Advertisement

ರಾಜ್ಯದಲ್ಲಿ  ಶೇ. 22ರಷ್ಟು ಮಾತ್ರ ಅರಣ್ಯ ಉಳಿವು: ಸಚಿವ ರೈ ವಿಷಾದ

06:50 AM Jul 23, 2017 | Team Udayavani |

ಬಂಟ್ವಾಳ : ಪ್ರಾಕೃತಿಕವಾಗಿ ಶೇ. 33 ಅಂಶ ಅರಣ್ಯ ಇರಬೇಕು. ಆದರೆ ಕರ್ನಾಟಕದಲ್ಲಿ ಶೇ. 22 ವನ ಪ್ರದೇಶವಷ್ಟೇ ಉಳಿದುಕೊಂಡಿದೆ. ಇದರಿಂದ ಅಸಮತೋಲನ ಉಂಟಾಗಿ ಮಳೆ ಕೊರತೆಯಾಗಿದೆ. ಇದರಿಂದಾಗಿ ಅನೇಕ ರೀತಿಯ ವನ್ಯ ಜೀವಿಗಳು, ಸಸ್ಯರಾಶಿಗಳು ನಾಶವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

Advertisement

ಅವರು ಜು. 22ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಗೋಳ್ತಮಜಲು ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ಪರಿಸರದಲ್ಲಿ ರಾಜ್ಯ ಮಟ್ಟದ ಅರಣ್ಯ ಸಂವರ್ಧನಾ ಅಭಿಯಾನದ ಪ್ರಯುಕ್ತ ದೇವರವನ ನಿರ್ಮಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

1978ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಬಂದ ಅನಂತರ ಅರಣ್ಯ ನಾಶ ಕಡಿಮೆ ಆಗಿದೆ. ಪಶ್ಚಿಮ ಘಟ್ಟದಿಂದಾಗಿ ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಸ್ವಲ್ಪವಾದರೂ ಉಳಿದುಕೊಂಡಿವೆ. ರಾಷ್ಟ್ರದಲ್ಲಿ ಅರಣ್ಯ ಸಂಪತ್ತು ಗರಿಷ್ಠ ಇರುವ ರಾಜ್ಯ ಕರ್ನಾಟಕ. ಬಯಲು ಸೀಮೆಗೆ ಹೋದರೆ ಅಲ್ಲಿ ಮಳೆಯೇ ಇಲ್ಲದ ಸ್ಥಿತಿಯಾಗಿದೆ. ಕರಾವಳಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದೆಯಾದರೂ ಇನ್ನೂ ಬರುತ್ತಿದೆ ಎಂಬುದೇ ಸಮಾಧಾನದ ಅಂಶ ಎಂದವರು ಹೇಳಿದರು.

ಸಹಾಯಧನ ಲಭ್ಯ
ಜೀವ ಜಲ ಎಂಬುದು ಹುಟ್ಟುವುದು ಕಾಡುಗಳಿಂದ. ನದಿಗಳ ಉಗಮ ಸ್ಥಾನ ಯಾವತ್ತೂ ಕಾಡುಗಳಿಂದ ಎಂಬುದನ್ನು ನಾವು ತಿಳಿಯಬೇಕು. ಗಿಡವನ್ನು ನೆಟ್ಟರೆ ಸಾಲದು, ಅದನ್ನು ಉಳಿಸಿ ಬೆಳೆಸಬೇಕು. ಅದಕ್ಕಾಗಿ ಪ್ರತೀ ಗಿಡಕ್ಕೆ ಮೂರು ವರ್ಷದ ಅವಧಿಯಲ್ಲಿ ಅರಣ್ಯ ಇಲಾಖೆಯಿಂದ ನೂರು ರೂ. ಸಹಾಯಧನ ಸಿಗುತ್ತದೆ. ಒಂದು ಗಿಡವನ್ನು ಕೊಂಡು ಹೋಗಿ ನೆಡುವುದಕ್ಕೆ ಒಂದು ರೂ. ಚಾರ್ಜ್‌ ಮಾಡಲಾಗುತ್ತದೆ. ಅದನ್ನು ಉಳಿಸಿಕೊಂಡರೆ ನೂರು ರೂ. ದೊರೆಯುತ್ತದೆ ಎಂಬುದಾಗಿ ಸಚಿವರು ವಿವರಿಸಿದರು.

ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ ಬಾಬ ರೈ ಮಾತನಾಡಿ ಕಾಡು ಜಾತಿಯ ಮರಗಳಿಗಿಂತ ಹಣ್ಣುಹಂಪಲಿನ ಮರಗಳು ವೇಗವಾಗಿ ಬೆಳೆಯುತ್ತವೆ ಎಂದರು.

Advertisement

ವೇದಿಕೆಯಲ್ಲಿ ಎಪಿಎಂಸಿ ಅಧ್ಯಕ್ಷ ಕೆ. ಪದ್ಮನಾಭ ರೈ, ಗೋಳ್ತಮಜಲು ಗ್ರಾ.ಪಂ. ಪಿಡಿಒ ನಾರಾಯಣ ಗಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಉಪಸ್ಥಿತರಿದ್ದರು. ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ. ಸುರೇಶ್‌ ಪಾಲ್ಗೊಂಡಿದ್ದರು.

ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಬರಿಮಾರು ಸ್ವಾಗತಿಸಿ,  ಗ್ರಾಮಾಭಿವೃದ್ಧಿ ಬಂಟ್ವಾಳ ಯೋಜನಾಧಿಕಾರಿ ಸುನಿತಾ ನಾಯಕ್‌ ವಂದಿಸಿದರು. ಕೃಷಿ ಅಧಿಕಾರಿ ನಾರಾಯಣ  ಕೆ. ಕಾರ್ಯಕ್ರಮ ನಿರ್ವಹಿಸಿದರು.

640 ಕೇಂದ್ರಗಳಲ್ಲಿ ಅಭಿಯಾನ
ಈ ಯೋಜನೆಯಿಂದ ಇಂದು ರಾಜ್ಯದಾದ್ಯಂತ  6,400 ಕೇಂದ್ರಗಳಲ್ಲಿ ಅರಣ್ಯ ಸಂವರ್ಧನಾ ಅಭಿಯಾನ ನಡೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯ ಸರಕಾರದ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಇದನ್ನು ಹಮ್ಮಿ ಕೊಳ್ಳಲಾಗುತ್ತಿದೆ.ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಲ್ಲಿ 29ಲಕ್ಷ  ಬೀಜದ ಉಂಡೆಗಳನ್ನು  ಬಿತ್ತನೆ ಮಾಡುವ ಮೂಲಕ,  2 ಲಕ್ಷ ಗಿಡಗಳನ್ನು ವಿತರಿಸಿ ನೆಟ್ಟು ಪೋಷಿಸುವ ಕ್ರಮಗಳಿಗೆ ಚಾಲನೆ ಸಿಗಲಿದೆ. ಕಾಸರಗೋಡು, ದ.ಕ.ಜಿಲ್ಲೆಯ ನಿರ್ದಿಷ್ಟ ಸ್ಥಳಗಳಲ್ಲಿ ಇಂತಹ ಯೋಜನೆ ಮೂಲಕ ಕನಿಷ್ಠ ನೂರು ಗಿಡಗಳನ್ನು ನೆಟ್ಟು ರಕ್ಷಿಸುವ ಯೋಜನೆ ರೂಪಿಸಿದೆ. 
– ಕೆ. ಚಂದ್ರಶೇಖರ್‌ , ಗ್ರಾಮಾಭಿವೃದ್ಧಿ ಯೋಜನೆ 
ಜಿಲ್ಲಾ ನಿರ್ದೇಶಕ  

Advertisement

Udayavani is now on Telegram. Click here to join our channel and stay updated with the latest news.

Next