Advertisement

54th IFFI ಉದ್ಘಾಟನೆ; ಶೀಘ್ರ ಭಾರತ ಮನೋರಂಜನಾ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ: ಠಾಕೂರ್

09:25 PM Nov 20, 2023 | Team Udayavani |

ಪಣಜಿ: ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ಚಂದ್ರನ ದಕ್ಷಿಣಧ್ರುವದಲ್ಲಿ ಚಂದ್ರಯಾನ ಪೂರ್ಣಗೊಳಿಸಿದ ದೇಶ ಭಾರತವು ಶೀಘ್ರದಲ್ಲಿಯೇ ಮನೋರಂಜನಾ ಕ್ಷೇತ್ರದಲ್ಲಿಯೂ ಜಗತ್ತಿನಲ್ಲಿ 3 ನೇ ಸ್ಥಾನಕ್ಕೆ ಬರಲಿದೆ. ಅಂತಾರಾಷ್ಟ್ರೀಯ ಚಲನಚಿತ್ತೋತ್ಸವವು 2047 ರ ಸಂದರ್ಭದಲ್ಲಿ ಜಗತ್ತಿನ ನಂಬರ್ 1 ಫೆಸ್ಟಿವಲ್ ಆಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಮಂತ್ರಿ ಅನುರಾಗ್ ಠಾಕೂರ್ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಗೋವಾ ರಾಜಧಾನಿ ಪಣಜಿ ಸಮೀಪದ ಬಾಂಬೋಲಿಂ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಸೋಮವಾರ (ನ 20) ಸಂಜೆ 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಭಾರತೀಯ ಸಾಂಸ್ಕೃತಿಕ ಛಾಪನ್ನು ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಏಷ್ಯಾ ಮತ್ತು ಇತರ ಪ್ರದೇಶಗಳಲ್ಲಿಯೂ ಕಾಣಬಹುದು. ಭಾರತದ ಯಾವುದೇ ಚಲನಚಿತ್ರಗಳನ್ನು ಪೈರಸಿ ಮಾಡಿದರೆ ಅಂತವರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇಂತಹ ಕಾನೂನನ್ನು ಕೇವಲ ಭಾರತದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿದೆ. ಯಾವುದೇ ಚಲನಚಿತ್ರಗಳನ್ನು ಕಳ್ಳತನ ಮಾಡುವಂತಿಲ್ಲ ಎಂದರು.

ಶೇ.‌40  ಪ್ರೋತ್ಸಾಹ ಧನ
ಭಾರತದಲ್ಲಿ ನಿರ್ಮಾಣಗೊಳ್ಳುವ ವಿದೇಶಿ ಚಿತ್ರಗಳಿಗೆ ಅವುಗಳ ನಿರ್ಮಾಣ ವೆಚ್ಚದ ಶೇ.‌40 ರಷ್ಟನ್ನು ಪ್ರೋತ್ಸಾಹ ಧನವನ್ನಾಗಿ ನೀಡುವುದಾಗಿ ಅನುರಾಗ್ ಠಾಕೂರ್ ತಿಳಿಸಿದರು.ಈ ಹಿಂದೆ ಶೇ.30 ರಷ್ಟು ನೀಡಲಾಗುತ್ತಿತ್ತು. ಅದನ್ನು ಈಗ 40 ಕ್ಕೆ ಏರಿಸಲಾಗಿದೆ. ಸುಮಾರು 30 ಕೋಟಿ ರೂ.ವರೆಗೂ ಪ್ರೋತ್ಸಾಹ ಧನ‌ ನೀಡಲಾಗುವುದು. ಇದಲ್ಲದೇ ಭಾರತೀಯ ಕಥಾವಸ್ತು ಬಳಸಿಕೊಂಡರೆ ಮತ್ತಷ್ಟು ನೆರವು ನೀಡಲಾಗುವುದು. ನಮ್ಮ ಉದ್ದೇಶ ಭಾರತದಲ್ಲಿ ಚಿತ್ರ ಮಾರುಕಟ್ಟೆಯಲ್ಲಿನ ಸಾಧ್ಯತೆ ಹೆಚ್ಚಿಸುವುದು ಹಾಗೂ ಭಾರತೀಯ ಕಥಾವಸ್ತುವಿಗೆ ಜಾಗತಿಕ ವೇದಿಕೆ ಕಲ್ಪಿಸುವುದು. ಈ ಎರಡೂ ಕೆಲಸ ಮಾಡುತ್ತಿದ್ದೇವೆ ಎಂದರು.

