Advertisement

ಕಲಾ ಪ್ರಪಂಚದ ಪೂರಕ ಕಾರ್ಯವಾಗಲಿ:ನಾಗಾಭರಣ

11:33 AM Feb 03, 2019 | Team Udayavani |

ಹೊನ್ನಾವರ: ಮನವನ್ನು ವಿಕಾಸಗೊಳಿಸುವ, ಉಲ್ಲಸಿತಗೊಳಿಸುವ, ವಾದಿ ಸಂವಾದಿಗಳಿಂದ ಹೊರತಾದ ಆತ್ಮವಾದಿಯಾಗಿರುವ ಕಲಾ ಮಾಧ್ಯಮವನ್ನು ಶೈಕ್ಷಣಿಕ ವ್ಯವಸ್ಥೆಯಿಂದ ದೂರವಿಟ್ಟಷ್ಟೂ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಕಂದಕ ಸೃಷ್ಟಿಯಾಗುತ್ತಿದೆ ಎಂದು ಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಕಳವಳ ವ್ಯಕ್ತಪಡಿಸಿದರು.

Advertisement

ತಾಲೂಕಿನ ಗುಣವಂತೆಯಲ್ಲಿ ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಆಶ್ರಯದಲ್ಲಿ 10ನೇ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಉದ್ಘಾಟಿಸಿದ ಅವರು, ಪ್ರತಿಯೊಂದೂ ಮಾರುಕಟ್ಟೆ ಸರಕಾಗಿರುವ ಇಂದಿನ ದಿನಗಳಲ್ಲಿ ಕಲಾ ಮಾಧ್ಯಮ ನಮ್ಮದನ್ನಾಗಿಟ್ಟುಕೊಳ್ಳುವ, ನಮ್ಮತನವನ್ನು ಉಳಿಸಿಕೊಳ್ಳುವ ಕಾರ್ಯವಾಗಬೇಕು ಎಂದರು. ತಂತ್ರಜ್ಞಾನದ ಈದಿನಗಳ ಎಲ್ಲ ಕಲೆ ಕೌಶಲ್ಯವನ್ನು ನುಂಗಿಹಾಕುವಲ್ಲಿ ದೃಶ್ಯ ಮಾಧ್ಯಮ ಬ್ರಹ್ಮರಾಕ್ಷಸನಂತಾಗಿದೆ. ಇದರಿಂದ ಪಾರಾಘಳೂ ಯಂತ್ರ ಸಂಬಂಧಿತ ಕ್ರಿಯೆಯತ್ತ ಮುಖ ಮಾಡದೇ ಮನುಷ್ಯ ಸಂಬಂಧಿತ ಕಲೆಗಳತ್ತ ಮುಖಮಾಡಬೇಕು. ನಮ್ಮತನವನ್ನು ನಾವು ಉಳಿಸಿಕೊಳ್ಳುವತ್ತ ಗ್ಲೋಬಲ್‌ ಆಗಬೇಕು ಎಂದರು. ಯಕ್ಷಗಾನದ ಸೌಂದರ್ಯವನ್ನು ನನ್ನ ಮನಸ್ಸಿನ ಆಳದಲ್ಲಿ ತುಂಬಿದವರು ಕೆರೆಮನೆ ಶಂಭು ಹೆಗಡೆ ಮತ್ತು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು. ಇಂತಹ ಸ್ಪೂರ್ತಿದಾತರ ಸ್ಪೂರ್ತಿಯ ಸೆಲೆ ತನ್ನ ಸಾಧನೆಗೆ ಪ್ರೇರಣೆ ಎಂದು ಸ್ಮರಿಸಿದರು.

ಕಲಾಪ್ರಪಂಚದ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮವನ್ನು ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಸಂಯೋಜಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೂಲಸತ್ವವನ್ನು ಬಿಟ್ಟು ಹಣೆಪಟ್ಟಿ ಇಡುತ್ತೇವೆ. ಯಾವ ಹಣೆಪಟ್ಟಿಗೂ ಒಳಪಡದೇ ನಮ್ಮ ಮನಸ್ಸನ್ನು ಮುಟ್ಟುವ ಕಲೆ ಜಾನಪದ ಕಲಾ ಮಾಧ್ಯಮ. ಇದು ಎಲ್ಲದರ ಜೊತೆಗೆ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ ವಾತಾವರಣ ಸೃಷ್ಠಿಸುತ್ತದೆ ಎಂದರು.

ಯಕ್ಷಗಾನ ಕಲಾವಿದ ಡಾ| ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿ, ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ದೇಶದ ಮಾದರೀಯ ಒಂದು ಪ್ರಕಲ್ಪ ಎಂದರು. ಮುಖ್ಯ ಅತಿಥಿ ಪತ್ರಕರ್ತ, ಅಂಕಣಕಾರ ಜೋಗಿ ಮಾತನಾಡಿ ನಾವೇ ಸೃಷ್ಠಿಸಿಕೊಂಡ ಒತ್ತಡಗಳ ಚಕ್ರವ್ಯೂಹದಿಂದ ಹೇಗೆ ಹೊರಬರಬೇಕು ಎಂಬ ಮಾರ್ಗ ಹೇಳಿಕೊಡಲು ಕಲೆ ಬೇಕು ಎಂದರು. ಬೆಂಗಳೂರಿನ ಉದ್ಯಮಿ ಆನಂದ ಭಟ್ ಮಾತನಾಡಿ ಯಕ್ಷಗಾನ ಭಾರತೀಯ ಸಂಸ್ಕೃತಿಯ ರಾಯಭಾರಿ. ರಾಮಾಯಣ, ಮಹಾಭಾರತ ನಮ್ಮ ಸಂಸ್ಕೃತಿಯ ಬುನಾದಿ. ಇಂತಹ ಮಹೋನ್ನತ ಆದರ್ಶಗಳನ್ನು ಜನತೆಗೆ ತಲುಪಿಸುವಲ್ಲಿ ಯಕ್ಷಗಾನ ಕಲೆ ಒಂದು ಅರ್ಥಪೂರ್ಣ ಮಾಧ್ಯಮವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ದೇವಿ ಮಹಾಬಲ ಗೌಡ ಉಪಸ್ಥಿತರಿದ್ದರು. ಯಕ್ಷಗಾನ ಡಿವಿಡಿಯನ್ನು ಬಿಡುಗಡೆಗೊಳಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next