ಬೆಂಗಳೂರು: ಹೊಸದಾಗಿ ರಚಿಸಿಕೊಂಡಿರುವ ಕರ್ನಾಟಕ ಕೇಟರರ್ಸ್ ಒಕ್ಕೂಟ (ಎಫ್ಕೆಸಿ)ವನ್ನು ರಾಜ್ಯಪಾಲ ವಿ.ಆರ್.ವಾಲಾ ಅವರು ಸೋಮವಾರ ಉದ್ಘಾಟಿಸಿದರು.
ಒಕ್ಕೂಟದ ವತಿಯಿಂದ ಸೋಮವಾರ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಒಕ್ಕೂಟಕ್ಕೆ ಚಾಲನೆ ನೀಡುವ ಜತೆಗೆ, ಕೇಟರಿಂಗ್ ಉದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಉದ್ಯಮಿಗಳನ್ನು ಸನ್ಮಾನಿಸಿದರು.
ಬಳಿಕ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಿ.ಕೆ.ಶೆಟ್ಟಿ, ಕೇಟರಿಂಗ್ ಕ್ಷೇತ್ರವು 3 ಲಕ್ಷಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸಿದ್ದು, ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಈ ಕ್ಷೇತ್ರ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ 2 ಸಾವಿರ ಜನ ಅಧಿಕೃತವಾಗಿ ಒಕ್ಕೂಟದ ಸದಸ್ಯತ್ವ ಪಡೆದುಕೊಂಡಿದ್ದು, ಇದರ ಹೊರತಾಗಿಯೂ ಸಣ್ಣ ಪ್ರಮಾಣದಲ್ಲಿ ವ್ಯವಹಾರ ನಡೆಸುವಂತಹ ಅನೇಕ ಕೇಟರರ್ಸ್‌ಗಳಿದ್ದಾರೆ. ಅವರಿಗೆ ಕಾನೂನಿನ ಅರಿವಿಲ್ಲದ ಕಾರಣದಿಂದ ಅವರ ನೆರವಿಗೆ ಒಕ್ಕೂಟ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಎಂಜಿಆರ್ ಸಮೂಹದ ಮುಖ್ಯಸ್ಥ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ಸಣ್ಣ ಹೊಟೇಲ್‌ನಿಂದ ಆರಂಭಗೊಂಡ ಎಂಜಿಆರ್ ಉದ್ಯಮವಿಂದು ಎರಡು ರಾಷ್ಟ್ರೀಯ ಕ್ರೀಡೆಗಳಿಗೆ ಕೇಟರಿಂಗ್ ಮಾಡುವವರೆಗೆ ಬೆಳೆದಿದೆ.
ನನ್ನ ಹಾಗೆಯೇ ಅನೇಕರು ಉನ್ನತ ಗುರಿಗಳನು ಹೊಂದಿದ್ದು, ಕಠಿಣ ಪರಿಶ್ರಮದಿಂದ ಮಾತ್ರವೇ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ. ಹೀಗಾಗಿ ಸವಾಲುಗಳನ್ನು ಮೆಟ್ಟಿ ನಿಲ್ಲುವುದನ್ನು ಕಲಿಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಫ್ಎಐಸಿ ಅಧ್ಯಕ್ಷ ನರೇಂದ್ರ ಸೋಮಾಣಿ, ಕಾರ್ಯದರ್ಶಿ ಕಿರಿತ್ ಬುದ್ಧದೇವ, ದಕ್ಷಿಣ ವಲಯದ ಅಧ್ಯಕ್ಷ ಅತುಲ್ ಮೆಹ್ತಾ, ಎಫ್ಕೆಸಿ ಸಂಸ್ಥಾಪಕ ಅಧ್ಯಕ್ಷ ಪಂಕಜ್ ಕೋಠಾರಿ, ಕಾರ್ಯದರ್ಶಿ ರಬೀಂದ್ರಕುಮಾರ್ ಹಾಜರಿದ್ದರು.