ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರಸಭೆ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಸಿಬ್ಬಂದಿ ಕಾರಣದಿಂದಾಗಿ ನಗರದ ಜನತೆಗೆ ಸಮರ್ಪಕ ಮೂಲಸೌಲಭ್ಯ ಹಾಗೂ ಸೇವೆ ಮರೀಚಿಕೆಯಾಗಿದೆ. ನಾಗರಿಕರು ಸಕಾಲಕ್ಕೆ ನಗರಸಭೆ ಸೇವೆ ಸಿಗದೆ ಪರದಾಡುವಂತಾಗಿದೆ.
ನಗರಸಭೆಯಲ್ಲಿ ಒಟ್ಟು 236 ಮಂಜೂರಾತಿ ಹುದ್ದೆಗಳಿದ್ದು ಅವುಗಳಲ್ಲಿ ಕೇವಲ 63 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 173 ಹುದ್ದೆ ಖಾಲಿ ಇವೆ. ಹೀಗಾಗಿ ಹೊರಗುತ್ತಿಗೆ ಸಿಬ್ಬಂದಿ ನೇಮಕ ಅನಿವಾರ್ಯವಾಗಿದ್ದರಿಂದ 126 ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಂಡು ಕಾರ್ಯನಿರ್ವಹಿಸಲಾಗುತ್ತಿದ್ದು 47 ಹುದ್ದೆಗಳು ಖಾಲಿ ಇವೆ.
ನಗರಸಭೆಗೆ ಒಟ್ಟು 100ಪೌರಕಾರ್ಮಿಕ ಹುದ್ದೆ ಮಂಜೂರಾಗಿದ್ದು, ಇವರಲ್ಲಿ 23 ಜನ ಮಾತ್ರ ಕಾಯಂ ಪೌರಕಾರ್ಮಿಕರಿದ್ದಾರೆ. 75 ಜನರು ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜೂರಾದ ಹುದ್ದೆಗಳಿಗೆ ಹೋಲಿಸಿದರೆ ಇನ್ನೂ ಎರಡು ಹುದ್ದೆಗಳು ಖಾಲಿ ಇವೆ. ಸ್ವತ್ಛತಾ ಸಿಬ್ಬಂದಿ ನಾಲ್ಕು ಇರಬೇಕಿತ್ತು ಎಲ್ಲ ನಾಲ್ಕು ಹುದ್ದೆ ಖಾಲಿ ಇವೆ. ನೀರು ಸರಬರಾಜು ನಿರ್ವಹಣೆಗೆ ಎಂಟು ಜನರು ಇರಬೇಕಿತ್ತು. ಒಬ್ಬರೂ ಇಲ್ಲ. ನೀರು ಸರಬರಾಜು ನಿರ್ವಹಣೆ ಸಹಾಯಕರು ಎಂಟು ಜನ ಇರಬೇಕಿತ್ತು ಅವರಲ್ಲಿಯೂ ಒಬ್ಬರೂ ಇಲ್ಲ. ಹೀಗೆ ಸಮರ್ಪಕ ಸಿಬ್ಬಂದಿ ಇಲ್ಲದೇ ಸೇವೆ ಜನರಿಗೆ ಮರೀಚಿಕೆಯಾಗಿದೆ.
ಕಾಯಂ ಸಿಬ್ಬಂದಿ: ಪೌರಾಯುಕ್ತರು ಗ್ರೇಡ್ -2 ಹುದ್ದೆ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಪರಿಸರ ಅಭಿಯಂತರರು, ಲೆಕ್ಕ ಅಧೀಕ್ಷಕರು, ಸಮುದಾಯ ಅಧಿಕಾರಿ, ಹಿರಿಯ ಆರೋಗ್ಯ ಅ ಧಿಕಾರಿ, ಇಬ್ಬರು ಪ್ರಥಮದರ್ಜೆ ಸಹಾಯಕರು, ಒಬ್ಬ ಕಿರಿಯ ಆರೋಗ್ಯ ಸಹಾಯಕ, ಒಬ್ಬ ಇಲೆಕ್ಟ್ರಿಶಿಯನ್, ಏಳು ಜನ ದ್ವಿತೀಯದರ್ಜೆ ಸಹಾಯಕರು, ನಾಲ್ವರು ತೆರಿಗೆ ಸಂಗ್ರಾಹಕರು,ಒಬ್ಬ ಗ್ರೇಡ್-2ರ ಇಲೆಕ್ಟ್ರಿಶಿಯನ್, ಇಬ್ಬರು ಸ್ವತ್ಛತಾ ಉಸ್ತುವಾರಿ ಅಧಿಕಾರಿ, ಎಂಟು ಜನ ಸಹಾಯಕರು, 23 ಪೌರಕಾರ್ಮಿಕರು, ಗಾರ್ಡನ್ ನಿರ್ವಾಹಕರು, ಸಹಾಯಕರು, ವಾಲ್ವಮನ್ ಸೇರಿ ಎಂಟು ಸಹಾಯಕರು ಕಾಯಂ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೌರಾಯುಕ್ತರು, ಲೆಕ್ಕ ಅಧಿಧೀಕ್ಷಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಕಚೇರಿ ಸಹಾಯಕರು ಹುದ್ದೆಗಳು ಮಾತ್ರ ಭರ್ತಿಯಾಗಿದ್ದು ಉಳಿದೆಲ್ಲ ಹುದ್ದೆಗಳಲ್ಲಿ ಖಾಲಿ ಹುದ್ದೆಗಳು ರಾರಾಜಿಸುತ್ತಿವೆ.
ಹೊರಗುತ್ತಿಗೆ ಸಿಬ್ಬಂದಿ: ಹೊರಗುತ್ತಿಗೆಯಲ್ಲಿ ಒಟ್ಟು 126 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ 75 ಜನ ಪೌರಕಾರ್ಮಿಕರಿದ್ದಾರೆ. ಉಳಿದಂತೆ ಒಬ್ಬ ಲೆಕ್ಕಪತ್ರ, ಗಣಕಯಂತ್ರ ಆಪರೇಟರ್ ಮೂವರು, ಮುಖ್ಯನಿರ್ವಾಹಕ, ನಾಲ್ವರು ವಾಹನ ಚಾಲಕರು, ಮೂವರು ಸ್ವತ್ಛತಾ ಉಸ್ತುವಾರಿ, ಇಬ್ಬರು ವಾಲ್ವಮನ್, ಗಾರ್ಡನ್ ನಿರ್ವಾಹಕರು, ಸಹಾಯಕರು, ವಾಲ್ವಮನ್ ಕೆಲಸಕ್ಕಾಗಿ 36ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಜಿಲ್ಲಾ ಕೇಂದ್ರ ಹಾವೇರಿ ನಗರದ ನಗರಸಭೆ ಸಿಬ್ಬಂದಿ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಶೀಘ್ರ ಖಾಲಿ ಹುದ್ದೆ ತುಂಬುವ ಮೂಲಕ ಜನರಿಗೆ ಸಮರ್ಪಕ ಸೇವೆ ಸಿಗುವ ವ್ಯವಸ್ಥೆ ಮಾಡಬೇಕಾಗಿದೆ.
-ಎಚ್.ಕೆ. ನಟರಾಜ