ಕಲಬುರಗಿ: ಪ್ರಕರಣವೊಂದರ ವಿಚಾರಣೆ ನಡೆಸದಂತೆ ಕಲಬುರಗಿ ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ದಂಡಾಧಿಕಾರಿಗಳಿಗೆ ನೋಟಿಸ್ ನೀಡಿದ್ದಲ್ಲದೆ, ಕಚೇರಿ ಮುಂದೆ ಅನುಚಿತವಾಗಿ ವರ್ತಿಸಿ, ರಂಪಾಟ ಮಾಡಿದ ಮಹಿಳೆಯೋರ್ವಳನ್ನು ಬುಧವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.
ಸಪ್ನಾ ಪೊಲೀಸರು ಬಂಧಿಸಿರುವ ಮಹಿಳೆ.
ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಅನಿಯಮ-2007ರ ಕಲಂ 16ರ ಅಡಿ ಸಲ್ಲಿಸಲಾಗಿರುವ ಮೇಲ್ಮನವಿಗೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ದಂಡಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಚಾರಣೆಗೆ ಮಹಿಳೆ ಹಾಜರಾಗಿದ್ದರು.
ಈ ಸಂದರ್ಭದಲ್ಲಿ 30 ದಿನಗಳ ಕಾಲ ಮೇಲ್ಮನವಿಯ ವಿಚಾರಣೆ ಮಾಡಬಾರದು ಹಾಗೂ ಸದರಿ ಪ್ರಕರಣವನ್ನು ಬೇರೊಂದು ಪ್ರಕಾರಕ್ಕೆ ವರ್ಗಾಯಿಸಬೇಕೆಂದು ಜಿಲ್ಲಾ ದಂಡಾಕಾರಿಗಳಿಗೆ ನೋಟೀಸ್ ನೀಡಿದ್ದರು. ಜೊತೆಗೆ ನನ್ನ ವಿರುದ್ಧ ತೀರ್ಪು ನೀಡುತ್ತೀರಿ ಎಂದೆಲ್ಲಾ ಮಹಿಳೆ ಕಚೇರಿ ಮುಂದೆ ರಂಪಾಟ ಮಾಡಿದ್ದರಿಂದ ಪ್ರಕರಣ ದಾಖಲಿಸಿ, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಶಿವಶರಣಪ್ಪ ತಂದೆ ಶಿವಲಿಂಗಪ್ಪ ಮಂಗಲಗಿ ಅವರು ತನ್ನ ಮಗ ರಾಜಶೇಖರ ತಂದೆ ಶಿವಶರಣಪ್ಪ ಮಂಗಲಗಿ ಹಾಗೂ ಈತನ ಪತ್ನಿ ಸಪ್ನಾ ಅವರು ತನ್ನನ್ನು ಹಾಗೂ ತನ್ನ ಪತ್ನಿಯನ್ನು ಪೋಷಣೆ ಮಾಡುತ್ತಿಲ್ಲ. ಆಳಂದ ರಸ್ತೆಯ ವಿಜಯ ನಗರ ಕಾಲೋನಿಯಲ್ಲಿ ಇರುವ ಸ್ವ-ಅರ್ಜಿತ ಮನೆಯನ್ನು ಸೊಸೆ ಮತ್ತು ಮಗ ಕಬ್ಜಾ ಮಾಡಿಕೊಂಡಿದ್ದು, ತನಗೆ ವಹಿಸಿಕೊಡುವಂತೆ ಹಿರಿಯ ನಾಗರಿಕರ ನಿರ್ವಹಣಾ ಮಂಡಳಿಯ ಅಧ್ಯಕ್ಷರೂ ಆಗಿರುವ ಕಲಬುರಗಿ ಸಹಾಯಕ ಆಯುಕ್ತರು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.
ಈ ನಡುವೆ ದಿನಾಂಕ: 28-12-2013 ರಂದು ಕಲಬುರಗಿ ಕುಟುಂಬ ನ್ಯಾಯಾಲಯದಲ್ಲಿ ಸಪ್ನಾ ಮತ್ತು ಗಂಡ ರಾಜಶೇಖರ ಮಂಗಲಗಿ ಅವರು ವಿಚ್ಛೇದನ ಪಡೆದಿರುತ್ತಾರೆ. ಕಲಬುರಗಿ ನ್ಯಾಯಾಲಯ ವಿಚ್ಛೇದನ ನೀಡಿರುವ ಹಿನ್ನೆಲೆಯಲ್ಲಿ ಪಾಲಕರ ಪೋಷಣೆ ಹಾಗೂ ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಕಲ್ಯಾಣ ಅನಿಯಮ 2007ರ ಕಲಂ 9ರ ಅಡಿ ಕಲಬುರಗಿ ಸಹಾಯಕ ಆಯುಕ್ತರು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳು, ಅನಧಿಕೃತವಾಗಿ ಕಬ್ಜಾ ಮಾಡಿರುವ ಮನೆಯನ್ನು ಮನವಿದಾರರರಾದ ಶಿವಶರಣಪ್ಪ ತಂದೆ ಶಿವಲಿಂಗಪ್ಪ ಮಂಗಲಗಿ ಅವರಿಗೆ ಹಸ್ತಾಂತರಿಸುವಂತೆ ದಿನಾಂಕ: 20-01-2020 ರಂದು ಆದೇಶ ನೀಡಿರುತ್ತಾರೆ.
ಈ ನಡುವೆ ಶಿವಶರಣಪ್ಪ ತಂದೆ ಶಿವಲಿಂಗಪ್ಪ ಮಂಗಲಗಿ ಅವರು ತನ್ನ ಸ್ವ-ಅರ್ಜಿತ ಮನೆಯನ್ನು ತಮ್ಮ ಧರ್ಮಪತ್ನಿ ಪುಷ್ಪಾವತಿ ಅವರಿಗೆ ನೀಡಬೇಕೆಂದು 2019ರಲ್ಲಿ ವಿಲ್ ಪತ್ರ ಬರೆದು 2020ರಲ್ಲಿ ನಿಧನ ಹೊಂದಿರುತ್ತಾರೆ. ಕಲಬುರಗಿ ಸಹಾಯಕ ಆಯುಕ್ತರು 20-01-2020 ರಂದು ಆದೇಶ ನೀಡಿದ್ದರೂ ಸಪ್ನಾ ಗಂಡ ರಾಜಶೇಖರ ಮಂಗಲಗಿ ಅವರು ಮನೆಯನ್ನು ತನ್ನ ಅತ್ತೆಯಾದ ಪುಷ್ಪಾವತಿ ಅವರಿಗೆ ವಹಿಸದೇ ಅನಧಿಕೃತವಾಗಿ ತಾನೇ ವಾಸವಾಗಿದ್ದಲ್ಲದೆ, ಕಲಬುರಗಿ ಉಪ ವಿಭಾಗೀಯ ದಂಡಾಧಿಕಾರಿಗಳು ಮತ್ತು ಸಹಾಯಕ ಆಯುಕ್ತರ ಆದೇಶದ ವಿರುದ್ಧ ಜಿಲ್ಲಾ ದಂಡಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು.