Advertisement

ಪಡೀಲ್‌ ರೈಲ್ವೆ ಕೆಳಸೇತುವೆ ಉದ್ಘಾಟನೆ 

10:04 AM Nov 16, 2017 | Team Udayavani |

ಪಡೀಲ್‌: ರಾಷ್ಟ್ರೀಯ ಹೆದ್ದಾರಿಯ ಪಡೀಲ್‌ ರೈಲ್ವೇ ಕೆಳ ಸೇತುವೆಯ ಕಾಮಗಾರಿ ಹಲವು ತಾಂತ್ರಿಕ ಹಾಗೂ ಕಾನೂನಾತ್ಮಕ ಕಾರಣಗಳಿಂದ ವಿಳಂಬವಾಗಿತ್ತು. 16.50 ಕೋಟಿ ರೂ. ವೆಚ್ಚಗಳಲ್ಲಿ ನಿರ್ಮಾಣಗೊಂಡ 62 ಮೀ. ಉದ್ದದ ಸೇತುವೆಯು ಈಗ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಅವರು ಬುಧವಾರ ಪಡೀಲ್‌ ರೈಲ್ವೇ ಕೆಳಸೇತುವೆಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಕಾಮಗಾರಿಗೆ ವೇಗ
ಕೆಳಸೇತುವೆಯ ನಿಧಾನಗತಿಯ ಕಾಮಗಾರಿಯಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ್ದರು. ಆದರೆ ಇನ್ನು ಮುಂದೆ ಅಂತಹ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಮಳೆಯ ಕಾರಣದಿಂದಲೂ ಕಾಮಗಾರಿ ವಿಳಂಬವಾಗಿತ್ತು. ಸೇತುವೆಯ ಕಾಮಗಾರಿಯ ವೇಳೆಯಲ್ಲಿ ಸ್ಥಳೀಯರು ತೀವ್ರ ತೊಂದರೆಯನ್ನು ಅನುಭವಿಸಿದ್ದರು. ಈ ಭಾಗದ ಸಚಿವರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ಸಹಕಾರದಿಂದ ಕಾಮಗಾರಿ ಪೂರ್ಣಗೊಂಡಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮರೆತು ಕೆಲಸ ಮಾಡಿದಾಗಲೇ ಕಾಮಗಾರಿ ಉತ್ತಮವಾಗಿ ಮೂಡಿಬರುತ್ತದೆ. ಜಿಲ್ಲೆಯಲ್ಲಿ ಮಳೆಯ ಕಾರಣದಿಂದ ಸುಮಾರು 6 ತಿಂಗಳ ಕಾಲ ಯಾವುದೇ ಕಾಮಗಾರಿ ನಡೆಯುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳು ವೇಗವನ್ನು ಪಡೆದುಕೊಳ್ಳಲಿವೆ ಎಂದರು.

ಹಳೆ ರೈಲ್ವೇ ಬ್ರಿಡ್ಜ್ ಕಾಮಗಾರಿ ಮುಂದಿನ ವಾರ ಆರಂಭ
ಮುಂದಿನ ವಾರದಿಂದ ಪಡೀಲು ಹಳೆ ರೈಲ್ವೇ ಬ್ರಿಡ್ಜ್ನ ಕಾಮಗಾರಿ ಆರಂಭಗೊಳ್ಳಲಿದೆ. ಹಳೆ ಸೇತುವೆ ತೆರೆದ ಸ್ಥಿತಿಯಲ್ಲಿರುವುದರಿಂದ ರೈಲು ತೆರಳುವ ಸಂದರ್ಭದಲ್ಲಿ ದ್ವಿಚಕ್ರ ಸವಾರರು ತೊಂದರೆ ಅನುಭವಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಅದು ನಿವಾರಣೆಯಾಗಲಿದೆ. ಆ ಕಾಮಗಾರಿಯನ್ನು ರೈಲ್ವೇ ಇಲಾಖೆಯವರೇ ಮಾಡುವುದರಿಂದ ಮೂರ್‍ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ವಾಹನ ಸಂಚಾರ ಆರಂಭ
ಉದ್ಘಾಟನೆಯ ಬಳಿಕ ರೈಲ್ವೇ ಕೆಳಸೇತುವೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದೆ.

ಸೇತುವೆ ವಿಶೇಷತೆ
ಸೇತುವೆಯು ಒಳಭಾಗದಲ್ಲಿ 5.50 ಮೀ. ಎತ್ತರ ಹಾಗೂ 12.50 ಮೀ. ಅಗಲವನ್ನೂ ಹೊಂದಿದ್ದು, ಯಾವುದೇ ವಾಹನ ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ಸಾಮಾನ್ಯವಾಗಿ ಸಾಗುವ ಅತಿ ಎತ್ತರದ ವಾಹನಗಳಾಗಿರುವ ಕಾರು ಸಾಗಾಟದ ಕಂಟೈನರ್‌ 4.8 ಮೀ. ಎತ್ತರವನ್ನು ಒಳಗೊಂಡಿರುತ್ತದೆ. ಹೀಗಾಗಿ ಸೇತುವೆಯಲ್ಲಿ ಅವುಗಳ ಸಂಚಾರಕ್ಕೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಎನ್‌ಎಚ್‌ಎಐನ ಸೈಟ್‌ ಎಂಜಿನಿಯರ್‌ ಅಜಿತ್‌ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next