ಉಡುಪಿ: ಬೋಳ ಪೂಜಾರಿ ಅವರು ಕಂಡ ಕನಸು ಮತ್ತು ಅವರು ತೋರಿಸಿದ ಉತ್ತಮ ನಡತೆ, ಮಾರ್ಗದರ್ಶನಲ್ಲಿ ಅವರ ಪುತ್ರರಿಂದ “ಹರ್ಷ’ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಅವರ ಸಂಕಲ್ಪದಂತೆ ಅದೆಷ್ಟೋ ಮಂದಿಗೆ ಉದ್ಯೋಗ ನೀಡುವ ಮೂಲಕ ಸಾವಿರಾರು ಕುಟುಂಬಗಳಿಗೆ ಅನ್ನದಾತ ಸಂಸ್ಥೆಯಾಗಿ ಮೂಡಿ ಬಂದಿದೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಉಡುಪಿಯ ಬೆಳವಣಿಗೆಗೆ ಈ ಸಂಸ್ಥೆಯ ಕೊಡುಗೆಯೂ ಇದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಭಿಪ್ರಾಯಪಟ್ಟರು.
ನಗರದ ಸಿಟಿ ಬಸ್ ನಿಲ್ದಾಣ ಬಳಿಯ ಶ್ರೀ ದತ್ತಕೃಪಾ ಬಿಲ್ಡಿಂಗ್‌ನಲ್ಲಿ ಆರಂಭಗೊಂಡ ರಾಜ್ಯದ ಪ್ರಸಿದ್ಧ ಗೃಹೋಪಕರಣಗಳ ಮಳಿಗೆ “ಹರ್ಷ’ದ ಅತಿದೊಡ್ಡ ಹಾಗೂ ಉಡುಪಿಯ 3ನೇ ಮಳಿಗೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆ ಸಾಮಾಜಿಕ ಬದ್ಧತೆಯೊಂದಿಗೆ ಸಿಬಂದಿ ವರ್ಗದವರನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳು ತ್ತಿದೆ. ಅಲ್ಲದೆ ಗ್ರಾಹಕರನ್ನು ತಮ್ಮ ಕುಟುಂಬ ಸದಸ್ಯರಂತೆಯೇ ಕಾಣುವ ಸಿಬಂದಿಯ ಉತ್ಕೃಷ್ಟ ಗುಣಮಟ್ಟದ ಸೇವೆಯಿಂದಾಗಿ ಸಂಸ್ಥೆ ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಶಾಖೆಗಳು ದೇಶದಾದ್ಯಂತ ವಿಸ್ತರಿಸಲಿ ಎಂದು ಹಾರೈಸಿದರು.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಎಂ. ಸೋಮಶೇಖರ್ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.
ಉದ್ಯೋಗ ನೀಡಲು ಉದ್ಯಮ:
ಶಾಸಕ ಕೆ. ರಘುಪತಿ ಭಟ್ ಅವರುಮಾತನಾಡಿ, ಉದ್ಯಮ ನಡೆಸುವುದು ಹಣ ಮಾಡುವುದಕ್ಕಲ್ಲ; ಉದ್ಯೋಗ ನೀಡುವುದಕ್ಕಾಗಿ ಎನ್ನುವುದನ್ನು ಹರ್ಷ ಸಂಸ್ಥೆ ತೋರಿಸಿ ಕೊಟ್ಟಿದೆ. ಗ್ರಾಹಕರ ವಿಶ್ವಾಸಾರ್ಹತೆಗೆ ಪಾತ್ರವಾದ ಸಂಸ್ಥೆ ಉಡುಪಿಯ ಸೌಂದರ್ಯಕ್ಕೆ ಮೆರುಗು ನೀಡುವಂತೆ ಆಕರ್ಷಕ ಮಳಿಗೆಯನ್ನು ತೆರೆದಿದೆ ಎಂದು ಶುಭ ಹಾರೈಸಿದರು.
