Advertisement

ಗಂಗೊಳ್ಳಿ ಬಂದರಿನ ಒಳರಸ್ತೆ ದುರಸ್ತಿ ಕಾಮಗಾರಿ ಆರಂಭ

12:52 AM Feb 01, 2020 | Sriram |

ಗಂಗೊಳ್ಳಿ: ಕಡಲ್ಕೊರೆತ ತಡೆಗಾಗಿ ಗಂಗೊಳ್ಳಿಯಲ್ಲಿ ಕೈಗೊಂಡ ಬ್ರೇಕ್‌ ವಾಟರ್‌ ಕಾಮಗಾರಿ ಸಂಬಂಧಿತ ಘನ ವಾಹನಗಳ ಸಾಗಾಟ ದಿಂದಾಗಿ ಬಂದರಿನ ಆವರಣದ ಒಳಗಿರುವ ಎಲ್ಲ ರಸ್ತೆಗಳಿಗೂ ಹಾನಿಯಾಗಿದೆ. ಈಗ ಬ್ರೇಕ್‌ ವಾಟರ್‌ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆ ದಾರರು ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಬಂದರಿನ ಒಳ ರಸ್ತೆಗಳ ಡಾಮರು ಕಾಮಗಾರಿ ಶುಕ್ರವಾರದಿಂದ ಆರಂಭಗೊಂಡಿದೆ. ಬಹುದಿನಗಳ ಬೇಡಿಕೆ ಈಡೇರಿಕೆಗೆ ಗುತ್ತಿಗೆದಾರರು ಈಗ ಮುಂದಾಗಿದ್ದು, ಆದರೆ ಆಗ ಕರಾರಿಗೆ ಒಪ್ಪಿಕೊಂಡಂತೆ ಕಾಂಕ್ರೀಟ್‌ ಮಾಡಬೇಕು ಎನ್ನುವ ಕೂಗು ಮೀನುಗಾರ ವಲಯದಿಂದ ವ್ಯಕ್ತವಾಗಿದೆ.

Advertisement

ಕೋಡಿಯಲ್ಲಿ ಸುಮಾರು 900 ಮೀ. ಹಾಗೂ ಗಂಗೊಳ್ಳಿಯಲ್ಲಿ 700 ಮೀ. ಉದ್ದದ 102 ಕೋ.ರೂ. ಬ್ರೇಕ್‌ ವಾಟರ್‌ ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ಗಂಗೊಳ್ಳಿ ಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಭಾರೀ ಗಾತ್ರದ ಟೆಟ್ರಾಫೈಡ್‌ಗಳನ್ನು, ಘನ ಗಾತ್ರದ ಕಲ್ಲುಗಳನ್ನು ಸಾಗಾಟ ಮಾಡಲು ಘನ ವಾಹನಗಳು ಇಲ್ಲಿನ ಒಳ ರಸ್ತೆಗಳನ್ನು ಬಳಸಿಕೊಂಡಿದ್ದವು. ಈ ಘನ ಗಾತ್ರದ ವಾಹನಗಳ ಸಂಚಾರದಿಂದ ಈಗ ಬಂದರಿನ ಒಳಗಿನ ರಸ್ತೆಗಳೆಲ್ಲ ಸಂಪೂರ್ಣ ಹದಗೆಟ್ಟು ಹೋಗಿದೆ. ಇಲ್ಲಿ ಮೊದಲಿದ್ದ ಡಾಮರೆಲ್ಲ ಕಿತ್ತು ಹೋಗಿ ಈಗ ಬರೀ ಹೊಂಡ, ಜಲ್ಲಿ ಕಲ್ಲುಗಳು ಮಾತ್ರ ಉಳಿದುಕೊಂಡಿದೆ. ಇದರಿಂದ ಮೀನು ಇನ್ನಿತರ ಮೀನುಗಾರಿಕೆಗೆ ಸಂಬಂಧಿಸಿದ ಸರಕುಗಳ ಸಾಗಾಟದ ವಾಹನಗಳಿಗೆಲ್ಲ ಸಂಚರಿಸಲು ಸಮಸ್ಯೆಯಾಗುತ್ತಿದೆ.