ಪ್ರಸಕ್ತ ಚಲನಚಿತ್ರೋತ್ಸವದಲ್ಲಿ 78 ದೇಶಗಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಕಳೆದ ವರ್ಷದ ಚಲನಚಿತ್ರಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇ 3 ರಷ್ಟು ಹೆಚ್ಚು ಚಲನಚಿತ್ರಗಳನ್ನು ಚಲನಚಿತ್ರೋತ್ಸವದಲ್ಲಿ ವೀಕ್ಷಿಸಬಹುದಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೋವಾ ಸಿಎಂ ಡಾ.ಪ್ರಮೋದ ಸಾವಂತ್ ಮಾತನಾಡಿ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾ ರಾಜ್ಯ ಖಾಯಂ ಸ್ಥಳವಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಹೊಸತನವನ್ನು ಕಾಣಬಹುದಾಗಿದೆ. 2004 ರಲ್ಲಿ ದಿ.ಮನೋಹರ್ ಪರೀಕರ್ ರವರು ಗೋವಾದಲ್ಲಿ ಆರಂಭಿಸಿದ ಚಲನಚಿತ್ರೋತ್ಸವ ಇಂದು ಜಗತ್ತಿನ ಚಲನಚಿತ್ರ ಕ್ಷೇತ್ರದ ವೇದಿಕೆಯಾಗಿ ನಿಂತಿದೆ. ಗೋವಾ ಸಿನಿಮಾ ವಲಯದಲ್ಲಿ ನಿಧಾನವಾಗಿ ಪ್ರಗತಿ ಸಾಧಿಸುತ್ತಿದೆ, ಗೋವಾ ಎಂಟರ್‍ಟೈನ್‍ಮೆಂಟ್ ಕಾರ್ಪೊರೇಷನ್ ರಾಜ್ಯದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲು ಉತ್ಸುಕವಾಗಿದೆ. ಫಿಲ್ಮ್‍ಸಿಟಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಜಗತ್ತಿನ ಎಲ್ಲ ಪ್ರತಿನಿಧಿಗಳಿಗೆ ಸ್ವಾಗತ ಕೋರುತ್ತೇನೆ ಎಂದರು.

ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ರವರಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್, ಕೇಂದ್ರ ಸಚಿವ ಶ್ರೀಪಾದ ನಾಯಕ್, ಶಾಹಿದ್ ಕಪೂರ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಬಾಲಿವುಡ್‍ನ ಹಲವು ನಟರು ಭಾಗವಹಿಸಿದ್ದು,  ಖುಷ್ಬೂ ಸುಂದರ್,  ಕರಣ್ ಜೋಹರ್, ಸನ್ನಿ ಡಿಯೋಲ್, ಶ್ರಿಯಾ ಸರನ್, ನುಸ್ರತ್ ಭರುಚಾ, ಪಂಕಜ್ ತ್ರಿಪಾಠಿ ಮತ್ತು ಇತರ ತಾರೆಯರ ಜತೆಗೆ ಸಂಗೀತಗಾರರಾದ ಶಾಂತನು ಮೊಯಿತ್ರಾ, ಶ್ರೇಯಾ ಘೋಷಾಲ್ ಮತ್ತು ಸುಖವಿಂದರ್ ಸಿಂಗ್, ನಟ ಮತ್ತು ನಿರೂಪಕಿ ಅಪರಶಕ್ತಿ ಖುರಾನಾ ಮತ್ತು ಕರಿಷ್ಮಾ ತನ್ನಾ ಕೂಡ ಉಪಸ್ಥಿತರಿದ್ದರು.

ವಿವಿಧ ಭಾಷೆಯ ಅನೇಕ ಸಿನಿ ಕಲಾವಿದರು, ನಿರ್ದೇಶಕರು, ಬರಹಗಾರರು ಮತ್ತು ಚಲನಚಿತ್ರ ಪ್ರೇಮಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನವೆಂಬರ್ 20 ರಂದು ಉದ್ಘಾಟನೆಗೊಂಡಿರುವ ಚಲನಚಿತ್ರೋತ್ಸವ ನವೆಂಬರ್ 28 ರ ವರೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next