Advertisement

ಅಸಮರ್ಪಕ ಚರಂಡಿ ಕಾಮಗಾರಿ: ಮನೆಯಂಗಳಕ್ಕೆ ನುಗ್ಗಿದ ಮಳೆ ನೀರು

11:21 PM Jul 11, 2019 | sudhir |

ಕುಂದಾಪುರ: ಮುಂಗಾರು ಮಳೆ ಕಳೆದ 2-3 ದಿನಗಳಿಂದ ಬಿರುಸಾಗಿದ್ದು, ಒಂದೊಂದಾಗಿಯೇ ಮಳೆ ಆವಾಂತರಗಳು ಬೆಳಕಿಗೆ ಬರುತ್ತಿವೆ. ಕುಂದಾಪುರ ಪುರಸಭೆ ವ್ಯಾಪ್ತಿಯ ಸರಕಾರಿ ಆಸ್ಪತ್ರೆ ವಾರ್ಡಿನಲ್ಲಿ ಅಸಮರ್ಪಕ ಚರಂಡಿ ಕಾಮಗಾರಿಯಿಂದಾಗಿ ಮನೆಯಂಗಳಕ್ಕೆ ನೀರು ನುಗ್ಗಿ ಸಮಸ್ಯೆಯಾಗುತ್ತಿದೆ.

Advertisement

ಸರಕಾರಿ ಆಸ್ಪತ್ರೆ ವಾರ್ಡ್‌ನ ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್‌ ರಸ್ತೆ (ಈಗ ಇದುವೇ ಮುಖ್ಯ ರಸ್ತೆ) ಹಾದು ಹೋಗುವ ಸಮೀಪದ ಚರಂಡಿ ಕಾಮಗಾರಿ ಅಸಮರ್ಪಕವಾಗಿದ್ದು, ಇಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗುತ್ತಿಲ್ಲ. ಇದರಿಂದ ಇಲ್ಲಿರುವ ಗೌರಿ ದೇವಾಡಿಗ ಎನ್ನುವವರ ಮನೆಯಂಗಳದಲ್ಲೇ ನೀರು ನಿಂತಿದೆ. ಅಂಗಳವಿಡೀ ಕೃತಕ ಈಜು ಕೊಳದಂತಾಗಿ ಮನೆ – ಮಂದಿ ಹೊರ ಬರದಂತಾಗಿದೆ. ಇನ್ನು ಅಕ್ಕ- ಪಕ್ಕದ ಗ್ಯಾರೇಜ್‌, ಅಂಗಡಿಗಳಿಗೂ ಸಮಸ್ಯೆಯಾಗುತ್ತಿದೆ.

ಈ ಮೊದಲೇ ಎಚ್ಚರಿಸಿದ್ದರು

3 ದಿನಗಳಿಂದಲೂ ಇದೇ ಸಮಸ್ಯೆ ಯಾಗಿದ್ದು, ಈ ಬಗ್ಗೆ ಸ್ಥಳೀಯ ವಾರ್ಡ್‌ ಸದಸ್ಯೆ ದೇವಕಿ ಸಣ್ಣಯ್ಯ ಅವರು ಮಳೆಗಾಲ ಆರಂಭಕ್ಕೂ ಮುನ್ನವೇ ಪುರಸಭೆ ಮುಖ್ಯಾಧಿಕಾರಿ ಸಹಿತ ಅಧಿಕಾರಿಗಳಿಗೆ ಸರಿಪಡಿಸುವಂತೆ ಎಚ್ಚರಿಸಿದ್ದರು. ಆದರೂ ಯಾವುದೇ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಈಗ ಸಮಸ್ಯೆ ಉಂಟಾಗಿದೆ.

ಸಾಂಕ್ರಾಮಿಕ ರೋಗ ಭೀತಿ

Advertisement

ಇಲ್ಲಿರುವ ಮನೆಗಳ ಸುತ್ತಲಿರುವ ಚರಂಡಿಯಲ್ಲಿ ಮಳೆ ನೀರು ಹರಿದು ಹೋಗದೇ ಹಾಗೆಯೇ ನಿಂತಿದ್ದು, ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ, ಈ ಪ್ರದೇಶದಲ್ಲಿ ಸಾಂಕ್ರಮಿಕ ರೋಗಗಳು ಕಾಣಿಸಿಕೊಳ್ಳುವ ಭೀತಿ ಇಲ್ಲಿನ ಜನರಲ್ಲಿ ಆವರಿಸಿದೆ.

ಮನವಿ ನೀಡಲಾಗಿತ್ತು

ಇಲ್ಲಿ ಹೆದ್ದಾರಿ ಕಾಮಗಾರಿಯಿಂದಾಗಿ ಚರಂಡಿ ಸಮಸ್ಯೆ ಉದ್ಭವವಾಗಿದೆ. ಅದಲ್ಲದೆ ಚರಂಡಿಗೆ ಸಮರ್ಪಕವಾದ ಜಾಗವೂ ಇಲ್ಲದೆ, ಕೆಲವರು ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕಾಗಿತ್ತು. ಇನ್ನು ಇಲ್ಲಿ ಹೋಟೆಲ್ಗಳ ಕೊಳಚೆ ನೀರಿನ ಪೈಪ್‌ ಕೂಡ ಈ ಚರಂಡಿಗೆ, ಅದು ಎತ್ತರದಲ್ಲಿ ಅಳವಡಿಸಿದ್ದರಿಂದ ಮಳೆ ನೀರು ಹರಿದು ಹೋಗುತ್ತಿಲ್ಲ. ಇದರಿಂದ ಈಗ ಸಮಸ್ಯೆ ಉದ್ಭವವಾಗಿದೆ. ಈ ಬಗ್ಗೆ ಹಿಂದೆಯೇ ಪುರಸಭೆ ಮುಖ್ಯಾಧಿಕಾರಿಗಳು, ಅಧಿಕಾರಿಗಳಿಗೆ ತಿಳಿಸಿದ್ದರೂ, ಯಾರೂ ಸ್ಪಂದಿಸಿಲ್ಲ.
– ದೇವಕಿ ಸಣ್ಣಯ್ಯ, ಸ್ಥಳೀಯ ಪುರಸಭೆ ಸದಸ್ಯರು
Advertisement

Udayavani is now on Telegram. Click here to join our channel and stay updated with the latest news.

Next