ಮೈಸೂರು: ಯಾವುದೇ ಕಲಾ ಪ್ರಕಾರಗಳಿಂದ ಸಮಾಜ ಬದಲಾವಣೆ ಆಗಲಿದೆ ಎಂಬುದು ಕೇವಲ ಭ್ರಮೆಯಾಗಿದ್ದು, ನಾಟಕ, ಸಾಹಿತ್ಯ ಯಾವುದೇ ಕಲೆ ಪ್ರಕಾರಗಳಲ್ಲಿ ಸಿದ್ಧಾಂತಗಳನ್ನು ತುಂಬಬಾರದು ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಪ್ರತಿಪಾದಿಸಿದರು.
ತುಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಕದಂಬ ರಂಗವೇದಿಕೆ ವತಿಯಿಂದ ನಗರದ ಶಾರದಾವಿಲಾಸ ಶತಮಾನೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ “ಸಮಸ್ತ ನಾಟಕ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ನಾಟಕವೆಂದರೆ ಸಮಾಜದಲ್ಲಿರುವ ಅನ್ಯಾಯವನ್ನು ತೋರಿಸಿ, ಸಮಾಜದಲ್ಲಿ ಕ್ರಾಂತಿ ಉಂಟು ಮಾಡುವ ಮೂಲಕ ಸಮಾಜವನ್ನು ಉದ್ಧಾರ ಮಾಡಬೇಕೆಂಬುದು ವ್ಯಾಪಿಸಿದೆ. ಆದರೆ, ನಾಟಕ, ಸಾಹಿತ್ಯ ಹಾಗೂ ಇನ್ನಿತರ ಕಲಾ ಪ್ರಕಾರಗಳ ಮೂಲಕ ಸಮಾಜ ಬದಲಾಗಲಿದೆ ಎಂಬುದು ಕೇವಲ ಭ್ರಮೆಯಾಗಿದೆ. ಸಾಮಾಜಿಕ ಪಿಡುಗುಗಳನ್ನು ತೋರಿಸುವ ನಾಟಕ, ಸಾಹಿತ್ಯಗಳು ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿ, ಸಮಸ್ಯೆಗಳು ನಿವಾರಣೆಯಾದಾಗ ತಟಸ್ಥವಾಗಲಿವೆ ಎಂದರು.
ಮೌಲ್ಯ ಇರಲಿ: ಕಲೆಗೆ ಮುಖ್ಯವಾಗಿ ರಸಾಯನಗಳು, ಜೀವನದ ಮೌಲ್ಯಗಳು ಬೇಕೆ ಹೊರತು ಸಿದ್ಧಾಂತಗಳಲ್ಲ. ಹೀಗಾಗಿ ನಾಟಕ, ಸಾಹಿತ್ಯದಲ್ಲಿ ಸಿದ್ಧಾಂತ ತುಂಬಬಾರದು. ಟಿ.ಪಿ.ಕೈಲಾಸಂ ಅವರ ವರದಕ್ಷಿಣೆ ನಾಟಕ ಬಂದಾಗ ವರದಕ್ಷಿಣೆ ನೀಡುವುದು ಕಡಿಮೆಯಾಗದೆ, ಇನ್ನಷ್ಟು ಹೆಚ್ಚಾಯಿತು.
ಈ ಹಿನ್ನೆಲೆಯಲ್ಲಿ ಭಾವನೆಯ ರಸಾನುಭವ ಇರುವ ಕಲೆಯಲ್ಲಿ ಶಾಸ್ತ್ರೀಯ ಸಂಗೀತ, ಅದರಲ್ಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ನಿಜವಾದ ರಸಾನುಭವ ನೀಡುತ್ತದೆ ಎಂದ ಅವರು, ಮನುಷ್ಯನ ಸ್ವಭಾವ, ಜೀವನ ಸತ್ಯ-ಅಸತ್ಯೆ, ಒಳಿತು-ಕೆಡಕು ಎಲ್ಲವನ್ನು ಶೇಕ್ಸ್‌ಪಿಯರ್ ನಾಟಕಗಳಲ್ಲಿ ತೋರಿಸುತ್ತಿದ್ದ. ತಾನು ಕೂಡ ಸಿನಿಮಾದ ಫ್ಲಾಶ್‌ಬ್ಯಾಕ್‌ಗಳನ್ನು ತೆಗೆದುಕೊಂಡು ಕೃತಿಯಲ್ಲಿ ಅವಳಡಿಸಿದ್ದೇನೆ ಎಂದರು.
ಸರ್ವಕಾಲಿಕ ಸಾಹಿತ್ಯ: ಕೃತಿ ಬಿಡುಗಡೆ ಮಾಡಿ ಮಾತನಾಡಿದ ನಟ ಕೆ.ಸಚೀಂದ್ರ ಪ್ರಸಾದ್, ನಾಟಕಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಬಹುಮುಖ ಪ್ರತಿಭೆ ಎಚ್‌ಎಸ್‌ವಿ ಅವರ ವಿದ್ವಾತ್ ಹಲವಾರು ಜನರ ಆಶ್ರಯವಾಗಿದೆ. ಅವರ ಪದ ಪ್ರಯೋಗದ ಸ್ವಭಾವ, ನ್ಯಾಯ ನಿಷ್ಠುರತೆಯನ್ನು ಒಳಗೊಂಡಿದ್ದು, ಸರ್ವಕಾಲಿಕ ಸಾಹಿತ್ಯವಾಗಿವೆ.
ನಾಟಕವನ್ನು ಹೇಗೆ ಪ್ರದರ್ಶಿಸಬೇಕು ಎಂಬುದನ್ನು ಅವರ ಬರವಣಿಗೆಯೇ ತೋರುತ್ತದೆ. ನಾಟಕಗಳಲ್ಲಿ ಮೌಲ್ವಿಕಗಳು ಅಡಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೃತಿಕಾರ ಎಚ್.ಎಸ್.ವೆಂಕಟೇಶ್ ಮೂರ್ತಿ, ಪ್ರಕಾಶಕ ಟಿ.ಎಸ್.ಛಾಯಪತಿ, ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಕವಿ ಬಿ.ಆರ್.ಲಕ್ಷಣರಾವ್, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಜರಿದ್ದರು.