Advertisement

ಮಾಯಿಪ್ಪಾಡಿ ಡಯಟ್‌ ನೂತನ ಕಟ್ಟಡ ಕಾಮಗಾರಿ ಉದ್ಘಾಟನೆ

07:19 PM Sep 21, 2020 | Team Udayavani |

ಕಾಸರಗೋಡು: ಮಾಯಿಪ್ಪಾಡಿ ಡಯಟ್‌ ಸಂಸ್ಥೆಗೆ ಹೆಚ್ಚುವರಿ ಸೌಲಭ್ಯ ಒದಗಿಸಲಾಗುತ್ತಿದ್ದು, ಈ ಸಂಬಂಧ ನಿರ್ಮಿಸಲಾಗುವ ಆಡಳಿತ ವಿಭಾಗ ಬ್ಲಾಕ್‌ ಕಟ್ಟಡದ ನಿರ್ಮಾಣ ಉದ್ಘಾಟನೆಗೊಂಡಿತು.

Advertisement

ಈ ಸಂಬಂಧ ಡಯಟ್‌ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಇ. ಚಂದ್ರಶೇಖರನ್‌ ಕಟ್ಟಡ ನಿರ್ಮಾಣವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಾರ್ವಜನಿಕ ಶೈಕ್ಷಣಿಕ ವಲಯದಲ್ಲಿ ರಾಜ್ಯ ಸರಕಾರ ಕ್ರಾಂತಿಕಾರಿ ಬದಲಾವಣೆ ತಂದಿದೆ ಎಂದರು. ಈ ಬಗ್ಗೆ ಸತತ ಕ್ರಮಗಳನ್ನು ಕೈಗೊಂಡು ಭವಿಸ್ಯದಲ್ಲಿ ಸದೃಢ ಪ್ರಜೆಗಳನ್ನು ರೂಪಿಸುವ ಉತ್ತಮ ಶಿಕ್ಷಣ ಅವಕಾಶವನ್ನು ಒದಗಿಸುತ್ತಿದೆ. ಸೌಲಭ್ಯ ಒದಗಿಸುವುದಕ್ಕಾಗಿ ಒಂದು ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು.

ಪ್ರಭಾಕರನ್‌ ಆಯೋಗದ ವರದಿ ಪ್ರಕಾರ ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸರಿಸುಮಾರು 12 ಕೋಟಿ ರೂ.ನ ಯೋಜನೆ ಅಗತ್ಯವಿದೆ. ಇಷ್ಟು ದೊಡ್ಡ ಮೊಬಲಗು ಸಂಗ್ರಹಕ್ಕೆ ಖಾಸಗಿ ವಲಯದ ಸಹಕಾರ ಸಹಿತ ವಿವಿಧ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು . ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ ನಲ್ಲೂ ಶಿಕ್ಷನ ವಲಯದ ಅಭಿವೃದ್ಧಿಗೆ ಪ್ರತ್ಯೇಕ ಪರಿಶೀಲನೆ ನೀಡಲಾಗುತ್ತಿದೆ ಎಂದರು.

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ ವಿಶೇಷ ಅಧಿಕಾರಿ ಇ.ಪಿ. ರಾಜ್‌ ಮೋಹನ್‌ ಅವರು ಮಾತನಾಡಿ ಪ್ರಭಾಕರನ್‌ ಆಯೋಗದ ವರದಿ ಕಾಸರಗೋಡು ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇದರ ಪರಿಹಾರ ನಡೆಯಬೇಕು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಈ ಪರಿಹಾರಕ್ಕೆ ಸಂಬಂಧಿಸಿ ಯೋಜನೆಗಳಿವೆ ಎಂದರು.

ಶಾಸಕ ಎನ್‌.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಮಾತನಾಡಿದ ಶಾಸಕ ಮುಂದಿನ ಜನಾಂಗದ ಭವಿಷ್ಯವನ್ನು ರಚಿಸುವಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ. ಈ ವಲಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಕ್ಷಭೇದವಿಲ್ಲದ ಸಹಕಾರ ಅಗತ್ಯ ಎಂದರು.

Advertisement

ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಮುಖ್ಯ ಅತಿಥಿಯಾಗಿದ್ದರು. ಮಧೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮಾಲತಿ ಸುರೇಶ್‌, ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕೆ.ಪಿ. ಪುಷ್ಪಾ, ಡಯಟ್‌ ಪ್ರಾಂಶುಪಾಲ ಡಾ| ಎಂ. ಬಾಲನ್‌, ಸಮಗ್ರ ಶಿಕ್ಷಣ ಕಾರ್ಯಕ್ರಮ ಸಂಚಾಲಕ ಪಿ. ರವೀಂದ್ರನ್‌, ಕೇರಳ ಶಿಕ್ಷಣ ರೆಜುವೇಷನ್‌ ಮಿಷನ್‌ ಜಿಲ್ಲಾ ಸಂಚಾಲಕ ಪಿ. ದಿಲೀಪ್‌ ಕುಮಾರ್‌, ಕೈಟ್‌ ಜಿಲ್ಲಾ ಸಂಚಾಲಕ ಎಂ.ಪಿ. ರಾಜೇಶ್‌, ಪಂಚಾಯತ್‌ ಸದಸ್ಯ ಎಸ್‌.ವಿ.ಅವಿನ್‌ ಉಪಸ್ಥಿತರಿದ್ದರು. ಲೋಕೋಪಯೋಗಿ ಕಾರ್ಯಕಾರಿ ಎಂಜಿನಿಯರ್‌ ವಿ.ಪಿ.ಮುಹಮ್ಮದ್‌ ವರದಿ ವಾಚಿಸಿದರು.

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಅಳವಡಿಸಿ ಮೂರು ಕೋಟಿ ರೂ. ವೆಚ್ಚದಲ್ಲಿ ಈ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಇದಲ್ಲದೆ ವಿದ್ಯುದೀಕರಣಕ್ಕೆ 15 ಲಕ್ಷ ರೂ. ಮೀಸಲಿರಿಸಲಾಗಿದೆ. ಎರಡು ಅಂತಸ್ತಿನ ಮೂರು ಬ್ಲಾಕ್‌ಗಳಿರುವ ಕಟ್ಟಡ ಇದಾಗಿದೆ. ಒಟ್ಟು 2861.355 ಚದರ ಅಡಿ ವಿಸ್ತೀರ್ಣದ ಕಟ್ಟಡವಾಗಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶಾಲ ಗ್ರಂಥಾಲಯ, ಕಚೇರಿ, ಸಭಾಂಗಣ, ಪ್ರಯೋಗಾಲಯ, ಭೋಜನಾಲಯ, ಪಾರ್ಕಿಂಗ್‌ ಸೌಲಭ್ಯ ಈ ಕಟ್ಟಡದಲ್ಲಿರುವುವು. ಕಾಸರಗೋಡು ನಿವಾಸಿ ಹಸನ್‌ ಕುಂಞಿ ಈ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next