ಉಡುಪಿಯ ಹೆಮ್ಮೆ:
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ನಗರದ ಕೀರ್ತಿ ಹೆಚ್ಚಳಕ್ಕೆ ಹರ್ಷದ ಮಳಿಗೆ ಆರಂಭಗೊಂಡಿದೆ. ಬೋಳ ಪೂಜಾರಿ ಅವರು ಗುಣವಂತರಾದ ನೆಲೆಯಲ್ಲಿ ಅವರ ಐವರು ಪುತ್ರರು ಒಗ್ಗಟ್ಟಿನಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇದೇ ಈ ಸಂಸ್ಥೆಯ ಯಶಸ್ಸಿನ ಗುಟ್ಟು ಎಂದು ತಿಳಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ರಾಮ ನಾಯ್ಕ ಶುಭಾಶಂಸನೆಗೈದರು. ಶ್ರೀ ಚಿತ್ರಾಪುರ ಮಠದ ಸದಸ್ಯ ರಾಮ್ ಶಿರಾಲಿ, ಪ್ರಕಾಶ್ ರಿಟೇಲ್ ಪ್ರç.ಲಿ.ನ ಡೈರೆಕ್ಟರ್‌ಗಳಾದ ಅಶೋಕ್ ಕುಮಾರ್, ಹರೀಶ್ ಎಂ., ರಾಜೇಶ್ ಎಂ., ಸುರೇಶ್ ಎಂ., ಸಿಬಂದಿ ವರ್ಗ, ಗಣ್ಯರು, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಸಮ್ಮಾನ:
ವಿಶೇಷ ಸೆಲೆಬ್ರಿಟಿ ಅತಿಥಿ ಇಂಡಿಯನ್ ಐಡಲ್ ಸ್ಪರ್ಧೆಯ ಟಾಪ್ 5 ಫೈನಲಿಸ್ಟ್ ನಿಹಾಲ್ ತಾವ್ರೋ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ನಿಹಾಲ್ ಹಾಡಿನ ಮೂಲಕ ಸಭಿಕರನ್ನು ರಂಜಿಸಿದರು. ಸಂಸ್ಥಾಪಕ ಬೋಳ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಪ್ರಕಾಶ್ ರಿಟೇಲ್ ಪ್ರç.ಲಿ.ನ ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯಪ್ರಕಾಶ್ ಕೆ. ಸ್ವಾಗತಿಸಿದರು. ಸೌಜನ್ಯಾ ಹೆಗ್ಡೆ ನಿರೂಪಿಸಿ, ಬಿ.ಎನ್. ಅಮೀನ್ ವಂದಿಸಿದರು.
ಹರ್ಷದಿಂದಾಗಿ ಉಡುಪಿಯಲ್ಲೇಎಲ್ಲವೂ ಲಭ್ಯ: ಗೌತಮ್ ಎಸ್. ಪೈ :
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್‌ನ ಎಕ್ಸಿಕ್ಯೂಟಿವ್ ಚೇರ್ಮನ್ ಗೌತಮ್ ಎಸ್. ಪೈ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹರ್ಷ ಸಂಸ್ಥೆ ನಿರಂತರ ಪರಿಶ್ರಮ, ಉತ್ತಮ ಸೇವೆ ನೀಡಿದ ಕಾರಣದಿಂದಲೇ ಗ್ರಾಹಕರ ಪ್ರಶಂಸೆಗೆ ಪಾತ್ರವಾಗಿದೆ. ಹಿಂದೆ ಬೆಲೆಬಾಳುವ ಗೃಹೋಪಕರಣಗಳ ಖರೀದಿಗೆ ಮಹಾನಗರಗಳಿಗೆ ತೆರಳಬೇಕಿತ್ತು. ಆದರೆ ಹರ್ಷ ಸಂಸ್ಥೆಯಿಂದಾಗಿ ಉಡುಪಿಯಲ್ಲಿಯೇ ದೊರಕುತ್ತಿವೆ. ಸಂಸ್ಥೆ ಪ್ರಪಂಚದ ಎಲ್ಲ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಉತ್ಪನ್ನಗಳು ಒಂದೇ ಸೂರಿನಡಿ ದೊರಕುವಂತೆ ಮಾಡಿ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. 16 ಶಾಖೆಗಳನ್ನು ಒಳಗೊಂಡ ಸಂಸ್ಥೆ ಮುಂದಿನ ದಿನಗಳಲ್ಲಿ 160 ಶಾಖೆಗಳನ್ನು ಹೊಂದಲಿ ಎಂದು ಹಾರೈಸಿದರು.