Advertisement

ಅಖಾಡದಲ್ಲಿ ಮಾತು-ಮಥನ

11:30 PM Apr 16, 2019 | Team Udayavani |

ರಾಜ್ಯದಲ್ಲಿ ನಡೆಯಲಿರುವ ಎರಡು ಹಂತದ ಲೋಕಸಭಾ ಚುನಾವಣೆಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಅಬ್ಬರ ಪ್ರಚಾರ ನಡೆಸಿದ್ದು, ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.

Advertisement

ರಾಷ್ಟ್ರ ನಾಯಕರಾದ ಪ್ರಧಾನಿ ಮೋದಿ, ಅಮಿತ್‌ ಶಾ, ರಾಹುಲ್‌ ಗಾಂಧಿ ಸಹಿತ ರಾಜ್ಯ ನಾಯಕರೂ ವಿವಿಧೆಡೆ ಪ್ರಚಾರ ಸಭೆ, ರೋಡ್‌ ಶೋ ನಡೆಸಿ ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ. ನಾಯಕರ ಪ್ರಮುಖ ಭಾಷಣದ ಅಂಶ ಹಾಗೂ ಚರ್ಚಿಸಿದ ವಿಷಯಗಳ ವಿವರ ಇಲ್ಲಿದೆ.

ರಾಹುಲ್‌ಗಾಂಧಿ
ನಾಲ್ಕು ಪ್ರಚಾರ ಸಭೆ: ಬೆಂಗಳೂರು, ಕೋಲಾರ, ಚಿತ್ರದುರ್ಗ, ಕೆ.ಆರ್‌.ನಗರ

ಪ್ರಸ್ತಾಪಿತ ವಿಚಾರ
* ಯಡಿಯೂರಪ್ಪ ಅವರು ಹೈಕಮಾಂಡ್‌ ನಾಯಕರಿಗೆ ದೇಣಿಗೆ ನೀಡಿದ್ದಾರೆ ಎನ್ನುವ ಡೈರಿಯಲ್ಲಿ ಬರೆದಿರುವ 1800 ಕೋಟಿ ರೂ.ಎಲ್ಲಿಂದ ಬಂದಿತ್ತು ಎಂದು ರಾಹುಲ್‌ ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದರು. ಚೌಕಿದಾರ್‌ ಚೋರ್‌ ಹೈ ಎಂದು ಆರೋಪ.

*ಸತ್ಯದ ಪರ ಕಾಂಗ್ರೆಸ್‌ ಇದೆ. ಸುಳ್ಳಿನ ಪರ ಬಿಜೆಪಿ ಇದೆ. ಕಾಂಗ್ರೆಸ್‌ ಈ ಬಾರಿ ನ್ಯಾಯ್‌ ಯೋಜನೆ ಘೋಷಣೆ ಮೂಲಕ ಬಡತನದ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದೆ.

Advertisement

ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದರೆ, ಜಿಎಸ್‌ಟಿ ವ್ಯವಸ್ಥೆಯನ್ನು ಸರಳೀಕರಣಗೊಳಿಸುತ್ತೇವೆ. ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ನಾಯಕರಿಗೆ ಕಳುಹಿಸಿದ್ದ 1800 ಕೋಟಿ ರೂ. ಎಲ್ಲಿಂದ ಬಂತು ಎಂದು ಚೌಕಿದಾರ ಹೇಳಬೇಕು. ನರೇಂದ್ರ ಮೋದಿ ದೇಶದ ಬಡ ಜನರ ಚೌಕಿದಾರ ಅಲ್ಲ. ರಫೆಲ್‌ ಹಗರಣದಲ್ಲಿ ಪಾಲುದಾರ. ಹೀಗಾಗಿ ಚೌಕಿದಾರ್‌ ಚೋರ್‌ ಹೈ.
-ರಾಹುಲ್‌ ಗಾಂಧಿ,ಎಐಸಿಸಿ ಅಧ್ಯಕ್ಷ

ಚರ್ಚೆಗೀಡಾಗಿದ್ದು

2014 ರ ಚುನಾವಣೆಯಲ್ಲಿ ನರೇಂದ್ರಮೋದಿ ಹೇಳಿದಂತೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ. ಬಡವರ ಖಾತೆಗಳಿಗೆ 15 ಲಕ್ಷ ರೂ. ಹಾಕಿಲ್ಲ. ಕಾಂಗ್ರೆಸ್‌ ಈ ಬಾರಿ ಅಧಿಕಾರಕ್ಕೆ ಬಂದರೆ “ನ್ಯಾಯ್‌’ ಯೋಜನೆಯಡಿ ಬಡವರಿಗೆ ವಾರ್ಷಿಕ 72 ಸಾವಿರ ರೂ. ಬ್ಯಾಂಕ್‌ ಖಾತೆಗೆ ಹಾಕುತ್ತೇವೆ ಎಂದು ರಾಹುಲ್‌ ಹೇಳಿದ್ದರು. ಇದನ್ನು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಲೇವಡಿ ಮಾಡಿದ್ದರು.

