ಧಾರವಾಡ: ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಸಂಸ್ಕೃತಿ ಇರುತ್ತದೆ. ಹೀಗಾಗಿ ಆಯಾ ಸಮುದಾಯಗಳ ಭಾಷೆ ಅಭಿವೃದ್ಧಿಗೊಂಡಂತೆ ಸಂಸ್ಕೃತಿ ಕೂಡ ಅಭಿವೃದ್ಧಿ ಹೊಂದುತ್ತದೆ ಎಂದು ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಹೇಳಿದರು.
ಇಲ್ಲಿನ ಕನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕೊಂಕಣಿ ಅಧ್ಯಯನ ಪೀಠ ಉದ್ಘಾಟಿಸಿ ಅವರು ಮಾತನಾಡಿದರು.
ಕೊಂಕಣಿ ಅತ್ಯಂತ ಪ್ರಾಚೀನ ಭಾಷೆ. ಅಗತ್ಯ ಪ್ರಾತಿನಿಧ್ಯ ಸಿಗದಿರುವುದರಿಂದ ಭಾಷೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಕೊಂಕಣಿ ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿಶ್ವವಿದ್ಯಾಲಯದಲ್ಲಿ ಕೊಂಕಣಿ ಅಧ್ಯಯನ ಪೀಠ ಆರಂಭಿಸಲಾಗುತ್ತಿದೆ ಎಂದರು.
ಕೊಂಕಣಿ ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದ ಭಾಷೆ ಅಲ್ಲ. ಬೇರೆ ಬೇರೆ ಜಾತಿ, ಸಮುದಾಯಗಳ ಜನ ಈ ಭಾಷೆ ಮಾತನಾಡುತ್ತಾರೆ. ಇಂಥ ಭಾಷೆಗೆ ಕಾಯಕಲ್ಪ ನೀಡುವುದು ಅಧ್ಯಯನ ಪೀಠದ ಉದ್ದೇಶವಾಗಿದೆ ಎಂದು ಹೇಳಿದರು.
ಕೊಂಕಣಿ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ ಮಾತನಾಡಿ, ಭಾಷಾಭಿವೃದ್ಧಿಗೆ ಕೊಂಕಣಿ ಭಾಷಿಕರು ತಮ್ಮ ಸಮಯ ಮೀಸಲಿಡಬೇಕು. ಈ ಕೊಂಕಣಿ ಅಧ್ಯಯನ ಪೀಠದಲ್ಲಿ ಕಲಿಯುವ ಪ್ರಥಮ ಸರ್ಟಿಫಿಕೆಟ್ ಕೋರ್ಸ್‌ಗೆ ಅಕಾಡೆಮಿಯಿಂದ ಅನುದಾನ ನೀಡಲಾಗುವುದು ಎಂದರು.
ಡಾ| ಉದಯ ರಾಯ್ಕರ ಮಾತನಾಡಿದರು. ರವಿ ಗಾಂವಕರ, ಎಂ.ಎಸ್. ಬಾಳಿಗಾ, ಸಂತೋಷ ಗಜಾನನ ಮಹಾಲೆ, ಡಾ| ಇಸಬೆಲ್ಲಾದಾಸ್ ಝೇವ್ಹಿಯರ್, ಡಾ| ಚೇತನಕುಮಾರ ನಾಯ್ಕ, ಕೂಡ್ಲಾ ಆನಂದು ಶಾನಭಾಗ, ವಸಂತ ಬಾಂದೇಕರ, ಅಕಾಡೆಮಿ ಸದಸ್ಯರಾದ ರಾಮ ಮೇಸ್ತಾ, ಉಲ್ಲಾಸ ಪ್ರಭು, ನಾಗೇಶ ಅಣ್ವೇಕರ, ದಯಾನಂದ ಪಾಂಡುಗೌಡ, ಮಾಧವ ಶೇಟ್, ಸಂತೋಷ ಶೆಣೈ ಇದ್ದರು. ಆಶಾ ಭಂಡಾರಕರ ಪ್ರಾರ್ಥಿಸಿದರು. ಸರಯ್ಯು ಪ್ರಭು ನಿರೂಪಿಸಿದರು. ಅಮೋದಿನ ಮಹಾಲೆ ಅವರಿಂದ ಕೊಂಕಣಿ ಹಾಡಿನ ಗಾಯನ ನಡೆಯಿತು.