Advertisement

ಅಸಮರ್ಪಕ ವಿದ್ಯುತ್ ಪೂರೈಕೆಗೆ ಬೇಸತ್ತು ಮೆಸ್ಕಾಂ ಕಚೇರಿಗೆ ಘೇರಾವ್

04:13 PM Mar 10, 2022 | Team Udayavani |

ಸಾಗರ: ಅಸಮರ್ಪಕ ವಿದ್ಯುತ್ ಪೂರೈಕೆಗೆ ಬೇಸತ್ತು ತಾಲೂಕಿನ ಕುಡಿಗೆರೆ ಗ್ರಾಮಸ್ಥರು, ಪಂಪ್‌ಸೆಟ್ ಬಳಕೆದಾರ, ರೈತರು ತ್ಯಾಗರ್ತಿ ಮೆಸ್ಕಾಂ ಕಚೇರಿಗೆ  ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.

Advertisement

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ತ್ಯಾಗರ್ತಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀಧರ ಕುಡಿಗೆರೆ, ರೈತರು ಸಮಸ್ಯೆ ಉಂಟಾದರೂ ಮುಂದೆ ಸರಿಹೋಗುತ್ತದೆ ಎಂಬ ನಿರೀಕ್ಷೆಯಿಂದ ಸುಮ್ಮನೆ ಇದ್ದಾರೆ. ಆದರೆ ಇನ್ನು ತಾಳ್ಮೆ ವಹಿಸಲು ಸಾಧ್ಯವಿಲ್ಲ. ಇದು ರೈತರ ಜನಸಾಮಾನ್ಯರ ಬದುಕಿನ ಪ್ರಶ್ನೆ ಯಾಗಿದೆ. ಇಲ್ಲಿನ ಅಧಿಕಾರಿಗಳು ಸಿಬ್ಬಂದಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಪ್ರತಿಭಟನೆ ಸುದ್ದಿ ತಿಳಿದು ಪಲಾಯನ ಮಾಡಿದ್ದಾರೆ. ಇದು ಹೀಗೆಯೇ ಮುಂದುವರೆದರೆ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ಒಣಗುತ್ತಿರುವ ಬೇಸಿಗೆ ಬೆಳೆಗಳು ಹಾಗೂ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಈ ಭಾಗದ ಜನರಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಸಮಸ್ಯೆಯಿಂದಾಗಿ ದಿನ ಕಳೆದಂತೆ ಬದುಕು ದುಸ್ತರವಾಗಿದೆ. ಪ್ರತಿದಿನ ಸರ್ಕಾರದ ವಿರುದ್ಧ ಹಾಗೂ ಮೆಸ್ಕಾಂ ಕಾರ್ಯವೈಖರಿ ಬಗ್ಗೆ ಸಿಡಿದೇಳುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ವರ್ಷಗಳಿಂದ ತ್ಯಾಗರ್ತಿ ಭಾಗದ ವಿದ್ಯುತ್ ಪೂರೈಕೆ ಸಮಸ್ಯೆಯಿಂದಾಗಿ ರೈತರ ಬೆಳೆಗಳಿಗೆ ನೀರು ಸರಬರಾಜು ವ್ಯತ್ಯಯ ಉಂಟಾಗಿದೆ. ವೋಲ್ಟೇಜ್ ಸಮಸ್ಯೆಯಿಂದ ಮೋಟರ್ ಸುಟ್ಟು ಹೋಗುತ್ತಿದೆ. ಸಮಸ್ಯೆ ಬಗೆಹರಿಸಲು ಯಾವುದೇ ಅಧಿಕಾರಿಗಳೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ವಿದ್ಯುತ್ ಬಳಕೆದಾರ ರೈತರು, ಕಾರ್ಮಿಕರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸೇರಿ ಬೃಹತ್ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಸಿದ್ಧರಾಗುತ್ತಿದ್ದೇವೆ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಸಾಗರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೂರವಾಣಿ ಮೂಲಕ ಸಂಪರ್ಕಿಸಿ, ಪರಿಹಾರಕ್ಕೆ ಕೆಲವು ದಿನಗಳ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರಮುಖ ಮುಖಂಡರಾದ ಜಯದೇವಸ್ವಾಮಿ, ಸದಾನಂದ, ಹಾಲೇಶ, ಕಿರಣ, ರಮೇಶ, ಆನಂದ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next