ಕೆ.ಆರ್.ಪುರ: ಚರಂಡಿ ಮೂಲಕ ಸುರಂಗ ಕೊರೆದು ಚಿನ್ನದಂಗಡಿಗೆ ಕನ್ನ ಹಾಕಿರುವ ಚಾಲಾಕಿ ಕಳ್ಳರು 20ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಕೆಆರ್‌ಪುರ ಪೋಲಿಸ್ ಠಾಣೆ ವ್ಯಾಪ್ತಿಯ ದೇವಸಂದ್ರ ಮುಖ್ಯ ರಸ್ತೆಯ “ಬಾಲಾಜಿ ಜುವೆಲ್ಲರ್ ಅಂಡ್ ಬ್ಯಾಂಕರ್’ ಅಂಗಡಿಯಲ್ಲಿ ಘಟನೆ ನಡೆದಿದೆ.
ರಾಜಸ್ಥಾನ್ ಮೂಲದ ಮೋಹನ್ ಲಾಲ್ 12ವರ್ಷಗಳಿಂದ ಚಿನ್ನದಂಗಡಿ ನಡೆಸುತ್ತಿದ್ದಾರೆ. ಈ ಚಿನ್ನದಂಗಡಿಗೆ ದುಷ್ಕರ್ಮಿಗಳು ಬುಧವಾರ ಮಧ್ಯರಾತ್ರಿ ಸುರಂಗ ಕೊರೆದಿದ್ದಾರೆ. ಅದರ ಮೂಲಕ ಒಳನುಗ್ಗಿ ಚಿನ್ನಾ¸ರಣ ಕದ್ದಿದ್ದಾರೆ. ಮುಂಜಾನೆ ಮಾಲೀಕ ಅಂಗಡಿ ತೆರೆದಾಗ ಘಟನೆ ಬೆಳಕಿಗೆ ಬಂದಿದೆ.
ನಂತರ ಅಂಗಡಿ ಸುತ್ತಲೂ ಪರಿಶೀಲನೆ ನಡೆಸಿದಾಗ 20 ಅಡಿಗಳಷ್ಟು ದೂರವಿರುವ ಚರಂಡಿಯಿಂದ ಕಳ್ಳರು ಸುರಂಗ ಕೊರೆದುಕೊಂಡು ಬಂದಿರುವುದು ಗೊತ್ತಾಗಿದೆ. ಅಂಗಡಿಯ ಪಾಯ ಕಿತ್ತು ದುಷ್ಕರ್ಮಿಗಳು ಒಳಗೆ ಪ್ರವೇಶಿಸಿದ್ದಾರೆ. ಈ ಸಂಬಂಧ ಮೋಹನ್ ಲಾಲ್ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ವಿಷಯ ತಿಳಿದು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಬಂದ ಈಶಾನ್ಯ ವಿಭಾಗದ ಡಿಸಿಪಿ ಬೋರ ಲಿಂಗಯ್ಯ ಸ್ಥಳ ಪರಿಶೀಲಿಸಿದರು. ಈ ವೇಳೆ ಅಂಗಡಿಗೆಯೊಳಕ್ಕೆ ನುಸುಳಲು ಕೊರೆದಿರುವ ಸುರಂಗದಲ್ಲಿ 5ಕೆಜಿಯಷ್ಟು ಬೆಳ್ಳಿ ಆಭರಣಗಳು ಪತ್ತೆಯಾದವು. ಅಂಗಡಿಯಲ್ಲಿ 500 ರಿಂದ 600 ಗ್ರಾಂ. ಚಿನ್ನ ಹಾಗೂ 35 ಕೆ.ಜಿ ಬೆಳ್ಳಿ ಕಳವಾಗಿರುವುದಾಗಿ ಮಾಲೀಕ ಮೋಹನ್ ಲಾಲ್ ದೂರಿದ್ದಾರೆ.
ಪ್ರಕರಣದ ಸಂಬಂಧ ವಿಶೇಷ ತಂಡ ರಚಿಸಲಾಗಿದೆ ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ.