Advertisement

ಉತ್ತರ ಕನ್ನಡದಲ್ಲಿದೆ ಹೈನುಗಾರಿಕೆಗೆ ಪೂರಕ ವಾತಾವರಣ

05:50 PM May 17, 2019 | Suhan S |

ಶಿರಸಿ: ಹೈನುಗಾರಿಕೆಗೆ ಪೂರಕ ವಾತಾವರಣ ಇರುವ ಉತ್ತರಕನ್ನಡ ಜಿಲ್ಲೆಯ ಹೆಚ್ಚಿನ ಹೈನುಗಾರರು ಹಸುಗಳ ಆಯ್ಕೆಯಲ್ಲಿ ಎಡವುತ್ತಿದ್ದಾರೆ. ಪ್ರಸ್ತುತ ಹೈನುಗಾರಿಕೆ ನಷ್ಟವೆಂದು ಭಾವಿಸಿ ಹಿಂದೆ ಸರಿಯುತ್ತಿದ್ದಾರೆ ಎಂದು ದಕ್ಷಿಣಕನ್ನಡ ಜಿಲ್ಲೆಯ ನಿವೃತ್ತ ಕೆಎಂಎಫ್‌ ಜಂಟಿ ನಿರ್ದೇಶಕ ಡಿ.ಎಸ್‌ ಹೆಗಡೆ ಅಭಿಪ್ರಾಯಪಟ್ಟರು.

Advertisement

ಜಿಲ್ಲಾಡಳಿತ ಹಾಗೂ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆತ್ಮಾ ಯೋಜನೆಯಡಿ ತಾಲೂಕಿನ ಕಡಬಾಳದಲ್ಲಿ ನಡೆದ ಕ್ಷೇತ್ರ ಪಾಠಶಾಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಚ್ಚಿನ ರೈತರು ಹಸುಗಳ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ಲಕ್ಷಾಂತರ ರೂ. ವ್ಯಯಿಸಿ ಕೊಂಡುಕೊಳ್ಳುತ್ತಾರೆ. ಆದರೆ, ಬಹುಮುಖ್ಯವಾಗಿ ಹಸುವಿನ ಬಾಹ್ಯ ಸೌಂದರ್ಯದ ಬದಲಾಗಿ ಸಡಿಲವಿರುವ ಮೈ ಚರ್ಮ, ಕೆಚ್ಚಲಿನ ನರಗಳು, ಹಿಂಭಾಗ ವಿಸ್ತಾರವಾಗಿರುವ, ನೀಳವಾದ ಭಾಲ ಹಾಗೂ ಕ್ಷೀರ ಗ್ರಂಥಿಗಳನ್ನು ಹೊಂದಿರುವ ಹಸುಗಳನ್ನು ಆಯ್ಕೆ ಮಾಡಬೇಕು ಎಂದರು.

ಸುಧಾರಿತ ಹೈನುಗಾರಿಕೆ ಕ್ರಮಗಳನ್ನು ಅನುಸರಿಸಿ, ಹೆಚ್ಚಿನ ಕಾಳಜಿಯಿಂದ ಜಾನುವಾರು ನಿರ್ವಹಣೆ, ಕೊಟ್ಟಿಗೆಯ ಸ್ವಚ್ಛತೆಯೊಂದಿಗೆ ಇಕ್ಕಟ್ಟಾದ ಪ್ರದೇಶದಲ್ಲಿ ಜಾನುವಾರುಗಳನ್ನು ಕಟ್ಟಬಾರದು. ಕನಿಷ್ಠ ಒಂದು ಗಂಟೆಗಳ ಕಾಲ ಹಸುಗಳು ಹೊರ ಭಾಗದಲ್ಲಿ ಓಡಾಡುವ ಅವಕಾಶ ಕಲ್ಪಿಸಬೇಕು. ಜೊತೆಯಲ್ಲಿ ಕರುಗಳ ಸಾಕಾಣಿಕೆಗೆ ಗಮನ ನೀಡಬೇಕು ಎಂದರು. ಉತ್ತರಕನ್ನಡ ಜಿಲ್ಲೆಯಲ್ಲಿ ಹಾಲಿನ ಉತ್ಪಾದನಾ ವೆಚ್ಚ ಅಧಿಕವಾಗಿದೆ. ಪಶು ಆಹಾರ, ಹಸಿ ಹುಲ್ಲು, ಖನಿಜ ಮಿಶ್ರಣ ನೀಡುವ ಪ್ರಮಾಣವನ್ನು ನುರಿತ ವೈದ್ಯರ ಸಲಹೆಯೊಂದಿಗೆ ಸೂಕ್ತ ಪ್ರಮಾಣದಲ್ಲಿ ನೀಡಬೇಕು. ಹಸು ನೀಡುವ 2.5ಲೀ ಹಾಲಿಗೆ 1ಕೆ.ಜಿ ಪಶು ಆಹಾರ, 50ಗ್ರಾಂ ಲವಣ ಮಿಶ್ರಣವನ್ನು ಸೇರ್ಪಡಿಸಿ ದೋಸೆ ಹಿಟ್ಟಿನ ರೀತಿಯಲ್ಲಿ ದಿನಕ್ಕೆ ಮೂರು ಅವಧಿಯಲ್ಲಿ ನೀಡಬೇಕು. ಆಗ ಮಾತ್ರ ಹೈನುಗಾರಿಕೆ ಲಾಭವಾಗಲು ಸಾಧ್ಯವಿದೆ ಎಂದರು.

