ಕಾಪು: ಅಯೋಧ್ಯೆಯಲ್ಲಿ ಸುಮಾರು 1,500 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮ ಮಂದಿರ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ನಿರ್ಮಾಣ ಕೆಲಸಗಳು ನಡೆಯಲಿದ್ದು, ಅದಕ್ಕಾಗಿ ಸಾಮೂಹಿಕವಾಗಿ ನಿಧಿ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗಿದೆ. ನಿಧಿ ಸಮರ್ಪಣೆ ಮತ್ತು ಈ ಬಗ್ಗೆ ಮನೆ ಮನೆ ಪ್ರಚಾರದಲ್ಲಿ ತೊಡಗಿಕೊಳ್ಳುವ ಮೂಲಕ ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ಆರ್.ಎಸ್.ಎಸ್. ದಕ್ಷಿಣ ಮದ್ಯ ಕ್ಷೇತ್ರ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.
ಕಾಪು ಕೃತಿ ಎನ್ ಕ್ಲೇವ್ ಕಟ್ಟಡದಲ್ಲಿ ರವಿವಾರ ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕಾಪು ತಾಲೂಕು ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜ. 15ರಿಂದ ನಿಧಿ ಸಮರ್ಪಣೆ ಆರಂಭಗೊಳ್ಳಲಿದ್ದು, ಫೆ. 27ರವರೆಗೆ ನಡೆಯಲಿದೆ. ಜ.17ರಂದು ಸಾಮೂಹಿಕವಾಗಿ ನಿಧಿ ಸಮರ್ಪಣೆಗೆ ಯೋಚಿಸಲಾಗಿದೆ. ಅದಕ್ಕಾಗಿ ಸಂಘ ಪರಿವಾರವೂ ಸೇರಿದಂತೆ ಎಲ್ಲಾ ಸಂಘ-ಸಂಸ್ಥೆಗಳೂ ಜೊತೆ ಸೇರಿ ಸಾಮೂಹಿಕ ಅಭಿಯಾನ ನಡೆಸಲಿವೆ ಎಂದರು.
ರಾಮ ಜನ್ಮ ಭೂಮಿ ನಿರ್ಮಾಣ ಸಂಬಂಧಿಯಾಗಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಪಾಂಡುರಂಗ ಪ್ರಭು, ವಸಂತ ದೇವಾಡಿಗ, ಮಾಧವ ಸುವರ್ಣ, ರಮೇಶ್ ಪ್ರಭು ಮಟ್ಟಾರು, ವಾಸುದೇವ ಶ್ಯಾನುಭಾಗ್ ಪಾಂಗಾಳ, ಸುಂದರ ಪ್ರಭು ಶಿರ್ವ, ದಿನೇಶ್ ಪಾಟ್ಕರ್ ಮಟ್ಟಾರು, ಕೃಷ್ಣಮೂರ್ತಿ ಪಾಟ್ಕರ್ ಬಂಟಕಲ್ಲು, ಶ್ರೀಪತಿ ಕಾಮತ್ ಶಿರ್ವ, ಸದಾನಂದ ದೇವಾಡಿಗ ಉಚ್ಚಿಲ ಮೊದಲಾದವರನ್ನು ಸನ್ಮಾನಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ , ರಾಷ್ಟ್ರ ಸೇವಿಕಾ ಸಮಿತಿಯ ವಿಬಾಗ ಭೌದ್ದಿಕ್ ಪ್ರಮುಖ್ ರಾಜಲಕ್ಷ್ಮೀ ಸತೀಶ್, ವಿಭಾಗ ಸಹ ಪ್ರಚಾರ ಪ್ರಮುಖ್ ಸುರೇಶ್ ಹೆಜಮಾಡಿ ಉಪಸ್ಥಿತರಿದ್ದರು.
ನಿಧಿ ಸಂಗ್ರಹಣಾ ಅಭಿಯಾನ ತಾಲೂಕು ಸಂಯೋಜಕ ಕಿಶೋರ್ ಕುಂಜೂರು ಸ್ವಾಗತಿಸಿದರು. ಪ್ರಾಂತ ಸಹ ಶಾರೀರಿಕ್ ಪ್ರಮುಖ್ ಸತೀಶ್ ಕುತ್ಯಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.