Advertisement

ಇಂದು ರಾಣಿಗೆ ಅಂತಿಮ ವಿದಾಯ; ರಾಷ್ಟ್ರಪತಿ ಮುರ್ಮು ಸೇರಿದಂತೆ ಪ್ರಮುಖರು ಭಾಗಿ

08:15 PM Sep 18, 2022 | Team Udayavani |

ಲಂಡನ್‌: ಬರೋಬ್ಬರಿ ಎಪ್ಪತ್ತು ವರ್ಷಗಳ ಕಾಲ ಬ್ರಿಟನ್‌ ರಾಜಮನೆತನದ ರಾಣಿಯಾಗಿದ್ದ ಎರಡನೇ ಎಲಿಜಬೆತ್‌ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.

Advertisement

ರಾಣಿಯವರಿಗೆ ಸರ್ಕಾರಿ ಗೌರವದ ಅಂತ್ಯಸಂಸ್ಕಾರ ನೀಡಲು ಬ್ರಿಟನ್‌ ಸರ್ಕಾರ ನಿರ್ಧರಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳ 500 ಸರ್ಕಾರಿ ಮುಖ್ಯಸ್ಥರು ಈಗಾಗಲೇ ಲಂಡನ್‌ಗೆ ಆಗಮಿಸಿದ್ದಾರೆ.

ರಾಣಿಯವರ ಅಂತ್ಯಸಂಸ್ಕಾರದ ವೀಕ್ಷಣೆಗಾಗಿ ವಿಶೇಷ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ರಸ್ತೆಯ ಬದಿಯ ಇಕ್ಕೆಲೆಗಳಲ್ಲಿ ಸುಮಾರು 20 ಲಕ್ಷ ಮಂದಿ ಅವರ ಅಂತಿಮ ಯಾತ್ರೆಯನ್ನು ದುಃಖತಪ್ತರಾಗಿ ವೀಕ್ಷಿಸಲಿದ್ದಾರೆ. ಇದರ ಜತೆಗೆ ನೇರಪ್ರಸಾರದಲ್ಲಿ 40 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಲಿದ್ದಾರೆ. ಸದ್ಯ ಅಂದಾಜು ಮಾಡಿರುವ ಪ್ರಕಾರ ಬ್ರಿಟನ್‌ ಇತಿಹಾಸದಲ್ಲಿಯೇ ಬೃಹತ್‌ ಪ್ರಮಾಣದಲ್ಲಿ ಅಂತ್ಯಕ್ರಿಯೆ ವೀಕ್ಷಿಸಲಿದ್ದಾರೆ.

1965ರಲ್ಲಿ ವಿನ್‌ಸ್ಟನ್‌ ಚರ್ಚಿಲ್‌ ಅವರಿಗೆ ಸರ್ಕಾರಿ ಗೌರವದಲ್ಲಿ ಅಂತ್ಯಸಂಸ್ಕಾರ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ಸರ್ಕಾರಿ ಗೌರವದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ.

ಭಾರಿ ವ್ಯವಸ್ಥೆ:
ಲಂಡನ್‌ನಲ್ಲಿ ಸೋಮವಾರ ಬ್ರಿಟನ್‌ ಸಂಸತ್‌ನ ವೆಸ್ಟ್‌ಮಿನಿಸ್ಟರ್‌ ಹಾಲ್‌ನಿಂದ ವೆಸ್ಟ್‌ಮಿನಿಸ್ಟರ್‌ ಅಬೆ ವರೆಗೆ ಮೊದಲಿಗೆ ರಾಣಿಯವರ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುತ್ತದೆ. ಸ್ಥಳೀಯ ಕಾಲಮಾನ ಬೆಳಗ್ಗೆ 11 ಗಂಟೆಗೆ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ಅಂತ್ಯಕ್ರಿಯೆಯ ಧಾರ್ಮಿಕ ವಿಧಿವಿಧಾನಗಳು ಶುರುವಾಗಲಿವೆ. ವೆಸ್ಟ್‌ಮಿನಿಸ್ಟರ್‌ ಅಬೆಯಿಂದ ವೆಲ್ಲಿಂಗ್ಟನ್‌ ಆರ್ಚ್‌ಗೆ ಪಾರ್ಥಿವ ಶರೀರ ತರಲಾಗುತ್ತದೆ. ಅಲ್ಲಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ ವಿಂಡ್ಸರ್‌ ಕ್ಯಾಸಲ್‌ಗೆ ಪಾರ್ಥಿವ ಶರೀರ ತರಲಾಗುತ್ತದೆ. ಅಲ್ಲಿ ಪತಿ ಫಿಲಿಪ್‌ ಸಮಾಧಿ ಪಕ್ಕವೇ ಅವರ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ.

