ಕಲಬುರಗಿ: ವಿಭಾಗಕ್ಕೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸರ್ಕಾರ ಕಾರ್ಯೋನ್ಮುಖಗೊಂಡಿದ್ದು, ಈ ನಿಟ್ಟಿನಲ್ಲಿ ಕಲಬುರಗಿಯಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬರುವ ಎಂಟು ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾವು ಈ ಹಿಂದೆ ಸಚಿವರಾಗಿದ್ದ ಕೊನೆ ಬಜೆಟ್ ದಲ್ಲಿ ಕಲಬುರಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 200 ಹಾಸಿಗೆಯುಳ್ಳ ತಾಯಿ ಮತ್ತು ಮಗುವಿನ ಆಸ್ಪತ್ರೆ ಘೋಷಣೆ ಮಾಡಲಾಗಿತ್ತು. ಆದರೆ ಹಿಂದಿನ ಸರ್ಕಾರ ಅನುದಾನ ನೀಡದೇ ಹಾಗೆ ನಿಲ್ಲಿಸಲಾಗಿತ್ತು. ಆದರೆ ಈಗ ಬಜೆಟ್ ನಲ್ಲಿ ಅನುದಾನ ನೀಡುವ ಮುಖಾಂತರ ದೊಡ್ಡ ಕೊಡುಗೆ ನೀಡಲಾಗಿದೆ ಎಂದು ತಿಳಿಸಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದೇ ತಾವೇ, ಈಗ 155 ಕೋ. ರೂ ಬಜೆಟ್ ದಲ್ಲು ನೀಡಿ ಉದ್ಘಾಟನೆ ನೆರವೇರಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯ ನೂತನ ಆರು ಅಂತಸ್ತಿನ ಕಟ್ಟಡದಲ್ಲಿ ಮೂರು ಅಂತಸ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮೀಸಲಿಡಲಾಗಿದೆ. ಅದೇ ರೀತಿ ಟ್ರಾಮಾ ಸೆಂಟರ್, ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡುವ ಪ್ರತ್ಯೇಕ ವಾರ್ಡ್ ಸಹ ಶೀಘ್ರದಲ್ಲೇ ಸಮರ್ಪಣೆಗೊಳ್ಳಲಿವೆ ಎಂದು ಸಚಿವರು ವಿವರಣೆ ನೀಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸಹಕಾರದಿಂದ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದೆ. ಜೀಮ್ಸ್ ನಲ್ಲಿ ಕ್ರಿಟಿಕಲ್ ಕೇರ್ ಸಹ ಸ್ಥಾಪಿಸಲಾಗುತ್ತಿದೆ ಎಂದರು.
ಜನವರಿಯಲ್ಲಿ ಜಯದೇವ ಹೊಸ ಕಟ್ಟಡದಲ್ಲಿ 371 ಹಾಸಿಗೆಯುಳ್ಳ ಜಯದೇವ ಹೃದ್ರೋಗ ಆಸ್ಪತ್ರೆಯು ನೂತನ ಕಟ್ಟಡದಲ್ಲಿ ಬರುವ ಜನವರಿ ತಿಂಗಳಲ್ಲಿ ಶುಭಾರಂಭಗೊಳ್ಳಲಿದೆ. ರಾಜ್ಯದಲ್ಲಿ ಇನ್ನೂ 10 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿಲ್ಲ. ಬರುವ ವರ್ಷದಲ್ಲಿ ಆದ್ಯತೆ ಮೇರೆಗೆ ಸ್ಥಾಪಿಸಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ತೊಗರಿ ಮಂಡಳಿ ಬಲವರ್ಧನೆ: ತೊಗರಿ ಅಭಿವೃದ್ಧಿ ಮಂಡಳಿ ಬಲವರ್ಧನೆ ಗೊಳಿಸಬೇಕೆಂಬ ನಿಲುವಿಗೆ ಬದ್ದತೆ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಇದರತ್ತ ಗಮನ ಹರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಶಾಸಕರಾದ ಎಂ. ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.