ಬೆಂಗಳೂರು: ರಾಜಧಾನಿಯಲ್ಲಿ ಸರಕಳ್ಳರ ಅಟ್ಟಹಾಸ ಮುಂದುವರಿದ್ದು, ಸಂಜಯ್‌ನಗರದಲ್ಲಿ ಕೇವಲ 30 ನಿಮಿಷಗಳ ಅವಧಿಯೊಳಗೆ ಮೂವರು ಮಹಿಳೆಯರ ಸರ ಕಿತ್ತುಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೆಟಿಎಂ ಡ್ನೂಕ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು, ಅರ್ಧಗಂಟೆಯಲ್ಲಿ ಮೂವರು ಮಹಿಳೆಯರ ಸರದೋಚಿದ್ದು, ಸರಕಳ್ಳರ ಈ ಅಟ್ಟಹಾಸಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಸದಾಶಿವನಗರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಕುತ್ತಿಗೆಗೆ ಚೂರಿ ಇಟ್ಟರು: ಜ.11ರಂದು ಬೆಳಗ್ಗೆ 10.20ರ ಸುಮಾರಿಗೆ ಡಾಲರ್ ಕಾಲೋನಿಯ ಸಮೀಪದ 5ನೇ ಮುಖ್ಯರಸ್ತೆಯಲ್ಲಿ ಬಸಮ್ಮ ಎಂಬುವವರು ಮನೆಮುಂದಿನ ತಂತಿ ಮೇಲೆ ಬಟ್ಟೆ ಒಣಗಿ ಹಾಕುವಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಮಹಿಳೆಯನ್ನು ಅಡ್ಡಗಟ್ಟಿ, ಅವರ ಕುತ್ತಿಗೆಗೆ ಚಾಕು ಇರಿಸಿ, ಸರ ಬಿಚ್ಚಿ ಕೊಡುವಂತೆ ಹೆದರಿಸಿದ್ದಾರೆ. ದುಷ್ಕರ್ಮಿಗಳ ಬೆದರಿಕೆಗೆ ಕಂಗಾಲಾದ ಬಸಮ್ಮ ಸಾವರಿಸಿಕೊಳ್ಳುವಷ್ಟರಲ್ಲಿ ಆಕೆಯ ಕತ್ತಿನಲ್ಲಿದ್ದ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಸರ ಕಿತ್ತಕೊಂಡು ಪರಾರಿಯಾಗಿದ್ದಾರೆ.
ಇದಾದ ಬಳಿಕ 10.30ರ ಸುಮಾರಿಗೆ ಎಂ.ಎಸ್.ರಾಮಯ್ಯ ನಗರದ 4ನೇ ಮುಖ್ಯರಸ್ತೆಯಲ್ಲಿ ಸೊಸೆಯ ಜತೆ ದೇವಸ್ಥಾನಕ್ಕೆ ಹೋಗುತ್ತಿದ್ದ ಶ್ಯಾಮಲಾ (63) ಎಂಬ ವೃದ್ಧೆಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಅವರ ಕತ್ತಿನಲ್ಲಿದ್ದ 55 ಗ್ರಾಂ. ತೂಕದ ಮಾಂಗಲ್ಯ ಸರ ದೋಚಿದ್ದಾರೆ. ಇದರಿಂದ ಕಂಗಾಲಾದ ಅವರ ಸೊಸೆ ಸಹಾಯಕ್ಕೆ ಕೂಗಿಕೊಂಡಿದ್ದು, ಸಾರ್ವಜನಿಕರು ನೆರವಿಗೆ ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.
ಬಳಿಕ ಸಂಜಯನಗರದ ಎನ್‌ಜಿಎಫ್ ಲೇಔಟ್‌ನ ರಾಘವೇಂದ್ರ ಸ್ವಾಮಿ ದೇವಾಲಯದ ಸಮೀಪ 10.55ರ ಸುಮಾರಿಗೆ ಬಂದ ದುಷ್ಕರ್ಮಿಗಳು, ನಡೆದುಕೊಂಡು ದೇವಾಲಯಕ್ಕೆ ಹೋಗುತ್ತಿದ್ದ ಯಶೋಧಾ (73) ಅವರನ್ನು ಹಿಂಬಾಲಿಸಿದ್ದಾರೆ. ಬಳಿಕ ಬೈಕ್ ಹಿಂಬದಿ ಸವಾರ ಯಶೋಧಾ ಅವರಿಗೆ ಚಾಕು ತೋರಿಸಿ ಬೆದರಿಸಿ, ಸುಮಾರು ಎರಡು ಲಕ್ಷ ರೂ. ಮೌಲ್ಯದ 80 ಗ್ರಾಂ. ತೂಕದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸರ ಕಿತ್ತುಕೊಳ್ಳುವ ವೇಳೆ ಯಶೋಧ ಅವರ ಮೂಗು ಹಾಗೂ ಕಿವಿಗೆ ಗಾಯವಾಗಿದೆ.
ಈ ಕುರಿತು ಯಶೋಧಾ ಅವರ ಪತಿ ರಂಗಸ್ವಾಮಯ್ಯ ಹಾಗೂ ಬಸಮ್ಮ ಅವರು ನೀಡಿರುವ ಪ್ರತ್ಯೇಕ ದೂರುಗಳ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಸಂಜಯ್‌ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶ್ಯಾಮಲಾ ಅವರು ನೀಡಿದ ದೂರಿನ ಅನ್ವಯ ಸದಾಶಿವನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದುಷ್ಕರ್ಮಿಗಳ ಕೃತ್ಯದ ಬಗ್ಗೆ “ಉದಯವಾಣಿ’ಜತೆ ಮಾತನಾಡಿದ ಯಶೋಧಾ ಅವರ ಸಂಬಂಧಿ ಚಂದ್ರಶೇಖರ್, “ಹಗಲಲ್ಲೇ ದುಷ್ಕರ್ಮಿಗಳು ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಕಿತ್ತುಕೊಂಡು ಹೋಗುತ್ತಿರುವುದು ಆತಂಕ ಮೂಡಿಸಿದೆ. ಸರಗಳ್ಳರ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದರು.
ದುಷ್ಕರ್ಮಿಗಳು ಕಳವು ಮಾಡಿರುವ ಬೈಕ್ ಅನ್ನು ಬಳಸಿರುವುದು ತಿಳಿದುಬಂದಿದೆ. ಘಟನಾ ಸ್ಥಳಗಳ ಸುತ್ತಮುತ್ತ ಇರುವ ಸಿಸಿ ಕ್ಯಾಮೆರಾ ಫೂಟೇಜ್ ಪರಿಶೀಲಿಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.