Advertisement

ನಿಜ ಅರ್ಥದಲ್ಲಿ ಪೇಜಾವರ ಶ್ರೀ ಜಗದ್ಗುರು: ಡಾ|ಬನ್ನಂಜೆ

01:49 AM Jan 05, 2020 | mahesh |

ಉಡುಪಿ: ಸಂಸ್ಕೃತ ಸಾಹಿತ್ಯದಲ್ಲಿ ಪೇಜಾವರ ಶ್ರೀಗಳಿಗೆ ಸರಿಸಮನಾದ ವಿದ್ವಾಂಸ ಇನ್ನೊಬ್ಬರಿಲ್ಲ. ಅತಿ ಶ್ರೇಷ್ಠ ಸಂಸ್ಕೃತ ವಿದ್ವಾಂಸರಲ್ಲಿ ಒಬ್ಬರಾದರೂ ಮಕ್ಕಳೊಡನೆ ಮಕ್ಕಳಾಗಿ ಬೆರೆಯುತ್ತಿದ್ದರು. ಎಲ್ಲ ಜಾತಿ, ಮತೀಯರು, ಸಂತರಿಂದ ಮಾನಿತರಾದ ಅವರು ನಿಜವಾದ ಅರ್ಥದಲ್ಲಿ ಜಗದ್ಗುರುಗಳು ಎಂದು ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ಹೇಳಿದರು.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಉಡುಪಿಯ ಎಲ್ಲ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಆಯೋಜಿಸಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದ ಅವರು, ಶತಮಾನಕ್ಕೊಮ್ಮೆಯೂ ಇಂತಹ ಯತಿಗಳು ಸಿಗಲಾರರು. ನೂರಾರು ವರ್ಷವಾದರೂ ಅಂಥವರು ಹುಟ್ಟುವುದಿಲ್ಲ ಎಂದರು.

ಎರಡು ಕಡೆ ಸರಕಾರಿ ಗೌರವ
ತಡವಾಗಿ ತಿಳಿದ ಕಾರಣ ಜನರು ಅಂತಿಮ ದರ್ಶನಕ್ಕೆ ಬರಲು ಆಗಲಿಲ್ಲ. ಆದರೆ ಎರಡು ಕಡೆ ಸರಕಾರಿ ಗೌರವ ಸಿಕ್ಕಿದ ಏಕೈಕ ಸ್ವಾಮೀಜಿ ಪೇಜಾವರ ಶ್ರೀಗಳು ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.

ಉಡುಪಿಯಲ್ಲಿ ವೃಂದಾವನಕ್ಕೆ ಒತ್ತಾಯ
ಮುಂದಿನ ಪೀಳಿಗೆಗೆ ಪೇಜಾವರ ಶ್ರೀಗಳು ಯಾರು ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಶ್ರೀಗಳ ವೃಂದಾವನವನ್ನು ನಿರ್ಮಿಸಬೇಕು ಎಂದು ಉದ್ಯಮಿ ಡಾ| ಜಿ. ಶಂಕರ್‌ ಹೇಳಿದರು.

ನುಡಿದಂತೆ ನಡೆದವರು
ಗಾಂಧೀಜಿಯವರಂತೆ ಪೇಜಾವರ ಶ್ರೀಗಳು ನುಡಿದಂತೆ ನಡೆದರು ಎಂದು ಮಣಿಪಾಲ ಮಾಹೆ ವಿ.ವಿ. ಸಹ
ಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಅಭಿಪ್ರಾಯ ಪಟ್ಟರು. ಆನೆಗುಡ್ಡೆ ದೇವಸ್ಥಾನದ ಮಾಜಿ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಅವರೊಡನೆ ಕಲಿತ ಸಂದರ್ಭವನ್ನು ನೆನಪಿಸಿದರು.
ನಿವೃತ್ತ ಪ್ರಾಂಶುಪಾಲ, ಸಾಹಿತಿ ಪ್ರೊ| ಉದ್ಯಾವರ ಮಾಧವಾಚಾರ್ಯ, ಮಾಜಿ ಸಚಿವ ವಿನಯಕುಮಾರ ಸೊರಕೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉದ್ಯಮಿ ಜೆರ್ರಿ ವಿನ್ಸೆಂಟ್‌ ಡಯಾಸ್‌, ಪೆರಂಪಳ್ಳಿ ವಾಸುದೇವ ಭಟ್‌ ನುಡಿನಮನ ಸಲ್ಲಿಸಿದರು. ಮುರಳಿ ಕಡೆಕಾರ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

ಧಾರವಾಡದಲ್ಲಿ ಪ್ರತಿಮೆ: ಡಾ| ಹೆಗ್ಗಡೆ
1972ರಲ್ಲಿ ಧಾರವಾಡದ ಜನತಾ ಶಿಕ್ಷಣ ಸಮಿತಿ ಸಂಸ್ಥೆಯನ್ನು ಪೇಜಾವರ ಶ್ರೀಗಳು ನಮಗೆ ಕೊಟ್ಟರು. ಪ್ರತಿ ವರ್ಷ ಆಡಳಿತ ಮಂಡಳಿಯಲ್ಲಿ ಪಾಲ್ಗೊಂಡು ಮಾರ್ಗ ದರ್ಶನ ಮಾಡುತ್ತಿದ್ದರು. ಅವರ ಪ್ರತಿಮೆಯನ್ನು ಒಂದು ತಿಂಗಳೊಳಗೆ ಧಾರವಾಡದ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.

ಪೇಜಾವರ ಶ್ರೀಗಳಿಗೆ ಹೋಲಿಕೆ ಇಲ್ಲ
ಪೇಜಾವರ ಶ್ರೀಗಳನ್ನು ಇನ್ನೊಬ್ಬರೊಂದಿಗೆ ಹೋಲಿಸುವಂತಿಲ್ಲ. ಬೆನ್ನು ನೋವಿನಲ್ಲಿ ಮಲಗಿದ್ದಾಗಲೂ ಅಲ್ಲಿಯೇ ಪೂಜೆ, ಜಪ ಮಾಡುತ್ತಿದ್ದರು. ಕೊನೆಯ ಪ್ರವಚನವನ್ನು ಇಂದ್ರದ್ಯುಮ್ನ ರಾಜ ಸ್ವರ್ಗಕ್ಕೆ ಮತ್ತೆ ಹೋದ ಕಥೆ ಹೇಳಿ ಮುಗಿಸಿದರು ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು. ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next