Advertisement

ಆಂಗ್ಲ ನಾಡಿನಲ್ಲಿ “ಕನ್ನಡ ಕಲಿ’ಆನ್‌ಲೈನ್‌ ತರಬೇತಿ ಉದ್ಘಾಟನೆ

01:32 PM Dec 12, 2020 | Adarsha |

ಲಂಡನ್‌: ಕನ್ನಡ ಕಲಿಸಲು ಮುಂದೆ ಬರುವವರಿಗೆ ವಿದ್ಯಾಭವನದ ಕಡೆಯಿಂದ ಎಲ್ಲ ವಿಧದ ಸಹಾಯ ಮತ್ತು ಸಹಕಾರ ನೀಡುವುದಾಗಿ ಭಾರತೀಯ ವಿದ್ಯಾಭವನ, ಲಂಡನ್‌ನ ನಿರ್ದೇಶಕ ಮತ್ತೂರು ನಂದಕುಮಾರ ಹೇಳಿದರು.

Advertisement

ಕನ್ನಡಿಗರು ಯುಕೆ ಸಂಸ್ಥೆಯು ನ. 29ರಂದು ಆಯೋಜಿಸಿದ್ದ ಎರಡನೇ ಹಂತದ ಕನ್ನಡ ಕಲಿ ಆನ್‌ಲೈನ್‌ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಮಾರು ನಲವತ್ತು ವರ್ಷಗಳ ಹಿಂದೆ ತಾವು ಮೊದಮೊದಲು ಯುಕೆಗೆ ಬಂದಾಗ ಆದ ಅನುಭವಗಳನ್ನು ಮೆಲುಕು ಹಾಕಿದರು. ಅದರೊಂದಿಗೆ ಭವನದಲ್ಲಿ ಕನ್ನಡವನ್ನು ಕಲಿಸಲು ಮಾಡಿದ ಪ್ರಯತ್ನಗಳ ಬಗ್ಗೆ ತಿಳಿಸಿದ ಅವರು, ಬಳಿಕ ಕಾರಣಾಂತರಗಳಿಂದ ನಿಂತುಹೋದ ಬಗ್ಗೆ ವಿಶಾದ ವ್ಯಕ್ತಪಡಿಸಿದರು.

ಕನ್ನಡ ಕಲಿ ಯೋಜನೆಯ ಮುಖ್ಯಸ್ಥ ರಾಜೇಶ್‌ ಅವರು ಎರಡನೇ ಹಂತದ ಯೋಜನೆಯ ರೂಪುರೇಷೆಗಳನ್ನು ಪ್ರಸ್ತುತ ಪಡಿಸಿದರು.

ಶಿಕ್ಷಕರಾದ ರಶ್ಮಿ ಮಚಾನಿ, ಪವಿತ್ರಾ ವೀರಪ್ಪ, ಪೂಜಾ, ಲೋಹಿತ್‌, ವಸುಂದರಾ, ಗೋವರ್ಧನ ಗಿರಿ ಜೋಷಿ, ಅಶ್ವಿ‌ನ್‌, ರಶ್ಮಿ ಪ್ರವೀಣ್‌, ಪಲ್ಲವಿ, ರಾಧಿಕಾ, ಅರ್ಚನಾ ಮತ್ತು ಸಂತೋಷ ನಾಯ್ಕ ಅವರು ತಮ್ಮನ್ನು ಪರಿಚಯಿಸಿಕೊಂಡರು.