***

ಸಿದ್ದರಾಮಯ್ಯ: 15 ಪ್ರಚಾರ ಸಭೆ

ಪ್ರಸ್ತಾಪಿಸಿದ ವಿಚಾರಗಳು
* ಈ ಬಾರಿ ಬಿಜೆಪಿ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಗುರಿ.
* ಈ ಚುನಾವಣೆ ರಾಹುಲ್‌ ಗಾಂಧಿ ಹಾಗೂ ನರೇಂದ್ರ ಮೋದಿ ನಡುವಿನ ಹೋರಾಟ.
* ಈ ಬಾರಿ ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ. ಅದು ಸುಲಭದ ಮಾತಲ್ಲ
* ಇನ್ನು ಮುಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ.

ಈ ಬಾರಿ ಬಿಜೆಪಿಯನ್ನು ಸೋಲಿಸಲು ಮೈತ್ರಿ ಪಕ್ಷಗಳ ಪರಸ್ಪರ ಸಹಕಾರದಿಂದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ರಾಜ್ಯದಲ್ಲಿ ಮೈತ್ರಿ ಪಕ್ಷಗಳು 20 ಕ್ಕೂ ಹೆಚ್ಚು ಸ್ಥಾನ ಗೆಲ್ಲದಿದ್ದರೆ, ಸರ್ಕಾರ ಉಳಿಯುವುದು ಕಷ್ಟ. ನಾನು ಈ ಸರ್ಕಾರದಲ್ಲಿ ಮಂತ್ರಿಯಾಗಿಲ್ಲ. ಜಿ.ಟಿ.ದೇವೇಗೌಡರು, ಸಾ.ರಾ. ಮಹೇಶ್‌, ತಮ್ಮಣ್ಣ ಮಂತ್ರಿಯಾಗಿದ್ದಾರೆ.
-ಸಿದ್ದರಾಮಯ್ಯ, ಮಾಜಿ ಸಿಎಂ

ಚರ್ಚೆಗೀಡಾದ ವಿಚಾರ
* ಬಿಜೆಪಿಯವರು ಹಿಂದುಳಿದ ವರ್ಗದವರಿಗೆ ಟಿಕೆಟ್‌ ನೀಡಿಲ್ಲ. ಶೇ.8 ರಷ್ಟು ಇರುವ ಕುರುಬರಿಗೂ ಅವಕಾಶ ನೀಡಿಲ್ಲ. ಹೀಗಾಗಿ, ನೀವು ಬಿಜೆಪಿಗೆ ಮತ ಹಾಕಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಬಿಜೆಪಿ , ಆಕ್ಷೇಪ ವ್ಯಕ್ತಪಡಿಸಿ ಜಾತಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿತ್ತು.

***

ನರೇಂದ್ರ ಮೋದಿ
ಐದು ಪ್ರಚಾರ ಸಭೆ: ಪ್ರಧಾನಿ ನರೇಂದ್ರ ಮೋದಿಯವರು ಮೂರು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದು, ಐದು ಕಡೆ ಪ್ರಚಾರ ಸಭೆ ನಡೆಸಿದರು. ಚಿತ್ರದುರ್ಗ, ಮೈಸೂರು, ಗಂಗಾವತಿ, ಮಂಗಳೂರು, ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗಿ.

ಕರ್ನಾಟಕದಲ್ಲಿ ಸೋತ ಎರಡು ಪಕ್ಷಗಳು ಕೇವಲ ಅಧಿಕಾರದಾಸೆಗಾಗಿ ಒಂದಾಗಿವೆ. ನಿಯತ್ತಿಲ್ಲದ ಈ ಸರ್ಕಾರ ಶೀಘ್ರ ಪತನವಾಗಲಿದೆ. ಕಾಂಗ್ರೆಸ್‌ ಅಧ್ಯಕ್ಷ ನಾಮ್‌ದಾರ್‌ಗೆ ಹಿಂದಿನ ಕ್ಷೇತ್ರದಲ್ಲಿ ಸೋಲಿನ ಭಯ ಕಾಡುತ್ತಿರುವುದರಿಂದ ದಕ್ಷಿಣಕ್ಕೆ ಓಡಿ ಬಂದಿದ್ದಾರೆ. ಅಧ್ಯಕ್ಷರ ಸ್ಥಿತಿ ಹೀಗಾದರೆ‌ ಪಕ್ಷದ ಸ್ಥಿತಿ ಏನಾಗಿರಬಹುದು? ಕಾಂಗ್ರೆಸ್‌- ಜೆಡಿಎಸ್‌ ಇತರೆ ಪಕ್ಷಗಳು ವಂಶೋದ್ಧಾರದ ಬಗ್ಗೆಯೇ ಗಮನ ಕೇಂದ್ರೀಕರಿಸಿವೆ.
-ನರೇಂದ್ರ ಮೋದಿ, ಪ್ರಧಾನಿ

