ಭದ್ರಾವತಿ: ಜನಸಾಮಾನ್ಯರು ತಮ್ಮ ಆಸ್ತಿಗಳ ಕುರಿತು ನಗರಸಭೆಯಿಂದ ಖಾತೆ ಪಡೆಯಲು ಮತ್ತು ಕಂದಾಯ ಪಾವತಿಸಲು ಮತ್ತಿತರ ದಾಖಲಾತಿ ಪಡೆಯಲು ಬಯಸಿದಾಗ ದಲ್ಲಾಳಿಗಳ ಮೊರೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಇ-ಆಸ್ತಿ ದಾಖಲಾತಿ ಸ್ವೀಕರಿಸುವ ಮತ್ತು ನೀರಿನ ಕರ ಪಾವತಿಸುವ ಬ್ಯಾಂಕ್ ಮಾದರಿ ಕೌಂಟರ್‌ಗಳನ್ನು ನಗರಸಭೆಯಲ್ಲಿ ಆರಂಭಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಆಡಳಿತಾಧಿಕಾರಿ ಪ್ರಕಾಶ್ ಹೇಳಿದರು.
ನಗರಸಭೆಯ ಆವರಣದಲ್ಲಿ ಇ-ಆಸ್ತಿ ಮತ್ತು ನೀರಿನ ಕರ ಸ್ವೀಕರಿಸುವ ಕೌಂಟರ್ ಉದ್ಘಾಟಿಸಿ ನಂತರ ಸಿದ್ಧಪಡಿಸಿದ ಶಾಖಾ ಕೊಠಡಿ ವೀಕ್ಷಿಸಿ ಮಾತನಾಡಿದ ಅವರು, ಇ-ಆಸ್ತಿ ತೆರಿಗೆ ಪಾವತಿಯಿಂದ ಮತ್ತು ಇಂಟರ್‌ನೆಟ್ ವ್ಯವಸ್ಥೆಯಿಂದ ಜನರಿಗೆ ಪಾರದರ್ಶಕ ಆಡಳಿತ ನೀಡಿದಂತಾಗುತ್ತದೆ. ಅರ್ಜಿದಾರರಿಗೆ ಸತಾಯಿಸದೇ ದಾಖಲಾತಿ ದೊರೆಯುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ ಎಂದರು.
ಪೌರಾಯುಕ್ತ ಮನೋಹರ್ ಮಾತನಾಡಿ, ಕಚೇರಿಯಲ್ಲಿ ನಾವು ನಗರಸಭೆಯಲ್ಲಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಾಗ ಸುಮಾರು ಏಳೆಂಟು ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇಯಾಗದೆ ದಲ್ಲಾಳಿಗಳ ಮತ್ತಿತರರ ಕೈಗಳಲ್ಲಿ ಕಡತಗಳು ಸಿಲುಕಿ ನಾಗರಿಕರು ಪರದಾಡುವ ಪರಿಸ್ಥಿತಿಯಿತ್ತು.
ಜನರ ಸಮಸ್ಯೆಯನ್ನೆ ದಲ್ಲಾಳಿಗಳು ಮತ್ತಿತರರು ದುರ್ಬಳಕೆ ಮಾಡಿಕೊಂಡು ಖಾತೆ ಬದಲಾವಣೆಗೆ ಎಂಟರಿಂದ ಹತ್ತು ಸಾವಿರ ರೂಗಳನ್ನು ಪಡೆದು ಮೋಸ ಮಾಡುತ್ತಿದ್ದರು. ಬಿಲ್ ಕಲೆಕ್ಟರ್‌ಗಳು ಕಂದಾಯ ವಸೂಲಿ ಮಾಡಿ ಸತಾವಣೆ ಮಾಡುತ್ತಾ, ಹಣವನ್ನು ದಾಖಲಾತಿಯಲ್ಲಿ ನಮೂದು ಮಾಡದೆ ಪರದಾಟದ ದೂರುಗಳು ಸಾಮಾನ್ಯ ದೂರಾಗಿತ್ತು. ಇವೆಲ್ಲವನ್ನು ಗಮನಿಸಿ ನಾಗರಿಕರಿಗೆ ಈ ಮೋಸದ ಜಲದಿಂದ ಮುಕ್ತಿಕೊಡಿಸುವ ಸಲುವಾಗಿ ನಾವು ಕ್ಯಾಶ್ ಲೆಸ್ ಹಾಗೂ ಕಾಗದ ರಹಿತ ವ್ಯವಸ್ಥೆ ಮಾಡಬೇಕೆಂದು ಚಿಂತಿಸಿ ಜನರಿಗೆ ನ್ಯಾಯ ಕೊಡಿಸಲು ಮತ್ತು ಕೇವಲ ಏಳು ದಿನದಲ್ಲಿ ದಾಖಲೆ ಲಭಿಸುವಂತೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಾರ್ವಜನಿಕರು ಇನ್ನು ಮುಂದೆ ಮೋಸ ಹೋಗದೆ ಯಾರಿಗೂ ಹಣ ನೀಡದೆ ಪಾರದರ್ಶಕ ವ್ಯವಸ್ಥೆ ಸದುಪಯೋಗಕ್ಕೆ ಮುಂದಾಗಬೇಕೆಂಕು ಎಮದರು.
ಕಂದಾಯಾಧಿಕಾರಿ ರಾಜ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇ-ಕೌಂಟರ್ ಕೆಲಸ ಮಾಡುವ ವಿಧಾನ ಮತ್ತು ಇ ವ್ಯವಸ್ಥೆ ಜಾರಿಗೆ ತರಲು ಪೌರಾಯುಕ್ತರು ನಡೆಸಿದ ಪರಿಶ್ರಮವನ್ನು ಶ್ಲಾಘಿಸಿದರು. ಅಕೌಂಟೆಂಟ್ ಮಹಮ್ಮದ್ ಅಲಿ, ಪರಿಸರ ಇಂಜಿನಿಯರ್ ರುದ್ರೇಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರು ಸೇರಿದಂತೆ ಸಿಬ್ಬಂದಿ ಹಾಗೂ ತೆರಿಗೆದಾರರ ಸಂಘದ ಅಧ್ಯಕ್ಷ ಎಲ್.ವಿ.ರುದ್ರಪ್ಪ, ಜವರಯ್ಯ, ಆರ್.ವೇಣುಗೋಪಾಲ್ ಮುಂತಾದವರು ಉಪಸ್ಥತರಿದ್ದರು. ಇದೇ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳು ಶಿವಮೂರ್ತಿ ಎಂಬ ಕಟ್ಟಡ ಮಾಲೀಕರಿಗೆ ಇ-ಆಸ್ತಿ ದಾಖಲಾತಿ ವಿತರಿಸಿ ಚಾಲನೆ ನೀಡಿದರು.