ಧಾರವಾಡ: ಪ್ರತಿಯೊಬ್ಬ ಕ್ರೀಡಾಪಟುವೂ ಕ್ರೀಡಾ ಮನೋಭಾವದಿಂದಲೇ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ನಗರದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ನವೋದಯ ವಿದ್ಯಾಲಯ ಸಮಿತಿಯ ಹೈದರಾಬಾದ್ ಪ್ರಾಂತದ ವತಿಯಿಂದ ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ನ್ಯಾಷನಲ್ ಟೆಕ್ವಾಂಡೋ ಮೀಟ್ -2017 ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸೋಲಿಗೆ ಕುಗ್ಗದೆ ಗೆಲುವಿಗೆ ಹಿಗ್ಗದೆ ಎಲ್ಲವನ್ನೂ ಸಮಾನ ರೀತಿಯಲ್ಲಿ ಸ್ವೀಕರಿಸುವ ಮನೋಭಾವ ಅಳವಡಿಸಿಕೊಳ್ಳಬೇಕು. ಕ್ರೀಡೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳು ಎಚ್ಚರ ವಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಹೈದರಾಬಾದ್‌ನ ನವೋದಯ ವಿದ್ಯಾಲಯದ ಸಮಿತಿಯ ಉಪ ಆಯುಕ್ತ ಎ.ವೈ. ರೆಡ್ಡಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡಾ ಮನೋಭಾವದಿಂದ ಭಾಗವಹಿಸಿದರೆ ಮಾತ್ರವೇ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು.
ಸನ್ಮಾನ: ಧಾರವಾಡ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಧಾರವಾಡ ನವೋದಯ ಮಹಾವಿದ್ಯಾಲಯದ ಸಹಾಯಕ ಆಯುಕ್ತ ಟಿ. ಗೋಪಾಲಕೃಷ್ಣ, ಏಷಿಯನ್ ಕ್ರೀಡಾಕೂಟದ ಬಂಗಾರ ಪದಕ ವಿಜೇತೆ ಪ್ರೇಮಾ ಹುಚ್ಚಣ್ಣವರ, ಕ್ಯಾರಕೊಪ್ಪ ಪಂಚಾಯಿತಿ ಅಧ್ಯಕ್ಷ ಉಳವಪ್ಪ ದೊಡ್ಡವಾಡ, ಪಿಟಿಸಿ ಸದಸ್ಯ ಮಡಿವಾಳಪ್ಪ ಭೋವಿ ಹಾಗೂ ರಮೇಶ ಹೊನ್ನಿನಾಯ್ಕರ್ ಅವರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗ ನವೋದಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಡೊಳ್ಳು ಕುಣಿತ, ಧಾರವಾಡ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್ ಹಾಗೂ ವಿದ್ಯಾರ್ಥಿನಿಯರ ಕುಂಭ ಮೇಳದೊಂದಿಗೆ ಗಣ್ಯರು ಹಾಗೂ ಕ್ರೀಟಾಪಟುಗಳನ್ನು ಸ್ವಾಗತಿಸಲಾಯಿತು. ಕ್ರೀಡಾಕೂಟದಲ್ಲಿ ಭೋಪಾಲ್, ಚಂಡೀಗಢ, ಹೈದರಾಬಾದ್, ಜೈಪುರ, ಲಕ್ನೋ, ಪಾಟ್ನಾ, ಶಿಲೋಂಗ್, ಪುಣೆ, ಹೈದರಾಬಾದ್ ಸೇರಿದಂತೆ ಒಟ್ಟು 8 ಪ್ರಾಂತಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಧಾರವಾಡ ನವೋದಯ ಮಹಾವಿದ್ಯಾಲಯದ ಪ್ರಾಚಾರ್ಯೆ ಸುಧಾ ವಿ.ಬಿ., ಶಿಕ್ಷಕಿ ವಿಜಯಲಕ್ಷಿ ಹಳಕಟ್ಟಿ, ಗೀತಾ ಗೋಡಖೀಂಡಿ, ಉಮಾದೇವಿ ಸೇರಿದಂತೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.