Advertisement

ನಾಳೆ ರಾಮಸನ್ಸ್‌ ಬೊಂಬೆಮನೆ ಉದ್ಘಾಟನೆ

04:56 PM Sep 20, 2018 | |

ಮೈಸೂರು: ದಸರೆ ಎಂದರೆ ಮೈಸೂರು ಸೀಮೆಯ ಮನೆ ಮನೆಯ ಹಬ್ಬ. ನಾಡಹಬ್ಬ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದ್ದರೆ, ಮೈಸೂರಿನ ಮನೆಗಳಲ್ಲಿ ನವರಾತ್ರಿಯ ಬೊಂಬೆ ಪೂಜೆಗೆ ಸದ್ದಿಲ್ಲದೆ ನಡೆದಿದೆ ತಯಾರಿ.

Advertisement

ರಾಜರ ಆಳ್ವಿಕೆಯ ಕಾಲದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪಟ್ಟದ ಬೊಂಬೆಗಳನ್ನು ಮನೆಗಳಲ್ಲಿ ಕೂರಿಸಿ ಪೂಜಿಸುತ್ತಿದ್ದುದು ವಾಡಿಕೆ. ಅಲಂಕರಿಸಿದ ಜಗಲಿಗಳ ಮೇಲೆ ವಿವಿಧ ಬಗೆಯ ಬೊಂಬೆಗಳನ್ನು ಕೂರಿಸಿ ಪೂಜಿಸುವ ಸಂಪ್ರದಾಯ ಇಂದಿಗೂ ಮುಂದು ವರಿದಿದೆ. ಹೆಣ್ಣು ಮಕ್ಕಳಿರುವ ಮನೆಗಳಲ್ಲಂತೂ ದಸರೆ ಬೊಂಬೆ ಹಬ್ಬ ಎಂದೇ ಹೆಸರು ಮಾಡಿದೆ. 

ಯುದ್ಧ ಅಥವಾ ವಿಜಯದ ಸಂಕೇತವಾಗಿ ದಸರಾ ಆಚರಿಸುವುದರಿಂದ ಚಾಮುಂಡೇಶ್ವರಿ ಮೂರ್ತಿಯ ಪೂಜೆ ಜೊತೆಗೆ ಆನೆ, ಕುದುರೆ, ಪದಾತಿದಳ ಮೊದಲಾದ ಚದುರಂಗ ಬಲದ ಬೊಂಬೆಗಳನ್ನು ಕೂರಿಸುವುದು ವಾಡಿಕೆ.

14ನೇ ಪ್ರದರ್ಶನ: ನಜರ್‌ಬಾದ್‌ ಮುಖ್ಯರಸ್ತೆಯ ಪ್ರತಿಮಾ ಗ್ಯಾಲರಿಯಲ್ಲಿ 14ನೇ ವರ್ಷದ ಬೊಂಬೆ ಮನೆ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಹೂಗ್ಲೀ ನದಿ ತೀರದ ಕೋಲ್ಕತ್ತಾ ನಗರದ ದುರ್ಗಾಪೂಜಾ ಪೆಂಡಾಲ್‌ಗ‌ಳ ಸಂಭ್ರಮದ ಒಂದು ಪುಟ್ಟ
ದೃಶ್ಯಾವಳಿಯಲ್ಲಿ ದೇವಿ ಮಹಿಷ ಮರ್ಧಿನಿಯ ಜೊತೆ ಲಕ್ಷ್ಮೀ, ಸರಸ್ವತಿ, ಗಣೇಶ ಮತ್ತು ಕಾರ್ತಿಕೇಯರು ಹಾಗೂ ದಕ್ಷಿಣ ಕಾಳಿಯ ಬಿಂಬಗಳು, ಕಿನ್ನಾಳದ ಕಲೆಯಲ್ಲಿ ಮೈವೆತ್ತ ದೇವಿ, ಬಾದಾಮಿ ಬನಶಂಕರಿಯ ಸನ್ನಿಧಿ ಈ ಬೊಂಬೆ ಮನೆಯ ಇನ್ನೊಂದು ವಿಶೇಷ. 

ದೇವಿ ಶಾಕಾಂಬರಿಗೆ ಕಿನ್ನಾಳ, ಕೃಷ್ಣಾ ನಗರದ ತರಕಾರಿ, ಹಣ್ಣುಹಂಫ‌ಲಗಳ ಸಿಂಗಾರ. ಈ ದೇವಿಯರ ಸೇವೆಗೆಂಬಂತೆ ಬೊಂಬೆ ರೂಪದಲ್ಲಿ ಅವತರಿಸಿರುವ ಮಹಾರಾಜ ಜಯಚಾಮರಾಜ ಒಡೆಯರ್‌. ಮಹಾರಾಜರ ವಿಶಿಷ್ಟ ವ್ಯಕ್ತಿತ್ವವನ್ನು ವಿವಿಧ ಚಿತ್ರ ಬಿಂಬಗಳುಳ್ಳ ವಿಶೇಷ ಅಂಕಣದ ಮೂಲಕ ನೆನಪಿಸಿಕೊಂಡು ಅವರ ಜನ್ಮ ಶತಾಬ್ದಿಯ ವರ್ಷವನ್ನು ಆಚರಿಸಲು ಸಜ್ಜಾಗಿದೆ ಬೊಂಬೆ ಮನೆ.