Advertisement

ಒಟ್ಟು 37 ಕಿಮೀ (27 ಮೈಲು) ಅಂತಿಮಯಾತ್ರೆ ನಡೆಯಲಿದೆ. ರಸ್ತೆಯುದ್ದಕ್ಕೂ ಜನರಿಗೆ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸಾವಿರಾರು ಮಂದಿ ರಸ್ತೆಯ ಬದಿಯಲ್ಲಿ ಭಾನುವಾರದಿಂದಲೇ ಟೆಂಟ್‌ ಹಾಕಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿದ್ದಾರೆ. ಭದ್ರತೆಗಾಗಿ ಪೊಲೀಸ್‌ ಇಲಾಖೆಯಿಂದ 10 ಸಾವಿರ ಮತ್ತು ಸೇನೆಯ ವತಿಯಿಂದ 10 ಸಾವಿರ ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿತರಾಗಿದ್ದಾರೆ.

ಎಚ್ಚರ ವಹಿಸಿ:
ಅಂತ್ಯಸಂಸ್ಕಾರದ ಬಳಿಕ ಸಾರ್ವಜನಿಕರಿಗೆ ಮನೆಗೆ ತೆರಳಲೂ ಸ್ಥಳೀಯ ಸಾರಿಗೆ ಸೂಕ್ತ ವ್ಯವಸ್ಥೆ ಮಾಡಿದೆ. ಜತೆಗೆ ಹೆಚ್ಚಿನ ಜನಸಂದಣಿ ಉಂಟಾಗುವ ಸಾಧ್ಯತೆಯ ಬಗ್ಗೆಯೂ ಎಚ್ಚರಿಕೆ ನೀಡಿದೆ. ಜತೆಗೆ ಸೋಮವಾರ ಬ್ಯಾಂಕ್‌ ವಹಿವಾಟಿಗೆ ರಜೆಯನ್ನೂ ಪ್ರಕಟಿಸಲಾಗಿದೆ.

ಗೌರವ ನಮನ ಸಲ್ಲಿಸಿದ ರಾಷ್ಟ್ರಪತಿ
ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಂಡನ್‌ನಲ್ಲಿ ಇರುವ ಲ್ಯಾನ್ಸ$rರ್‌ ಹೌಸ್‌ನಲ್ಲಿ ರಾಣಿ ಎರಡನೇ ಎಲಿಜಬೆತ್‌ ನಿಧನಕ್ಕೆ ಭಾರತ ಸರ್ಕಾರದ ಪರವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲಿ ಜಗತ್ತಿನ ಸರ್ಕಾರಿ ಮುಖ್ಯಸ್ಥರು ಸಂತಾಪ ವ್ಯಕ್ತಪಡಿಸಲು ಇರಿಸಲಾಗಿರುವ ಪುಸ್ತಕದಲ್ಲಿ ರಾಷ್ಟ್ರಪತಿ ಮುರ್ಮು ಅವರು ಸರ್ಕಾರದ ಪರ ಸಂತಾಪ ಸಂದೇಶವನ್ನು ಬರೆದಿದ್ದಾರೆ. ಈ ಸಂದರ್ಭದಲ್ಲಿ ಲಂಡನ್‌ನಲ್ಲಿ ಇರುವ ಭಾರತದ ಪ್ರಭಾರ ಹೈಕಮಿಷನರ್‌ ಸುಜಿತ್‌ ಘೋಷ್‌ ಇದ್ದರು. ಇದರ ಜತೆಗೆ ಬ್ರಿಟನ್‌ ಸಂಸತ್‌ನ ವೆಸ್ಟ್‌ಮಿನಿಸ್ಟರ್‌ ಹಾಲ್‌ಗೆ ತೆರಳಿ ರಾಣಿ ಎರಡನೇ ಎಲಿಜಬೆತ್‌ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ರಾಷ್ಟ್ರಪತಿ ಮುರ್ಮು ಅವರು ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ರಾಜ ಮೂರನೇ ಚಾರ್ಲ್ಸ್‌ ಮತ್ತು ರಾಣಿ ಕಾಮಿಲಾ ಅವರು ಆಯೋಜಿಸಿರುವ ಔತಣ ಕೂಟದಲ್ಲಿ ಭಾಗವಹಿಸಿದರು.

37 ಕಿಮೀ- ಅಂತಿಮ ಯಾತ್ರೆ ನಡೆಯಲಿರುವ ದೂರ
20 ಲಕ್ಷ- ಜನರ ನೇರ ವೀಕ್ಷಣೆ
40 ಲಕ್ಷಕ್ಕೂ ಅಧಿಕ- ನೇರಪ್ರಸಾರದ ವೀಕ್ಷಣೆ
ಭದ್ರತೆಯ ಹೊಣೆ
10,000 ಪೊಲೀಸರು
10,000 ಸೇನೆಯ ಅಧಿಕಾರಿ, ಸಿಬ್ಬಂದಿ

Advertisement

Udayavani is now on Telegram. Click here to join our channel and stay updated with the latest news.

Next