Advertisement

ಸ್ಮಶಾನಗಳ ಅಭಿವೃದ್ಧಿ ಆಂದೋಲನಕ್ಕೆ ಚಾಲನೆ

08:43 PM Dec 11, 2019 | Lakshmi GovindaRaj |

ಮೈಸೂರು: ಮೈಸೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಮತ್ತು ಜಮೀನು ಮಂಜೂರಾದರೂ ಅಭಿವೃದ್ಧಿಗೊಳ್ಳದ ಸ್ಮಶಾನಗಳ ಅಭಿವೃದ್ಧಿ ಮತ್ತು ಹದ್ದುಬಸ್ತುನಲ್ಲಿಡುವ ಆಂದೋಲನಕ್ಕೆ ಶಾಸಕ ಜಿ.ಟಿ ದೇವೇಗೌಡ ಚಾಲನೆ ನೀಡಿದರು.

Advertisement

ಬುಧವಾರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಯಪುರ ಗ್ರಾಮದ ಸರ್ವೇ ನಂ 23 ಮತ್ತು 10ರಲ್ಲಿ 0.20 ಗುಂಟೆ ಸ್ಮಶಾನಕ್ಕೆ ಮಂಜುರಾಗಿದ್ದ ಜಮೀನನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ತಾಲೂಕಿನ 30 ಗ್ರಾಮಗಳಲ್ಲಿ ಸ್ಮಶಾನಗಳ ಅಭಿವೃದ್ಧಿಗೆ ಇಂದಿನಿಂದ(ಬುಧವಾರ) ಆಂದೋಲನ ಆರಂಭಗೊಳ್ಳಲಿದ್ದು, ವರುಣಾ ಕ್ಷೇತ್ರದಲ್ಲಿ ಶಾಸಕ ಡಾ.ಯತೀಂದ್ರ ಅವರು ಚಾಲನೆ ನೀಡಲಿದ್ದು, ತಾಪಂ ಕಾರ್ಯನಿರ್ವಹಣಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾಗೂ ಭೂಮಾಪಕರು ಉಪಸ್ಥಿತರಿರುವರು ಎಂದರು.