ಹೈನುಗಾರಿಕೆ ಲಾಭದಾಯಕವೇ ಎಂಬುದರ ಕುರಿತು ಸಮರ್ಪಕ ಚರ್ಚೆಗಳು ನಡೆಯಬೇಕಿದೆ. ಆಗ ಮಾತ್ರ ಜೈನುಗಾರಿಕೆಯಲ್ಲಿನ ನಿಜಾಂಶಗಳು ಜನರಿಗೆ ತಿಳಿಯಲು ಸಾಧ್ಯವಿದೆ. ಕೇವಲ ಹಾಲು ಮಾರಾಟದಿಂದ ಹೈನುಗಾರಿಕೆ ಲಾಭದಾಯಕ ಆಗಲು ಸಾಧ್ಯವಿಲ್ಲ. ಆದರೆ ಕೃಷಿ ಕಾರ್ಯಕ್ಕೆ ಅಗತ್ಯವಿರುವ ಸಾವಯವ ಗೊಬ್ಬರ ಉತ್ಪಾದನೆಯಿಂದ ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ ಎಂದರು.

Advertisement

ಭಾರತದ ಕ್ಷೀರಕ್ರಾಂತಿ ಹಿಂದೆ ಕೃತಕ ಗರ್ಭ ಧಾರಣೆ ಕೊಡುಗೆ ಅಪಾರವಿದೆ. ಗುಜರಾತ್‌ನಲ್ಲಿ ಆರಂಭಗೊಂಡ ಹಾಲು ಉತ್ಪಾದಕ ಸಂಘಗಳ ಮಾದರಿ 1974ರಲ್ಲಿ ರಾಜ್ಯಕ್ಕೆ ಪಾದಾರ್ಪಣೆ ಮಾಡಿತು. ಹಾಲು ಉತ್ಪಾದನೆಯಲ್ಲಿ ಹಿಂದುಳಿದಿದ್ದ ಭಾರತ 2003ರಲ್ಲಿ 87ಸಾವಿರ ಮಿಲಿಯನ್‌ ಮೆಟ್ರಿಕ್‌ ಟನ್‌ ಹಾಲು ಉತ್ಪಾದನೆ ಮಾಡಿ ಜಗತ್ತಿನ ಗಮನ ಸೆಳೆಯಿತು. ಇದೀಗ ದೇಶದಲ್ಲಿ 120 ಮಿಲಿಯನ್‌ ಮೆಟ್ರಿಕ್‌ ಟನ್‌ ಉತ್ಪಾದನೆ ಆಗುತ್ತಿದೆ ಎಂದರು.

ಕಡಬಾಳ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಭವ್ಯ ಹೆಗಡೆ, ಸಾಲ್ಕಣಿ ಗ್ರಾಪಂ ಅಧ್ಯಕ್ಷೆ ಅನಸೂಯಾ ಹೆಗಡೆ, ಪಶು ಇಲಾಖೆ ಸಹಾಯಕ ನಿರ್ದೇಶಕ ಆರ್‌.ಜಿ ಹೆಗಡೆ, ಪಶು ವೈದ್ಯ ಎನ್‌.ಎಚ್ ಸವಣೂರು, ಸಾಲ್ಕಣಿ ಪಶು ವೈದ್ಯಾಧಿಕಾರಿ ರೋಹಿತ್‌ ಹೆಗಡೆ, ಕೃತಕ ಗರ್ಭಧಾರಣಾ ಕಾರ್ಯಕರ್ತ ಶ್ರೀಹರ್ಷ ಹೆಗಡೆ ಕಡಬಾಳ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next