Advertisement

ನಾಳೆ ಉಪ್ಪೂರು ಡೈರಿ ಉದ್ಘಾಟನೆ

12:50 AM Jan 28, 2019 | Team Udayavani |

ಉಡುಪಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ  ಉಪ್ಪೂರು ಘಟಕದ ಉದ್ಘಾಟನೆ ಜ. 29ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಣಿಪಾಲ ಡೈರಿ 1976ರಿಂದ ಕಾರ್ಯಾಚರಿಸುತ್ತಿದ್ದು 2,000 ಲೀ. ಸಂಸ್ಕರಣಾ ಸಾಮರ್ಥ್ಯ ಹೊಂದಿತ್ತು. ಸದ್ಯ 80 ಸಾವಿರ ಲೀ.ಗೆ ಹೆಚ್ಚಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯ ಬೇಡಿಕೆ ಪೂರೈಸಲು 1.5 ಲಕ್ಷ ಲೀ. ಸಾಮರ್ಥ್ಯದ ಡೈರಿಯ ಆವಶ್ಯಕತೆ ಇದೆ. ಮುಂದಿನ 5 ವರ್ಷಗಳ ಬೆಳವಣಿಗೆಯನ್ನು ಗಮನಿಸಿ ದಿನಕ್ಕೆ 2.5 ಲಕ್ಷ ಲೀ. ಸಾಮರ್ಥ್ಯದ ಡೈರಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.

Advertisement

ಆಧುನಿಕ ತಂತ್ರಜ್ಞಾನ
ಆರು ಎಕರೆ ಪ್ರದೇಶದಲ್ಲಿರುವ ಈ ಘಟಕ ಸ್ವಯಂ ಚಾಲಿತ ಸಂಸ್ಕರಣ ವ್ಯವಸ್ಥೆ ಹೊಂದಿದೆ. ಇಲ್ಲಿ ದಿನಕ್ಕೆ
2 ಲಕ್ಷ ಲೀ. ಹಾಲು ಸಂಸ್ಕರಣೆ, 50 ಸಾವಿರ ಕೆ.ಜಿ. ಮೊಸರು, ಲಸ್ಸಿ, ಮಜ್ಜಿಗೆ ತಯಾರಿಕೆ-ಪ್ಯಾಕಿಂಗ್‌, 2 ಟನ್‌ ತುಪ್ಪ ತಯಾರಿಸಲಾಗುತ್ತದೆ ಎಂದು ವಿವರಿಸಿದರು.

ಪರಿಸರ ಸಂರಕ್ಷಣೆ ಉದ್ದೇಶ
ಕಾನ್ಸಂಟ್ರೇಟೆಡ್‌ ಸೋಲಾರ್‌ ಥರ್ಮಲ್‌ ಪವರ್‌ ವ್ಯವಸ್ಥೆಯನ್ನು ಸ್ಥಾವರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಬಿಸಿನೀರನ್ನು ಕ್ರೇಟು, ಯಂತ್ರೋಪಕರಣ, ಟ್ಯಾಂಕರ್‌ ತೊಳೆಯಲು ಮತ್ತು ಹಬೆ ಯಂತ್ರದಲ್ಲಿ ಶಕ್ತಿ ಉಳಿತಾಯಕ್ಕಾಗಿ ಉಪಯೋಗಿಸಲಾಗುವುದು. ಒಕ್ಕೂಟ ಪ್ರಸ್ತುತ ದಿನಕ್ಕೆ 4.50 ಲಕ್ಷ ಲೀ. ಹಾಲು ಶೇಖರಿಸುತ್ತಿದೆ. ಹಾಲು ಮಾರಾಟವು 3.5 ಲಕ್ಷ ಲೀ. ದಾಟಿದೆ ಎಂದು ತಿಳಿಸಿದರು.

ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಟಿ. ಸೂರ್ಯ ಶೆಟ್ಟಿ, ಹದ್ದೂರು ರಾಜೀವ ಶೆಟ್ಟಿ, ಜಾನಕಿ ಹಂದೆ, ಅಶೋಕ್‌ ಕುಮಾರ್‌ ಶೆಟ್ಟಿ, ಉದಯ ಎಸ್‌. ಕೋಟ್ಯಾನ್‌, ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ, ವ್ಯವಸ್ಥಾಪಕ ಅಭಿಯಂತರ ಜಿ.ಎ. ರಾಯ್ಕರ್‌, ಶೇಖರಣೆ ಮತ್ತು ತಾಂತ್ರಿಕ ವ್ಯವಸ್ಥಾಪಕ ನಿತ್ಯಾನಂದ ಭಕ್ತ, ಡೈರಿ ವ್ಯವಸ್ಥಾಪಕ ಶಿವಶಂಕರ ಸ್ವಾಮಿ, ಮಾರುಕಟ್ಟೆಯ ಪ್ರಭಾರ ವ್ಯವಸ್ಥಾಪಕ ಜಯದೇವ್‌, ಉಪವ್ಯವಸ್ಥಾಪಕ ಲಕ್ಕಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

ಉದ್ಘಾಟನೆಗೆ ಮುಖ್ಯಮಂತ್ರಿ
ಡೈರಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸುವರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸಚಿವರಾದ ಎಚ್‌.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ವೆಂಕಟರಾವ್‌ ನಾಡ ಗೌಡ, ಡಾ| ಜಯಮಾಲಾ, ಯು.ಟಿ. ಖಾದರ್‌, ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲು ವಿವಿಧ ಘಟಕಗಳನ್ನು ಉದ್ಘಾಟಿಸುವರು. ಶಾಸಕ ರಘುಪತಿ ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ರವಿರಾಜ ಹೆಗ್ಡೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next