ಚರ್ಚೆಗೀಡಾದ ವಿಷಯ
ಸೈನಿಕರ ಬಗ್ಗೆ ಕುಮಾರಸ್ವಾಮಿ ಹೇಳಿಕೆಯನ್ನು ಪ್ರಧಾನಿ ಖಂಡಿಸಿದ್ದು. ವಂಶಾಡಳಿತ ಹಾಗೂ ಲೂಟಿ ಮಾಡದಿದ್ದಾಗ ಐಟಿ ಭಯವೇಕೆ ಎಂದು ಪ್ರಧಾನಿಯವರು ಪ್ರಶ್ನಿಸಿದ್ದು ರಾಜಕೀಯ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.

***

ಬಿ.ಎಸ್‌.ಯಡಿಯೂರಪ್ಪ
20 ಪ್ರಚಾರ ಸಭೆ: ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಉತ್ತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಉಡುಪಿ-ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು-ಕೊಡಗು, ಚಿತ್ರದುರ್ಗ

ಅಪ್ಪ, ಮಕ್ಕಳು, ಸೊಸೆಯಂದಿರ ರಾಜಕೀಯವಾಯಿತು, ಈಗ ತಮ್ಮ ಮೊಮ್ಮಕ್ಕಳನ್ನು ಕಟ್ಟಿಕೊಂಡು ದಬ್ಟಾಳಿಕೆ ನಡೆಸಲಾರಂಭಿಸಿದ್ದಾರೆ. ದೇವೇಗೌಡರ ಸೋಲು ಖಚಿತ. ಇದು 10 ಪರ್ಸೆಂಟ್‌ನಿಂದ 20 ಪರ್ಸೆಂಟ್‌ಗೆ ಏರಿಕೆಯಾದ ಕಮಿಷನ್‌ ಏಜೆಂಟ್‌ ಸರ್ಕಾರ
– ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ

ಚರ್ಚೆಗೀಡಾಗಿದ್ದು
ಚಾಮುಂಡೇಶ್ವರಿ ಸೋಲಿಗೆ ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಅಪ್ಪ- ಮಕ್ಕಳಿಗೆ ಜನರೇ ಮನೆಯ ದಾರಿ ತೋರಿಸುತ್ತಾರೆ. ರಾಜ್ಯದಲ್ಲಿ 22 ಲೋಕಸಭಾ ಸ್ಥಾನ ಗೆಲ್ಲುತ್ತಿದ್ದಂತೆ ಮೈತ್ರಿ ಸರ್ಕಾರ ಪತನವಾಗಿದೆ ಎಂಬುದಾಗಿ ಯಡಿಯೂರಪ್ಪ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು.

***

ಎಚ್‌.ಡಿ.ದೇವೇಗೌಡ
15 ಸಮಾವೇಶ: ಬೆಂಗಳೂರು, ತುಮಕೂರು, ಉಡುಪಿ-ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಪ್ರವಾಸ

ಮಾತನಾಡಿದ ಪ್ರಮುಖ ವಿಚಾರ
* ದೇಶದಲ್ಲಿ ಮತ್ತೂಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ.
* ಚುನಾವಣಾ ಫ‌ಲಿತಾಂಶದ ನಂತರ ಮಹಾಘಟಬಂಧನ್‌ ಸ್ವರೂಪ ಬದಲಾಗಲಿದೆ. ಪ್ರಧಾನಿ ಹುದ್ದೆಗೆ ನನ್ನ ಆಯ್ಕೆ ರಾಹುಲ್‌ಗಾಂಧಿ.
*ಮೋದಿ ಅವರ ದುರಹಂಕಾರದ ವರ್ತನೆಗೆ ಪಾಠ ಕಲಿಸಲು ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ.

