನಲ್ಲಿ ಎಂಟು ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ನೇಚರ್‌ ಫೆಸ್ಟ್‌ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಇಂತಹ ವಿನೂತನ ಪ್ರಯೋಗ ಮಾಡಲಾಗಿದೆ.

ಸುಸ್ಥಿರ ಬದುಕಿನ ಮಹತ್ವ ಸಾರುವ ಹಾಗೂ ಪ್ರತಿಯೊಬ್ಬರಿಗೂ ಪ್ರಾಯೋಗಿಕವಾಗಿ ಪರಿಸರ ಸ್ನೇಹಿ ಜೀವನ ಅಳವಡಿಸಿಕೊಳ್ಳಲು ಅವಶ್ಯವಿರುವ ಪರಿಸರ ಶಿಕ್ಷಣ, ಅದರ ಬಳಕೆಗೆ ಬೇಕಾದ ಮಾನದಂಡಗಳನ್ನು ಈ ನೇಚರ್‌ ಫಸ್ಟ್‌ ಇಕೋ ವಿಲೇಜ್‌ ಒಳಗೊಂಡಿದೆ ಎಂದರು. 

ನಮ್ಮ ಸುತ್ತಮುತ್ತ ಲಭ್ಯವಿರುವ ಅನೇಕ ಸಂಪನ್ಮೂಲ ಬಳಸಿಕೊಂಡು ಅದರ ಮೂಲಕ ಅತಿ ಕಡಿಮೆ ಖರ್ಚಿನಲ್ಲಿ ಪರಿಸರ ಸ್ನೇಹಿ ಜೀವನ ನಡೆಸುವುದು. ಅದರಲ್ಲೂ ವಿಶೇಷವಾಗಿ ನಾವು ದಿನನಿತ್ಯ ಉಪಯೋಗಿಸಿ ಬಿಟ್ಟ ತರಕಾರಿ ಹಾಗೂ ಮುಸರೆಯಿಂದ ಜೈವಿಕ ಗೊಬ್ಬರ ತಯಾರಿಸುವುದು,

ಅತಿ ಕಡಿಮೆ ನೀರಿನಲ್ಲಿ ಕೃಷಿ, ಮಳೆ ನೀರಿನ ಮರು ಬಳಕೆ, ವಿದ್ಯುತ್‌ ಮೇಲೆ ಹೆಚ್ಚು ಅವಲಂಬಿತರಾಗದೆ ಜೈವಿಕ ಇಂಧನ ಹಾಗೂ ಸೋಲಾರ್‌ ಬಳಕೆ ಪ್ರಮಾಣ ಹೆಚ್ಚಿಸುವುದು ಸೇರಿದಂತೆ ಒಬ್ಬ ಮನುಷ್ಯ ನಿಸರ್ಗದ ಮಧ್ಯೆ, ನಿಸರ್ಗಕ್ಕೆ ತೊಂದರೆ ಕೊಡದಂತೆ ಹೇಗೆಲ್ಲಾ ಬದುಕು ಕಟ್ಟಿಕೊಳ್ಳಬಲ್ಲ ಎಂಬ ಮಾದರಿಯನ್ನು ಈ ನೇಚರ್‌ ಫಸ್ಟ್‌ ಇಕೋ ವಿಲೇಜ್‌ನಲ್ಲಿ ರೂಪಿಸಲಾಗಿದೆ ಎಂದು ವಿವರಿಸಿದರು. 

Advertisement

ಔಷಧಿ ವನ: ಸುಮಾರು 135 ಬಲು ಅಪರೂಪದ ಔಷಧಿಧಿ ಗಿಡಗಳನ್ನು ಜನರಿಗೆ ಇಕೋ ವಿಲೇಜ್‌ನಲ್ಲಿ ಪರಿಚಯಿಸಲಾಗುವುದು. ಅವುಗಳ ಮಹತ್ವ, ಬಳಕೆ ವಿಧಾನ, ಅವುಗಳ ಪಾಲನೆ, ಪೋಷಣೆ ಮಾಹಿತಿ ನೀಡಲಾಗುವುದು. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಜನರಿಂದ ಕಣ್ಮರೆಯಾಗುತ್ತಿರುವ ಬೇರೆ ಬೇರೆ 120 ಹಣ್ಣಿನ ಗಿಡಗಳನ್ನು ಇಲ್ಲಿ ಬೆಳೆಯಲಾಗಿದೆ ಎಂದರು. 

ತರಕಾರಿ ಕೈತೋಟ, ಜೈವಿಕ ಈಜುಗೋಳ, ಸಾವಯವ ಆಹಾರ ಪದ್ಧತಿ ಬಳಕೆ, ಪರಿಸರದತ್ತ ಜನರನ್ನು ಸೆಳೆಯುವುದಕ್ಕೆ ಅಗತ್ಯವಾದ ಎಲ್ಲಾ ಪ್ರಯೋಗಗಳನ್ನು ಇಲ್ಲಿ ಮಾಡಲಾಗಿದೆ ಎಂದರು. ಪರಿಸರ ಶಾಲೆ: ಇಲ್ಲಿ ಬರುವವರಿಗೆ ಒಂದು ಗಂಟೆಗಳ ಕಾಲ ಪರಿಸರ ಸ್ನೇಹಿ ತಿಳಿವಳಿಕೆ ನೀಡಲಾಗುವುದು.

ಶಾಲೆ ಮಕ್ಕಳಿಗೆ ಭೂಮಿಗೆ ಬೀಜ ಬಿತ್ತುವ ವಿಧಾನ, ಸಸಿ ನೆಡುವ ವಿಧಾನ ಸ್ವತಃ ಅವರೇ ಪ್ರಾಯೋಗಿಕವಾಗಿ ಮಾಡಿ ನೋಡಿ ನಲಿಯುವ ಅವಕಾಶ, ಜೊತೆಗೆ ಯಾವ್ಯಾವ ಬೀಜಗಳು ಭೂಮಿ ಮೇಲೆ ಹಾಗೂ ಒಳಗೆ ಬೆಳೆಯಲಾಗುತ್ತದೆ ಎಂಬುದರ ಬಗ್ಗೆ ತಿಳಿವಳಿಕೆ ನೀಡಲಾಗುವುದು.

ಹುಲ್ಲು ಹಾಸಿಗೆ ಹಾಗೂ ಈಜುಕೊಳದ ಸುತ್ತ ಕುಳಿತು ಸುಮಾರು 500 ಜನ ಕಾರ್ಯಕ್ರಮ ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗಿದೆ  ಎಂದರು. ಪ್ರಕಾಶ ಗೌಡರ, ಚಂದ್ರಶೇಖರ ಬೈರಪ್ಪನವರ, ಉಪಾಧ್ಯಕ್ಷರು, ಶಿವಾಜಿ ಸೂರ್ಯವಂಶಿ, ಅಸ್ಲಂಜಹಾನ ಅಬ್ಬಿಹಾಳ, ಅನೀಲ ಅಳ್ಳೊಳ್ಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next