ಮೀನುಗಾರರ ಬೇಡಿಕೆಯೇನು ?
ಬ್ರೇಕ್‌ ವಾಟರ್‌ ಕಾಮಗಾರಿ ಯಿಂದಾಗಿಯೇ ಬಂದರಿನ ಒಳಗಿನ ರಸ್ತೆಗೆ ಹಾನಿಯಾಗಿದೆ. ಇದನ್ನು ಸರಿಪಡಿಸುವ ಜವಾಬ್ದಾರಿಯೂ ಕಾಮಗಾರಿ ವಹಿಸಿ ಕೊಂಡಿರುವ ಗುತ್ತಿಗೆದಾರರದ್ದಾಗಿದೆ. ಇದಕ್ಕೆ ಮತ್ತೆ ಸರಕಾರದಿಂದ ಕಾಂಕ್ರೀಟಿಕರಣಕ್ಕೆ ಅನುದಾನ ತಂದು ಅಭಿವೃದ್ದಿ ಪಡಿಸುವುದು ಎಷ್ಟು ಸರಿ ಎನ್ನುವುದು ಮೀನುಗಾರರ ಪ್ರಶ್ನೆ. ಇದಲ್ಲದೆ ಬ್ರೇಕ್‌ ವಾಟರ್‌ ಕಾಮಗಾರಿ ವೇಳೆ 5 ಕೋ.ರೂ. ಅನುದಾನವನ್ನು ರಸ್ತೆ ದುರಸ್ತಿ, ಇನ್ನಿತರ ಪರಿಸರ ಅಭಿವೃದ್ಧಿಗೆ ವಿನಿಯೋಗಿಸಬೇಕು ಎನ್ನುವ ಕರಾರು ಕೂಡ ಮಾಡಿಕೊಳ್ಳಲಾಗಿತ್ತು. ಅದರಂತೆ ಇಲ್ಲಿನ ರಸ್ತೆಯನ್ನು ಅಭಿವೃದ್ಧಿಪಡಿಸಲಿ ಎನ್ನುವುದು ಮೀನುಗಾರರ ಬೇಡಿಕೆಯಾಗಿದೆ.

ಕಾಂಕ್ರೀಟ್‌ಗೆ ಪ್ರಸ್ತಾವನೆ
ಈ ಬಗ್ಗೆ ಬ್ರೇಕ್‌ವಾಟರ್‌ ಕಾಮಗಾರಿಯಿಂದಾಗಿ ಹಾನಿಯಾದ ರಸ್ತೆಗೆ ಗುತ್ತಿಗೆದಾರರು ಅವರ ಸ್ವಂತ ಹಣ ಹಾಕಿ ಬಂದರಿನ ಡಾಮರು ಮಾಡುತ್ತಿದ್ದಾರೆ. ಹಿಂದೆ ಇದ್ದ 3 ಮೀಟರ್‌ ಅಗಲಕ್ಕೆ ಡಾಮರು ಆಗಲಿದೆ. ಇನ್ನು ಬಾಕಿ ಉಳಿದ ರಸ್ತೆಕಾಂಕ್ರೀಟ್‌ಗೆ ಸಂಸದರು ಹಾಗೂ ಶಾಸಕರಿಗೆ ರಿಂಗ್‌ ರೋಡ್‌ ಯೋಜನೆಯಡಿ ನೀಲ ನಕಾಶೆ ತಯಾರಿಸಿ ಪ್ರಸ್ತಾವನೆಗೆ ಕಳುಹಿಸಲಾಗಿದೆ.
-ವಿಜಯ ಕುಮಾರ್‌ ಶೆಟ್ಟಿ,,
ಇಂಜಿನಿಯರ್‌, ಬಂದರು ಮತ್ತು ಮೀನುಗಾರಿಕೆ ಇಲಾಖೆ

ಕಾಂಕ್ರೀಟ್‌ ಆಗಲಿ
ಈ ಹಿಂದೆ ಡಿಸಿ ಸಮ್ಮುಖದಲ್ಲಿ ಮೀನುಗಾರರ ಸಭೆ ನಡೆದಾಗ ಬ್ರೇಕ್‌ ವಾಟರ್‌ ಕಾಮಗಾರಿಯಿಂದಾಗಿ ಈ ರಸ್ತೆಗಳಿಗೆ ಹಾನಿಯಾಗಿದ್ದು, ಇದರ ಕಾಂಕ್ರೀಟ್‌ ಮಾಡಿಸಿಕೊಡುವುದು ಗುತ್ತಿಗೆದಾರರದ್ದೆ ಹೊಣೆ ಎಂದು ಮಾತುಕತೆಯಾಗಿತ್ತು. ಆದರೆ ಈಗ ಬರೀ ಕೆಲ ರಸ್ತೆಗಳಿಗೆ ಅದು ಕೂಡ ಬರೀ 3 ಮೀ. ಅಷ್ಟೆ ಡಾಮರು ನಡೆಸಲಾಗಿದೆ. ನಮಗೆ ಮೀನು ಸಾಗಾಟದ ವಾಹನ ಸಾಗಲು ಇದರಿಂದ ಸಮಸ್ಯೆಯಾಗಲಿದ್ದು, ಕನಿಷ್ಠ 10 ಮೀ. ಆದರೂ ವಿಸ್ತರಣೆ ಹಾಗೂ ಕಾಂಕ್ರೀಟ್‌ ಆಗಬೇಕಿದೆ.
-ರವಿಶಂಕರ್‌ ಖಾರ್ವಿ, ಪ್ರ. ಕಾರ್ಯದರ್ಶಿ, ಹಸಿ ಮೀನು ವ್ಯಾಪಾರಸ್ಥರ ಸಂಘ ಗಂಗೊಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next