Advertisement

ಸಮಾರಂಭದಲ್ಲಿ ಅಮೆರಿಕ ಕನ್ನಡ ಅಕಾಡೆಮಿ ಮತ್ತು ಅದರ ಪದಾಧಿಕಾರಿಗಳ ಉಪಸ್ಥಿತರಿದ್ದರು. ಕನ್ನಡ ಅಕಾಡೆಮಿಯ ಪಠ್ಯಪುಸ್ತಕಗಳ ರಚನೆಗಾರ ಹಾಗೂ ಅಕಾಡೆಮಿಯ ಅಧ್ಯಕ್ಷ ಶಿವ ಗೌಡರ್‌ ಮಾತನಾಡಿ, ಪಠ್ಯಪುಸ್ತಕಗಳ ರಚನೆಯ ಹಿಂದಿರುವ ಶ್ರಮ, ಅನುಭವ ಮತ್ತು ಕಲಿಕಾ ತಂತ್ರಗಾರಿಕೆಯ ಬಗ್ಗೆ ತಿಳಿಸಿ, ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಕನ್ನಡ ಅಕಾಡೆಮಿ ತಂಡದ ವತಿಯಿಂದ ನವೀನ್‌ ಮಲ್ಲಿಕಾರ್ಜುನ ಅವರು ಅಕಾಡೆಮಿಯ ಪರಿಚಯ, ಪರಿಕಲ್ಪನೆ, ಗುರಿ, ಕಲಿಕಾ ಮಾರ್ಗಸೂಚಿಗಳು, ಪಠ್ಯಕ್ರಮಗಳು ಹಾಗೂ ಅದರಲ್ಲಿರುವ ವಿವಿಧ ಹಂತಗಳ ಬಗ್ಗೆ ವಿವರಿಸಿದರು.

ಮನೆ ಪಾಠ ತಂತ್ರಾಂಶ ಪ್ರಸ್ತುತಿ

11ನೇ ತರಗತಿ ವಿದ್ಯಾರ್ಥಿನಿ ರಚನಾ, ತಾವು ಮತ್ತು ಅವರಂತೆಯೇ ವಿಶ್ವದ ಹಲವೆಡೆ ಇರುವ ಇನ್ನುಳಿದ 30ಕ್ಕೊ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಂಡು ಮನೆ ಪಾಠಕ್ಕಾಗಿ ತಯಾರಿಸಿ ಅಳವಡಿಸಿರುವ ತಂತ್ರಾಂಶವನ್ನು ಪ್ರಸ್ತುತ ಪಡಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾದರು.

ಅಕಾಡೆಮಿ ಸದಸ್ಯೆ ಸಂಧ್ಯಾ ಮಲ್ಲಿಕ್‌,  ಕಳೆದ 5 ವರ್ಷಗಳಿಂದ ಕನ್ನಡವನ್ನು ಕಲಿಸುತ್ತಿದ್ದು, ತಮ್ಮ ಅನುಭವ, ತಾವು ಎದುರಿಸಿದ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸಲು ಕನ್ನಡ ಅಕಾಡೆಮಿಯ ಪಠ್ಯಪುಸ್ತಕಗಳು ಮಾಡಿದ ಸಹಾಯದ ಬಗ್ಗೆ ಅನುಭವವನ್ನು ಹಂಚಿಕೊಂಡರು.

ಕೊನೆಗೆ ಕನ್ನಡಿಗರು ಯುಕೆ ಮತ್ತು ಕನ್ನಡ ಅಕಾಡೆಮಿ ಸದಸ್ಯರು ಬಂದ ಪ್ರಶ್ನೆಗಳಿಗೆ ಉತ್ತರಿಸಿ ಎರಡು ಗಂಟೆಗಳ ಸಮಾರಂಭಕ್ಕೆ ತೆರೆ ಎಳೆದರು.

ಉದ್ಘಾಟನೆ ಸಮಾರಂಭವನ್ನು ಜೂಮ್‌, ಫೇಸ್‌ಬುಕ್‌, ಟ್ವಿಟ್ಟರ್‌ ಸಹಿತ ಸಾಮಾಜಿಕ ಜಾಲತಾಣಗಳ ಮೂಲಕ ನೇರಪ್ರಸಾರ ಪ್ರಸಾರ ಮಾಡಲಾಯಿತು.

12 ವರ್ಷಗಳಿಂದ ಕನ್ನಡ ಕಲಿಕೆ ತರಬೇತಿ

ಇಂಗ್ಲೆಂಡ್‌ನ‌ಲ್ಲಿ ಹುಟ್ಟಿ ಬೆಳೆದ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕಳೆದ 12 ವರ್ಷಗಳಿಂದ ಕನ್ನಡಿಗರು ಯುಕೆ ಸಂಸ್ಥೆಯು ಹಲವು ಕೇಂದ್ರಗಳಲ್ಲಿ ಸ್ವಯಂ ಸೇವಕ ಶಿಕ್ಷಕರಿಂದ ಕನ್ನಡ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು, ಈಗ ಆನ್‌ಲೈನ್‌ ಮೂಲಕ ಕನ್ನಡ ಕಲಿ ಶಿಬಿರವನ್ನು ಆಯೋಜಿಸಿದೆ.

ಎಂದಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿವಾಣಿಯಂತೆ ಕೋವಿಡ್‌ ಮಹಾಮಾರಿಯಿಂದ ಉಂಟಾದ ಪರಿಸ್ಥಿತಿಯಿಂದಾಗಿ ಈ ಯೋಜನೆ ರೂಪಿಸಲಾಗಿದೆ. ಕಳೆದ ಒಂದುವರೆ ತಿಂಗಳ ಹಿಂದೆ ಸಂಸ್ಥೆಯು ತಮ್ಮ ಮಹತ್ತರವಾದ ಯೋಜನೆಯಾದ ಕನ್ನಡ ಕಲಿ ಕಾರ್ಯಕ್ರಮದ ಅಡಿಯಲ್ಲಿ ಯುಕೆಯಾದ್ಯಂತ ಕನ್ನಡ ಕಲಿಕೆಗೆ ಹೊಸ ಆಯಾಮದೊಂದಿಗೆ ಕಾಯಕಲ್ಪವನ್ನು ನೀಡಿದೆ.

ಇದನ್ನೂ ಓದಿ:ಬದುಕನ್ನೇ ಪ್ರಶ್ನಿಸುವ,ಕೆಣಕುವ ಮೂಕಜ್ಜಿ

ಈ ನಿಟ್ಟಿನಲ್ಲಿ ಕನ್ನಡಿಗರು ಮತ್ತು ಅವರ ಕುಟುಂಬದ ಮಕ್ಕಳಿಗೆ ಕನ್ನಡವನ್ನು ಕಲಿಯಲು ಮತ್ತು ಶಿಕ್ಷಕ ಶಿಕ್ಷಕಿಯರಿಗೆ ಕನ್ನಡವನ್ನು ಕಲಿಸಲು ಸರಳವಾಗುವಂತೆ ಹಲವು ಬದಲಾವಣೆಗಳೊಂದಿಗೆ ಮೊದಲನೇ  ಹಂತದ ಆನಲೈನ್‌ ತರಗತಿಗಳನ್ನು ಉದ್ಘಾಟಿಸಿತ್ತು.

ಸುಮಾರು 60ಕ್ಕೂ ಹೆಚ್ಚು ವಿವಿಧ ವಯೋಮಿತಿಯ ಆಸಕ್ತರು ಆನ್‌ಲೈನ್‌ ತರಗತಿಗಳಿಗೆ ನೋಂದಾಯಿಸಿಕೊಂಡು, ಬದಲಾವಣೆಗಳೊಂದಿಗಿನ ಹೊಸ ಆಯಾಮದ ಪಠ್ಯಕ್ರಮಗಳೊಂದಿಗೆ ಕಲಿಕೆ ಭರದಿಂದ ಸಾಗಿರುವಾಗಲೇ ಹಲವಾರು ಕೋರಿಕೆಗಳು ಇನ್ನುಳಿದ ಕಲಿಕಾ ಆಸಕ್ತರ ಕಡೆಯಿಂದ ಬರಲಾರಂಭಿಸಿದ್ದವು.

ಈ ಎಲ್ಲ ಕೋರಿಕೆಗಳನ್ನು  ಗಮನದಲ್ಲಿಟ್ಟುಕೊಂಡು ಸಂಸ್ಥೆಯು ಎರಡನೇ ಹಂತದ ತರಗತಿಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ತಯಾರಿ ಆರಂಭಿಸಿತ್ತು. ಎರಡನೇ ಹಂತಕ್ಕೆ ನೋಂದಣಿಯಾದ ಆರಂಭದ ಕೆಲವೇ ದಿನಗಳಲ್ಲಿ  60ಕ್ಕೂ ಹೆಚ್ಚು ಮಕ್ಕಳು ನೋಂದಾಯಿಸಿದ್ದರಿಂದ ತಾತ್ಕಾಲಿಕವಾಗಿ ನೋಂದಣಿ ಸ್ಥಗಿತಗೊಳಿಸಬೇಕಾಯಿತು.

ಗೋವರ್ಧನ ಗಿರಿ ಜೋಷಿ

 

Advertisement

Udayavani is now on Telegram. Click here to join our channel and stay updated with the latest news.

Next