Advertisement

ಕೃಷಿ ಇಲಾಖೆ ಸೌಲಭ್ಯಗಳ ಅಸಮರ್ಪಕ ವಿತರಣೆ: ಗ್ರಾಮಸ್ಥರ ಆರೋಪ

11:11 PM Aug 04, 2019 | Sriram |

ಕಾರ್ಕಳ: ಕೃಷಿ ಇಲಾಖೆಯಿಂದ ನೀಡಲಾಗುವ ಸೌಲಭ್ಯ ಎಲ್ಲ ಕೃಷಿಕರಿಗೂ ಸಮರ್ಪಕವಾದ ರೀತಿಯಲ್ಲಿ ದೊರೆಯುತ್ತಿಲ್ಲ. ಸೌಲಭ್ಯ ಪಡೆದುಕೊಂಡವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ ಎಂಬ ಆರೋಪ ಮಿಯ್ಯಾರು ಗ್ರಾಮ ಸಭೆಯಲ್ಲಿ ಕೇಳಿಬಂತು.

Advertisement

ಆ. 3ರಂದು ಬೋರ್ಕಟ್ಟೆ ಸಮಾಜ ಮಂದಿರದಲ್ಲಿ ಪಂಚಾಯತ್‌ ಅಧ್ಯಕ್ಷೆ ರಾಜೇಶ್ವರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ರಾಜೇಶ್‌ ಜೈನ್‌, ಕೃಷಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯವು ಎಲ್ಲ ಕೃಷಿಕರಿಗೆ ಲಭಿಸುತ್ತಿಲ್ಲ. ಹೀಗಾಗಿ ಇಲಾಖೆಯಿಂದ ಸೂಕ್ತ, ಪಾರದರ್ಶಕ ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ಈ ಮಾತಿಗೆ ಗ್ರಾಮಸ್ಥರೂ ಧ್ವನಿಗೂಡಿಸಿದರು.

ಉತ್ತರಿಸಿದ ಸಹಾಯಕ ಕೃಷಿ ನಿರ್ದೇಶಕ ರಾಧಾಕೃಷ್ಣ ಅವರು ಪ್ರಸ್ತುತ ಕೃಷಿಕರಿಗೆ ಕೆ-ಕಿಸಾನ್‌ ಕಾರ್ಡ್‌ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಡ್‌ ಬಳಕೆಯಿಂದ ಇಂತಹ ಸಮಸ್ಯೆಗಳು ಬಗೆಹರಿಯಲಿದೆ ಎಂದು ಭರವಸೆಯಿತ್ತರು.

ಮರ ತೆರವುಗೊಳಿಸಿ
ಮೆಸ್ಕಾಂ ಜೆಇ ಹೇಮಂತ್‌ ಮಾಹಿತಿ ನೀಡುವ ವೇಳೆ ಮಾತನಾಡಿದ ಫ್ರಾನ್ಸಿಸ್‌ ಸಿಕ್ವೇರಾ, ಕರಿಯಕಲ್ಲುವಿನಿಂದ ಮಿಯ್ನಾರುವರೆಗಿನ ಮುಖ್ಯರಸ್ತೆ ಬದಿಯ ವಿದ್ಯುತ್‌ ತಂತಿಗೆ ಸ್ಪರ್ಶಿಸುವ ರೀತಿಯಲ್ಲಿವೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಮರದ ಕೊಂಬೆಗಳನ್ನು ಮತ್ತು ಕೆಲವೊಂದು ಮರಗಳನ್ನು ಕಡಿಯುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೇಮಂತ್‌, ಅರಣ್ಯ ಇಲಾಖೆಗೂ ಗ್ರಾಮಸ್ಥರು ದೂರು ನೀಡಿ. ಅನಂತರ ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಮರ ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸೋಲಾರ್‌ ಘಟಕ ಸ್ಥಾಪನೆಗೆ 3 ಲಕ್ಷ ರೂ.
ಸೋಲಾರ್‌ ಘಟಕ ಸ್ಥಾಪನೆಗೆ ಸರಕಾರದಿಂದ 3 ಲಕ್ಷ ರೂ. ಸಬ್ಸಿಡಿ ದೊರೆಯುತ್ತಿದೆ. ಘಟಕದ ಒಟ್ಟು ವೆಚ್ಚ 6 ಲಕ್ಷ ರೂ. ಆಗಲಿದೆ.. ಉಳಿದ 3 ಲಕ್ಷ ರೂ.ಗಳನ್ನು ಕೃಷಿಕರೇ ಭರಿಸಬೇಕೆಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಿಂಗಪ್ಪ ಹೇಳಿದರು.

