ಅಂಕೊಲಾ: ಕರ್ನಾಟಕದ ಬಾರ್ಡೋಲಿ ಅಂಕೋಲಾ ಕೇಂದ್ರ ಗಂಥಾಲಯದಲ್ಲಿ ಮಾತ್ರ ಪುಸ್ತಕವನ್ನು ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಹಚ್ಚಳವಾಗುತ್ತಿದೆ. ಹಿರಿಯರ ಮತ್ತು ಯುವ ಸಮುದಾಯದವರ ಕೃತಿಗಳು ಇಲ್ಲಿ ಲಭ್ಯವಿದೆ. ನಿಜ ಆದರೆ, ಇಲ್ಲಿ ಕೇವಲ ಒಂದೇ ಕೊಠಡಿಯಿದ್ದು, ಓದುಗರಿಗೆ ಸಮರ್ಪಕ ಆಸನ ವ್ಯವಸ್ಥೆಯಾಗಲಿ, ಸಾಕಷ್ಟು ಬೆಳಕಿನ ವ್ಯವಸ್ಥೆಯಾಗಲಿ ಇಲ್ಲಿ ಇಲ್ಲದಿರುವುದು ವಿಪರ್ಯಾಸ.
ಆದುನಿಕತೆ ಬೆಳೆಯುತ್ತಿದ್ದಂತೆ ಜ್ಞಾನ ದೇಗುಲಗಳೆಂದೇ ಕರೆಸಿಕೊಳ್ಳುವ ಸರ್ಕಾರಿ ಗ್ರಂಥಾಲಯಗಳು ಕ್ಷಿಣಿಸುತ್ತಿರುವ ಹಂತದಲ್ಲಿ ತಾಲೂಕಿನ ಕೇಂದ್ರ ಗ್ರಂಥಾಲಯ ಮಾತ್ರ ಓದುಗರಿಗೆ ಅಕ್ಷರ ಜ್ಞಾನ ಹೆಚ್ಚಿಸುತ್ತಿದೆ. ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಪುಸ್ತಕ ಒದುಗರ ಮೇಲೆ ಪ್ರಭಾವ ಬೀರುವುದು ನಾವು ಕಾಣುತ್ತಿದ್ದೇವೆ. ಆದರೆ ಕಥೆ ಕಾದಂಬರಿಗಳನ್ನು ಯುವಕರು ಇಲ್ಲಿಗೆ ಬಂದು ಒದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ದಿನ ಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಓದುಗರ ಸಂಖ್ಯೆ ಈ ಗ್ರಂಥಾಲಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 1585 ಸದಸ್ಯರು ಇಲ್ಲಿ ನೋಂದಣಿ ಮಾಡಿಸಿದ್ದಾರೆ. ಪ್ರತಿನಿತ್ಯ 100ಕ್ಕೂ ಹೆಚ್ಚು ಓದುಗರು ಇಲ್ಲಿಗೆ ಬಂದು ಪತ್ರಿಕೆ ಓದಿ ಹೋಗುತ್ತಾರೆ.
ಸ್ಥಳಾವಕಾಶ ಇಲ್ಲ: ದಿನ ಪತ್ರಿಕೆ ಒದುಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದೇ ಕೊಠಡಿಯಲ್ಲಿ ಪುಸ್ತಕ ಸಂಗ್ರಹ, ಗ್ರಂಥಪಾಲಕರ ಕಚೇರಿ ಮತ್ತು ದಿನಪತ್ರಿಕೆ ಒದುಗರ ಆಸನಗಳು ಹಾಕಲಾಗಿದ್ದು ಸ್ಥಳದ ಅಭಾವ ಇಲ್ಲಿ ಎದ್ದು ಕಾಣುತ್ತಿದೆ. ಕಟ್ಟಡದ ಮೊದಲನೆ ಮಹಡಿಯಲ್ಲಿ ಇನ್ನೊಂದು ಕೊಠಡಿ ಕಟ್ಟಲಾಗುತ್ತಿದ್ದು ಅದು ಪೂರ್ತಿಗೊಳ್ಳದೆ ಅರ್ಧಕ್ಕೆ ಸ್ಥಗಿತವಾಗಿದೆ. ಪೂರ್ಣ ಪ್ರಮಾಣದಲ್ಲಿ ಆದರೆ ಪುಸ್ತಕ ಭಂಡಾರದ ಸಂಗ್ರಹವನ್ನು ಅಲ್ಲಿಗೆ ಸ್ಥಳಾಂತರಿಸಬಹುದು.
500ಕ್ಕೂ ಹೆಚ್ಚು ಪುಸ್ತಕಗಳು ಇಡಲು ಸರಿಯಾದ ಸ್ಥಳಾವಕಾಶ ಇಲ್ಲದೆ ಕೊಠಡಿಯ ಒಂದು ಭಾಗದಲ್ಲಿ ಹಾಕಿಡಲಾಗಿದೆ. ಶ್ರೀಘ್ರದಲ್ಲಿಯೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಜ್ಞಾನದ ಹೊಸ ಹೊಳಪನ್ನು ನೀಡುವ ಅಕ್ಷರ ಭಂಡಾರಗಳ ಸದುಪಯೋಗವನ್ನು ತಾಲೂಕಿನ ಜನತೆಗೆ
ನೀಡಬೇಕಿದೆ. ಯುವ ಓದುಗರ ಸಂಖ್ಯೆ ಹೆಚ್ಚು: ಡಿಜಿಟಲಿಕರಣದ ನಡುವೆಯು ಯುವ ಸಮುದಾಯ ಇಂದು ದಿನ ಪತ್ರಿಕೆ, ಕಥೆ, ಕಾದಂಬರಿಗಳ ಒದುವಿಕೆಯನ್ನು ಕಡಿಮೆ ಮಾಡಿಲ್ಲ. ಒಂದೇ ಬೆರಳಿನ ತುದಿಯಲ್ಲಿಯೆ ಎಲ್ಲವು ಲಭ್ಯವಿರುವಾಗಲು ಯುವ ಸಮುದಾಯ ಇಂದು ಗ್ರಂಥಾಲಯಕ್ಕೆ ಕಾಲಿಟ್ಟು ಅಕ್ಷರ ಜ್ಞಾನವನ್ನು ಪಡೆದುಕೊಳ್ಳತ್ತಿದ್ದಾರೆ. ಇಂದಿಗೂ ತಾಲೂಕಿನ ಗ್ರಂಥಾಲಯಕ್ಕೆ ಬಂದು ಓದುತ್ತಿರುವ ಜನರ ಸಂಖ್ಯೆ ಹೆಚ್ಚಿರುವುದು ಹೆಮ್ಮೆಯ ಸಂಗತಿ.
-ಅರುಣ ಶೆಟ್ಟಿ