ಎಲ್ಲೆಲ್ಲಿ ಕಾಮಗಾರಿ?: ಚಾಮುಂಡೇಶ್ವರಿ ಕ್ಷೇತ್ರದ ಕಳಸ್ತವಾಡಿ, ಶ್ಯಾದನಹಳ್ಳಿ, ಲಿಂಗದೇವರಕೊಪ್ಪಲು, ಉದೂºರು, ಕಲ್ಲಹಳ್ಳಿ, ಕೆಲ್ಲಹಳ್ಳಿ, ಕಡಕೊಳ, ಜಯಪುರ, ಲಕ್ಷ್ಮೀಪುರ, ರಮ್ಮನಹಳ್ಳಿ, ಕೂರ್ಗಳ್ಳಿ, ಮೇಗಳಾಪುರ, ಮದ್ದೂರು, ಮಾರ್ಬಳ್ಳಿ ಹುಂಡಿ ಗ್ರಾಮಗಳಲ್ಲಿ ಏಕಕಾಲದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತ್ಯಾಜ್ಯ ನಿರ್ವಹಣಾ ಘಟಕ: ಗ್ರಾಮೀಣ ಯೋಜನೆಯಡಿ 11 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ಪ್ರಾರಂಭಿಸಲು ಪ್ರತಿ ಗ್ರಾಮ ಪಂಚಾಯಿತಿಗೆ 20 ಲಕ್ಷ ರೂ.ಗಳಂತೆ 2.20 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಮೊದಲ ಹಂತದಲ್ಲಿ ರಮ್ಮನಹಳ್ಳಿ, ಗುಂಗ್ರಾಲ್‌ ಛತ್ರ, ಹೊಸಹುಂಡಿ, ಧನಗಳ್ಳಿ, ಜಯಪುರ, ಕಡಕೊಳ, ಮಾರ್ಬಳ್ಳಿ, ಕೂರ್ಗಳ್ಳಿ, ಇಲವಾಲ, ದೊಡ್ಡ ಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಘಟಕ ಮಂಜೂರಾಗಿದೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಲು ಇರುವಷ್ಟು ಕಾಮಗಾರಿ ಬೇರೆ ಯಾವ ಕ್ಷೇತ್ರದಲ್ಲೂ ಕಾಣಲಾಗುವುದಿಲ್ಲ. ಹಾಗಾಗಿ ಲಿಂಗಾಂಬುಧಿ ಕೆರೆ ಸೇರಿದಂತೆ ಕಾವೇರಿ, ಕಬಿನಿಯಿಂದ ನೀರು ತುಂಬಿಸಲು ಕ್ರಮ ಕೈಗೊಳ್ಳಲು ಚಿಂತಿಸಲಾಗುವುದು ತಿಳಿಸಿದರು. ಟಿ.ಕಾಟೂರು, ಗುಂಗ್ರಾಲ್‌ಛತ್ರ, ಮತ್ತು ಇಲವಾಲ ಗ್ರಾಮಗಳಲ್ಲಿ ತಲಾ 40 ಲಕ್ಷ ರೂ. ವೆಚ್ಚದಲ್ಲಿ ಹೊಸ ಟಿ.ಸಿಗಳನ್ನು ಅಳವಡಿಸಿ,ಹಳೇ ಕಂಬಗಳು ಹಾಗೂ ಹಳೆ ವಿದ್ಯುತ್‌ ತಂತಿಗಳ ಬದಲಾಯಿಸಿ ಹೊಸದಾಗಿ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ತಾಪಂ ಇ.ಓ.ಕೃಷ್ಣ ಕುಮಾರ್‌, ತಾಪಂ ಸದಸ್ಯೆ ರಜಿನಿ, ಗ್ರಾಪಂ ಅಧ್ಯಕ್ಷ ಬಸವಣ್ಣ, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕಿ ರಮ್ಯ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಚಿಕ್ಕಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಸೌಲಭ್ಯ: ಸಾರ್ವಜನಿಕರು ಲಕ್ಷ ಲಕ್ಷ ಹಣ ಖರ್ಚು ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರಿ ಶಾಲೆಗಳಲ್ಲಿ ಮುಲಭೂತ ಸೌಲಭ್ಯಗಳಿಲ್ಲದಿರುವುದು. ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಶಾಲಾ – ಕಾಲೇಜುಗಳಿಗೆ ಅವಶ್ಯಕವಾದ ಗ್ರಂಥಾಲಯ, ಪೀಠೊಪಕರಣ, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

ತಾಲೂಕಿನ ಎಲ್ಲಾ ಶಾಲಾ -ಕಾಲೇಜುಗಳಲ್ಲಿ ಸುಮಾರು 7800 ಮೀಟರ್‌ನಷ್ಟು ಉದ್ದದ ಕಾಂಪೌಂಡ್‌ ನಿರ್ಮಾಣ ಮಾಡಲಾಗುವುದು ಎಂದು ಜಿ.ಟಿ.ದೇವೇಗೌಡ ಹೇಳಿದರು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಅವಶ್ಯವಿರುವ ಸಮವಸ್ತ್ರ, ಕಲಿಕಾ ಸಾಮಗ್ರಿಗಳು ಹಾಗೂ ಎಲ್ಲಾ ಮೂಲ ಸೌಲಭ್ಯಗಳನ್ನೊಳಗೊಂಡ ಉತ್ತಮ ದರ್ಜೆಯ ಮಾದರಿ ಅಂಗನವಾಡಿಗಳ ಮಾರ್ಪಡಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ಮಾವಿನಹಳ್ಳಿ, ಗುಂಗ್ರಾಲ್‌ ಛತ್ರ, ಬೆಳವಾಡಿ ಗ್ರಾಮಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next