ಹೊಸದಿಲ್ಲಿ: ಕೋವಿಡ್ 19 ಕಾರಣದಿಂದ ಕಳೆದ ಮಾರ್ಚ್ ನಿಂದ ನಿಲುಗಡೆಯಾಗಿದ್ದ ಮೆಟ್ರೋ ಸಂಚಾರ ಪುನರಾರಂಭಗೊಳ್ಳಲು ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ.
ಸೆಪ್ಟಂಬರ್ 01ರಿಂದ ಜಾರಿಗೆ ಬರಲಿರುವ ಅನ್ ಲಾಕ್ 04ರಲ್ಲಿ ಮಹಾನಗರಗಳಲ್ಲಿನ ಮೆಟ್ರೋ ಸಂಚಾರ ಪುನರಾರಂಭಗೊಳ್ಳುವುದು ಬಹುತೇಕ ಖಚಿತ ಎಂದು ಸರಕಾರದ ಉನ್ನತ ಮೂಲಗಳ ಮಾಹಿತಿಯನ್ನಾಧರಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇನ್ನು ಕಳೆದ 5 ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಬಾರ್ ಗಳಲ್ಲಿ ಕೇವಲ ಮದ್ಯ ಮಾರಾಟಕ್ಕೆ ಮಾತ್ರವೇ ಅನುಮತಿ ನೀಡುವ ಸಾಧ್ಯತೆಗಳ ಕುರಿತಾಗಿಯೂ ಸುಳಿವು ಲಭ್ಯವಾಗಿದೆ.
ಆದರೆ ಅನ್ ಲಾಕ್ 04ರಲ್ಲಿ ಶಾಲೆ ಮತ್ತು ಕಾಲೇಜುಗಳು ಪುನರಾರಂಭಗೊಳ್ಳುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ. ಆದರೆ ದೇಶದಲ್ಲಿರುವ IIT ಮತ್ತು IIMಗಳನ್ನು ಪುನರಾರಂಭಿಸುವ ಕುರಿತಾಗಿ ಸರಕಾರದ ಉನ್ನತಮಟ್ಟದಲ್ಲಿ ಆಲೋಚನೆಗಳು ನಡೆಯುತ್ತಿವೆ ಎನ್ನುವ ಮಾಹಿತಿಯೂ ಇದೀಗ ಲಭ್ಯವಾಗಿದೆ.
ಚಿತ್ರಮಂದಿರಗಳು ಮತ್ತು ಅಡಿಟೋರಿಯಂಗಳೂ ಸಹ ಇನ್ನೂ ಒಂದು ತಿಂಗಳುಗಳ ಕಾಲ ತೆರೆಯುವ ಸಾಧ್ಯತೆಗಳು ಇಲ್ಲ. ಒಂದುವೇಳೆ ಚಿತ್ರಮಂದಿರಗಳು ಪುನರಾರಂಭಗೊಂಡರೂ ಅವುಗಳು 25-30% ಪ್ರೇಕ್ಷಕ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸುವುದು ಅವುಗಳಿಗೆ ಲಾಭದಾಯಕವಾಗಲಾರದು ಎನ್ನುವ ಅಭಿಪ್ರಾಯ ಕೇಂದ್ರ ಸರಕಾರದ್ದಾಗಿದೆ.
ಕೇಂದ್ರ ಗೃಹ ಇಲಾಖೆಯ ಒಪ್ಪಿಗೆ ಲಭಿಸಿದ ಬಳಿಕ ಈ ವಾರಾಂತ್ಯದಲ್ಲಿ ಅನ್ ಲಾಕ್ 4.0ದ ನಿಯಮಾವಳಿಗಳು ಪ್ರಕಟಗೊಳ್ಳುವ ನಿರೀಕ್ಷೆ ಇದೆ.