ನರೇಂದ್ರಮೋದಿ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದು, ಮಹಾಘಟ್‌ಬಂಧನ್‌ ಬಗ್ಗೆ ಅವಹೇಳನ ಮಾಡುವ ಮೂಲಕ ಸಣ್ಣತನ ತೋರುತ್ತಿದ್ದಾರೆ. ಈ ಚುನಾವಣೆಯಲ್ಲಿ ಹೆಚ್ಚುವರಿಯಾಗಿ ಸೀಟು ಗೆದ್ದರೆ ಮಾತ್ರ ನಾನು-ಸಿದ್ದರಾಮಯ್ಯ ಒಟ್ಟಾಗಿದ್ದಕ್ಕೆ ಸಾರ್ಥಕ.
-ದೇವೇಗೌಡ, ಜೆಡಿಎಸ್‌ ವರಿಷ್ಠ

ಚರ್ಚೆಗೀಡಾಗಿದ್ದು
ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಒಂದಾಗಿದೆ, ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂದು ಹೋದ ಕಡೆಯೆಲ್ಲಾ ಹೇಳುತ್ತಾ ಬಂದಿದ್ದರಿಂದ ಆ ಬಗ್ಗೆಯೇ ಹೆಚ್ಚು ಚರ್ಚೆಯಾಗಿ, ಬಿಜೆಪಿ ನಾಯಕರು ಎರಡೂ ಪಕ್ಷಗಳು ಒಂದಾಗಿಲ್ಲ, ನಾಯಕರು ಮೇಲ್ನೋಟಕ್ಕೆ ಒಂದಾಗಿದ್ದಾರೆ ಎಂಬ “ಅಸ್ತ್ರ’ ಬಳಸಿ ಪ್ರಚಾರ ಮಾಡಿದರು.

***

ಎಚ್‌.ಡಿ.ಕುಮಾರಸ್ವಾಮಿ
20 ಸಮಾವೇಶ: ತುಮಕೂರು, ಬೆಂಗಳೂರು, ಮಂಡ್ಯ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮೈಸೂರು, ಕೋಲಾರ, ಚಿತ್ರದುರ್ಗ

ಮಾತನಾಡಿದ ಪ್ರಮುಖ ವಿಚಾರ
* ಐಟಿ ದಾಳಿ ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ. ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನ ಮಾಡುತ್ತಿದೆ.
* ರೈತರ ಸಾಲ ಮನ್ನಾ 5400 ಕೋಟಿ ರೂ.ವರೆಗೂ ಆಗಿದ್ದರೂ ಮಾಹಿತಿ ಇಲ್ಲದೆ ಪ್ರಧಾನಿಯವರು ಸುಳ್ಳು ಹೇಳುತ್ತಿದ್ದಾರೆ.
* ಪ್ರಧಾನಿಯವರು ನೀಚ ರಾಜಕಾರಣ ಮಾಡುತ್ತಿದ್ದಾರೆ. ಐಟಿ ದಾಳಿ ಮೂಲಕ ನಮ್ಮ ಪಕ್ಷದ ಮುಖಂಡರನ್ನು ಹೆದರಿಸುವ ಕೆಲಸ ಆಗುತ್ತಿದೆ.

ಐಟಿ ದಾಳಿ ಮೂಲಕ ನಮ್ಮನ್ನು ಹೆದರಿಸಬಹುದು ಎಂದು ಕೇಂದ್ರ ಸರ್ಕಾರ ಅಂದುಕೊಂಡಿದ್ದರೆ ಅದು ಅವರ ಭ್ರಮೆ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತದೆ. ಬಿಜೆಪಿ ಏನೇ ತಂತ್ರ ಮಾಡಿದರೂ ಮೈತ್ರಿಕೂಟದ ಶಕ್ತಿ ಕುಗ್ಗಿಸಲು ಸಾಧ್ಯವಿಲ್ಲ.
-ಎಚ್‌.ಡಿ.ಕುಮಾರಸ್ವಾಮಿ, ಸಿಎಂ

ಚರ್ಚೆಗೀಡಾಗಿದ್ದು
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವವರು ಜೋಡೆತ್ತುಗಳಲ್ಲ. ರೈತರು ಬೆಳೆದಿರುವ ಬೆಳೆಯನ್ನು ರಾತ್ರಿ ವೇಳೆ ತಿಂದು ಹೋಗುವ ಎತ್ತುಗಳು ಎಂದು ಕುಮಾರಸ್ವಾಮಿ ಹೇಳಿದ್ದರು. ಇದು ರಾಜ್ಯಾದ್ಯಂತ ಪ್ರತಿ ಪ್ರಚಾರದಲ್ಲೂ ಪ್ರತಿಧ್ವನಿಸಿತು. ಜೋಡೆತ್ತುಗಳು ಯಾರು, ಕಳ್ಳ ಎತ್ತು ಗಳು ಯಾರು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಟ್ರೋಲ್‌ಗ‌ಳಾದವು.

Advertisement

Udayavani is now on Telegram. Click here to join our channel and stay updated with the latest news.

Next