ಬಂಗಾರಪೇಟೆ: ತಾಲೂಕಿನ ದೊಡೂxರು ಕರಪನಹಳ್ಳಿಯಲ್ಲಿ ಗ್ರಾಪಂ ಕಟ್ಟಡ ನಿರ್ಮಾಣಗೊಂಡು ಮೂರು ತಿಂಗಳಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದರಿಂದ ಹಳೇ ಕಟ್ಟಡದಲ್ಲೇ ಸಿಬ್ಬಂದಿ ಕಾರ್ಯನಿರ್ವಹಿಸುವಂತಾಗಿದೆ.
ಜಿಲ್ಲೆಯಲ್ಲೇ ಅತಿದೊಡ್ಡ ಗ್ರಾಮ ಪಂಚಾಯ್ತಿ ಆಗಿರುವ (30 ಸದಸ್ಯರು) ದೊಡೂxರು ಕರಪನಹಳ್ಳಿ ಪಂಚಾಯ್ತಿ ಹಾಲಿ ಕಟ್ಟಡ ತುಂಬಾ ಕಿರಿದಾಗಿದೆ. ಇದರಿಂದ ಆರಾಮವಾಗಿ ಸಭೆ ನಡೆಸಲೂ ಸಹ ಆಗುತ್ತಿಲ್ಲ. ಹೀಗಾಗಿ ಗ್ರಾಮ ಹೊರವಲಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 30 ಲಕ್ಷ ರೂ. ಖರ್ಚು ಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ.ಆದರೆ, ಬಳಕೆಗೆ ವಿಳಂಬ ಮಾಡುತ್ತಿರುವುದರಿಂದ ಈಗಾಗಲೇ ಕಟ್ಟಡದಲ್ಲಿನ ಕಿಟಕಿಗಳ ಗಾಜುಗಳು ಒಡೆದು ಹಾಕಲಾಗಿದೆ.
ಒಡೆದ ಕಿಟಕಿ ಗಾಜು: ಗ್ರಾಪಂ ಕಟ್ಟಡ ಕಾಮಗಾರಿ ಮುಗಿದು ಮೂರು ತಿಂಗಳಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಘಾಟನೆಗೊಳ್ಳದೆ, ಪಾಳು ಬಿದ್ದಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಕಟ್ಟಿದ ಕಟ್ಟಡ ನಿರ್ವಹಣೆ, ಬಳಕೆ ಮಾಡದ ಕಾರಣ ಕಿಟಕಿ ಗಾಳುಗಳು ಒಡೆದು ಮತ್ತೆ ದುರಸ್ತಿಗೆ ಸಾವಿರಾರು ರೂ. ಖರ್ಚು ಮಾಡಬೇಕಿದೆ.
ದೊಡೂರು ಕರಪನಹಳ್ಳಿ ಗ್ರಾಪಂ ಕಟ್ಟಡವನ್ನು ಇದೇ ಗ್ರಾಮಕ್ಕೆ ಹಾದುಹೋಗುವ ಮಾರ್ಗ ಮಧ್ಯೆ ನಿರ್ಮಾಣ ಮಾಡಲಾಗಿದೆ. ಕಟ್ಟಡದ ಸುತ್ತಮುತ್ತಲೂ ಯಾವುದೇ ಖಾಸಗಿ ಕಟ್ಟಡಗಳೂ ಇಲ್ಲವಾಗಿವೆ. ಈ ಗ್ರಾಪಂನಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಬೆಂಬಲಿತರೇ ಗೆದ್ದಿದ್ದರೂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರನ್ನು ಸದಸ್ಯರು ಆಯ್ಕೆ ಮಾಡುವು ದರ ಮೂಲಕ ಆ ಪಕ್ಷ ಬೆಂಬಲಿತರಿಗೆ ಹಿನ್ನಡೆ ಆಗಿದೆ.ಹಾಲಿ ಗ್ರಾಪಂ ಅಧ್ಯಕ್ಷೆ ಕಲಾವತಿ ರಮೇಶ್ ಮೂಲ ಬಿಜೆಪಿಯವರಾಗಿದ್ದು, ಉಪಾಧ್ಯಕ್ಷೆ ರಾಧಮ್ಮ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಘಟಾನುಘಟಿಗಳು ಕಾಂಗ್ರೆಸ್ ಮುಖಂಡರಿದ್ದರೂ ಇಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಹೇಶ್ ತನ್ನ ಹಿಡಿತ ಸಾಧಿಸಿಕೊಂಡಿದ್ದಾರೆ. ಈ ಗ್ರಾಪಂನ ವ್ಯಾಪ್ತಿಯು ಪಟ್ಟಣ ಪಂಚಾಯ್ತಿಗೆ ಇರುವ ವ್ಯಾಪ್ತಿ ಯನ್ನು ಹೊಂದಿದೆ. ಈ ಗ್ರಾಪಂನಲ್ಲಿ ಬೆಮಲ್ ನೌಕ ರರೇ ಹೆಚ್ಚಾಗಿ ವಾಸಿಸುತ್ತಾರೆ. ಈ ಗ್ರಾಪಂನಲ್ಲಿ ಶಾಸಕ ಎಸ್. ಎನ್. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲು ಸಾಕಷ್ಟು ಪ್ರಯತ್ನ ಮಾಡಿದರೂ ಬಿಜೆಪಿ ಮೇಲುಗೈ ಸಾಧಿಸಿದೆ. ಅಧಿಕಾರಿ ಗಳ ನಿರ್ಲಕ್ಷ್ಯ, ರಾಜಕೀಯ ಕಾರಣಗಳಿಂದ ಕಟ್ಟಡ ಉದ್ಘಾಟನೆ ತಡವಾಗುತ್ತಿದೆ. ಆದಷ್ಟು ಬೇಗನೆ ಕಟ್ಟಡ ಬಳಕೆಯಾಗಲಿ ಎನ್ನುವುದೇ ಸ್ಥಳೀಯರ ಅಭಿಲಾಷೆಯಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕಟ್ಟಡ ನಿರ್ಮಿಸಲಾಗಿದೆ. ಕಾಮಗಾರಿಯು ಪೂರ್ಣಗೊಂಡಿದೆ. ಆದಷ್ಟು ಬೇಗ ಸಾಮಾನ್ಯ ಸಭೆ ಕರೆದು ದಿನಾಂಕ ನಿಗದಿ ಮಾಡಿ ಸರ್ಕಾರದ ಶಿಷ್ಟಾಚಾರದಂತೆ ಕಟ್ಟಡ ಉದ್ಘಾಟನೆ ಮಾಡಲಾಗುವುದು.
●ಕಲಾವತಿ ರಮೇಶ್, ಅಧ್ಯಕ್ಷರು,
ದೊಡ್ಡೂರು ಕಪರನಹಳ್ಳಿ ಗ್ರಾಪಂ
30 ಲಕ್ಷ ರೂ.ನಲ್ಲಿ ಒಂದೂವರೆ ವರ್ಷದ ಹಿಂದೆ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ. ಬಹುತೇಕ ಪೂರ್ಣಗೊಂಡಿದೆ. ಸಣ್ಣಪುಟ್ಟ ಕೆಲಸಗಳು ಬಾಕಿ ಇದೆ. ಈ ಗ್ರಾಪಂಗೆ ಇತ್ತೀಚಿಗೆ ವರ್ಗವಾಗಿ ಬಂದಿದ್ದೇನೆ. ಅಧ್ಯಕ್ಷರ ಸೂಚನೆ ಮೇರೆಗೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ದಿನಾಂಕ ನಿಗದಿಗೊಳಿಸಿ, ಮೇಲಧಿಕಾರಿಗಳ ಸಲಹೆಯಂತೆ ಕಟ್ಟಡ ಉದ್ಘಾಟಿಸಲಾಗುವುದು.
●ಭಾಸ್ಕರ್, ಪಿಡಿಒ, ದೊಡ್ಡೂರು ಕರಪನಹಳ್ಳಿ ಗ್ರಾಪಂ
●ಎಂ.ಸಿ.ಮಂಜುನಾಥ್