Advertisement

ಅಧಿಕ ಮನೆ ತೆರಿಗೆ
ಪಂಚಾಯತ್‌ನಿಂದ ಅಧಿಕ ಪ್ರಮಾಣದಲ್ಲಿ ಮನೆ ತೆರಿಗೆ ಸಂಗ್ರಹಿಸಲಾಗುತ್ತಿದೆ ಎಂದು ರಾಜೇಶ್‌ ಜೈನ್‌ ಹೇಳಿದರು. ಕಾರ್ಯದರ್ಶಿ ಮಹಾದೇವ ಎಸ್‌.ಎನ್‌. ಮಾತನಾಡಿ, ಪ್ರತಿ ಎರಡು ವರ್ಷಕ್ಕೊಮ್ಮೆ ತೆರಿಗೆ ಪರಿಷ್ಕರಿಸಲಾಗುತ್ತಿದೆ. ಹೀಗಾಗಿ ಅಲ್ಪ ಪ್ರಮಾಣದಲ್ಲಿ ಮನೆ ತೆರಿಗೆ ಏರಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಕಾರೋಳ್‌ ಗುಡ್ಡೆ ರಸ್ತೆ ಬದಿ ಚರಂಡಿ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್‌ ನಾಯಕ್‌ ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಜಿ.ಪಂ. ಸದಸ್ಯೆ ದಿವ್ಯಾಶ್ರೀ ಗಿರೀಶ್‌ ಅಮೀನ್‌, ಪಂಚಾಯತ್‌ ಉಪಾಧ್ಯಕ್ಷ ಮಾಧವ ಕಾಮತ್‌, ಸದಸ್ಯರಾದ ಡೇನಿಯಲ್‌ ರೇಂಜರ್‌, ನಿರ್ಮಲಾ, ಪ್ರಕಾಶ್‌ ಬಲಿಪ, ಗೀತಾ, ಸರಸ್ವತಿ, ಮಹೇಂದ್ರ, ಪ್ರಶಾಂತ್‌ ಪೂಜಾರಿ, ನವೀನ್‌ ಕುಮಾರ್‌, ಶಕುಂತಳಾ ಶೆಟ್ಟಿ, ಲವೀನ್‌ ನೊರೋನ್ಹ, ಶ್ಯಾಮಲಾ, ಸೂರು, ತಾರಾನಾಥ ಕೋಟ್ಯಾನ್‌ ಉಪಸ್ಥಿತರಿದ್ದರು.ಪಿಡಿಒ ಯೋಗಾನಂದ ಜಿ.ವಿ. ಸ್ವಾಗತಿಸಿ, ಕಾರ್ಯದರ್ಶಿ ಮಹಾದೇವ ಎಸ್‌.ಎನ್‌. ಅವರು ನಿರ್ವಹಿಸಿದರು.

ದುಪ್ಪಟ್ಟು ವಿದ್ಯುತ್‌ ಬಿಲ್‌
ಇತ್ತೀಚೆಗೆ ಮೆಸ್ಕಾಂನಿಂದ ದುಪ್ಪಟ್ಟು ವಿದ್ಯುತ್‌ ಬಿಲ್‌ ಬರುತ್ತಿದೆ. ಯಾಕೆ ಹೀಗೆ ? ಎಂದು ಆಸಿಯಾ ಬಾನು ಮೆಸ್ಕಾಂ ಅಧಿಕಾರಿಯನ್ನು ಪ್ರಶ್ನಿಸಿದರು. ಈ ವೇಳೆ ಗ್ರಾಮಸ್ಥರು ಧ್ವನಿಗೂಡಿಸಿ, ಮೆಸ್ಕಾಂನಿಂದ ದುಪ್ಪಟ್ಟು ವಿದ್ಯುತ್‌ ಬಿಲ್‌ ಬರುತ್ತಿದ್ದರೂ ಸರಿಯಾಗಿ ವಿದ್ಯುತ್‌ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮೆಸ್ಕಾಂ ಜೆಇ, ಹೊಸ ಮೀಟರ್‌ ಅಳವಡಿಸಿದ ಬಳಿಕ ಎಷ್ಟು ವಿದ್ಯುತ್‌ ಬಳಕೆ ಮಾಡ್ತಿರೋ ಅಷ್ಟು ರೀಡಿಂಗ್‌ ಆಗುತ್ತದೆ. ನಮಗೆ ತಿಳಿದಂತೆ ಮೀಟರ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಮೀಟರ್‌ ಮೇಲೆ ಅನುಮಾನವಿದ್ದಲ್ಲಿ ಮೀಟರ್‌ ರೀಡರ್‌ ಗಮನಕ್ಕೆ ತರುವಂತೆ ವಿನಂತಿಸಿದ ಅವರು, ಮಿಯ್ನಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮೂರು ಟಿಸಿ (ಟ್ರಾನ್ಸ್‌ಪಾರ್ಮರ್‌) ಅಳವಡಿಸಲಾಗುವುದು. ಆ ಬಳಿಕ ಸಮರ್ಪಕ ವಿದ್ಯುತ್‌ ದೊರೆಯಲಿದೆ ಎಂದರು.

ಪಶು ಆಸ್ಪತ್ರೆ ಬೇಕು
ಮಿಯ್ಯಾರುಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹೈನುಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಪರಿಸರದಲ್ಲಿ ಪಶುವೈದ್ಯಕೀಯ ಆಸ್ಪತ್ರೆಯೊಂದು ನಿರ್ಮಾಣವಾಗಬೇಕೆಂದು ಗ್ರಾಮಸ್ಥರಾದ ಗಿರೀಶ್‌ ಅಮೀನ್‌ ಆಗ್ರಹಿಸಿದರು. ಉತ್ತರಿಸಿದ ಪಶುವೈದ್ಯ ಜಾರಪ್ಪ ಪೂಜಾರಿ, ನಿಮ್ಮ ಬೇಡಿಕೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next