Advertisement

ಮಹಾಭಾರತ ದೃಶ್ಯಗಳು: ರಾಜಾ ರವಿವರ್ಮನ ಚಿತ್ರಪಟಗಳ ಆಧರಿತ ದೇವ-ದೇವಿಯರು, ನರ-ನಾರಿಯರು ಕಾಗದ ರಚ್ಚಿನ ಬೊಂಬೆಗಳಾಗಿ ಮೈಕೈ ತುಂಬಿಕೊಂಡಿವೆ. ಅರಗಿನ ಮನೆಯಿಂದ ತಪ್ಪಿಸಿಕೊಂಡ ಪಾಂಡವರು, ದ್ರೌಪದಿ ಸ್ವಯಂವರ, ಮಾಯಾದೂತ, ದ್ರೌಪದಿ ವಸ್ತ್ರಹರಣ,ಅಜ್ಞಾತ ವಾಸದಲ್ಲಿ ಪಾಂಢವರು, ಕಿರಾತಾರ್ಜುನೀಯ, ಭೀಮ ಗರ್ವಭಂಗ, ಅಭಿಮನ್ಯು-ಉತ್ತರೆ ಕಲ್ಯಾಣ, ಶರಶಯೆಯಲ್ಲಿರುವ ಭೀಷ್ಮರು ಇವು ಹೊಸದಾಗಿ ಬಂದಿರುವ ವಿಶೇಷ ಬೊಂಬೆಗಳು.

ಲೋಹದ ಬೊಂಬೆಗಳು: ಪೇಪರ್‌ ಮೆಶ್‌, ಪ್ಲಾಸ್ಟರ್‌ ಆಫ್ ಪ್ಯಾರೀಸ್‌, ಪಿಂಗಾಣಿ, ಮರ, ಲೋಹಗಳಿಂದ ರಚಿಸಲಾಗಿರುವ ವೈವಿಧ್ಯಮಯ ಬೊಂಬೆಗಳು ಬೊಂಬೆಗಳ ಲೋಕವನ್ನೇ ತೆರೆದಿಟ್ಟಿವೆ. ಮೈಸೂರು, ಬೆಂಗಳೂರು,ಚನ್ನಪಟ್ಟಣ, ಕಿನ್ನಾಳ, ಮತ್ತು ಖಾನಾ ಪುರದಲ್ಲಿ ತಯಾರಾಗಿರುವ ಬೊಂಬೆಗಳ ಜೊತೆಗೆ ತಮಿಳುನಾಡಿನ ಕಡಲೂರು, ವಿಳುಪ್ಪುರಮ್‌, ಮಾಯಾ ವರಮ್‌, ಕಾಂಚೀಪುರಂ, ಮಧುರೈ, ಪನ್ರುಟಿ. ಆಂಧ್ರಪ್ರದೇಶದ ಕೊಂಡಪಲ್ಲಿ ಮತ್ತು ಎಟಿಕೊಪ್ಪ, ಉತ್ತರ ಪ್ರದೇಶದ ವಾರಾಣಸಿ ಮತ್ತು ಅಲೀಗಢ, ಪಶ್ಚಿಮಬಂಗಾಳದ ಕೊಲ್ಕತ್ತಾ, ಕೃಷ್ಣಾ ನಗರ್‌, ಬಿಷ್ಣುಪುರ್‌, ರಾಜಾಸ್ಥಾನದ ಜೈಪುರ ಮತ್ತು ಜೋಧ್‌ಪುರ, ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಪೇಣ್‌ ಸೇರಿದಂತೆ ಭಾರತದ ವಿವಿಧ ಪ್ರದೇಶಗಳಿಂದ ಬೊಂಬೆ ಹಬ್ಬಕ್ಕಾಗಿ ತರಿಸಲಾಗಿರುವ ಸಾವಿರಾರು ಬೊಂಬೆಗಳು ಒಂದೇ ಸೂರಿನಡಿ ಪ್ರದರ್ಶಿತಗೊಂಡಿವೆ.

ನಾಳೆ ಉದ್ಘಾಟನೆ: ಶುಕ್ರವಾರ ಸಂಜೆ 6.30ಕ್ಕೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ದಸರೆಯ ಬೊಂಬೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ವಿಶೇಷ ಅಂಕಣವನ್ನು ಭರತನಾಟ್ಯ ಕಲಾವಿದ ಡಾ. ತುಳಸೀ ರಾಮಚಂದ್ರ ಉದ್ಘಾಟಿಸಲಿದ್ದಾರೆ. ಶನಿವಾರ ಆರಂಭಗೊಳ್ಳುವ ಈ ಬೊಂಬೆಗಳ ಪ್ರದರ್ಶನ ಪ್ರತಿದಿನ ಬೆಳಗ್ಗೆ 10.30ರಿಂದ ಸಂಜೆ 7.30ರವರೆಗೆ ವರ್ಷಪೂರ್ತಿ ಇರಲಿದೆ. 

ಕ್ಷೀಣಿಸುತ್ತಿರುವ ಬೊಂಬೆ ಕಲೆಗಳನ್ನು ಪುನರುಜ್ಜೀವಗೊಳಿಸಲು ಹಾಗೂ ನಾಡಿನ ವೈವಿಧ್ಯಮಯ ಬೊಂಬೆ ಸಂಪ್ರದಾಯ
ಗಳನ್ನು ಬೊಂಬೆ ಪ್ರಿಯರಿಗೆ ಪರಿಚಯಿಸುವ ದೃಷ್ಟಿಯಿಂದ 2005ರ ದಸರೆ ಸಂದರ್ಭದಲ್ಲಿ ಬೊಂಬೆ ಮನೆಯನ್ನು ಸ್ಥಾಪಿಸಲಾಗಿದೆ. 
  ಆರ್‌.ಜಿ.ಸಿಂಗ್‌, ಕಾರ್ಯದರ್ಶಿ, ರಾಮ್‌ಸನ್ಸ್‌ ಕಲಾ ಪ್ರತಿಷ್ಠಾನ

Advertisement

Udayavani is now on Telegram. Click here to join our channel and stay updated with the latest news.

Next