Advertisement

Republic Day: ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಮಹಿಳೆಯರದ್ದೇ ಪಾರುಪಥ್ಯ

09:45 PM Jan 20, 2024 | Team Udayavani |

ನವದೆಹಲಿ: 76ನೇ ವರ್ಷದ ಗಣರಾಜ್ಯೋತ್ಸವ ಸಂಭ್ರಮಾಚರಣೆ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನ‌ಲ್ಲಿ ನಾರಿ(ಮಹಿಳಾ) ಶಕ್ತಿಯ ಅನಾವರಣ ಆಗಲಿದೆ.

Advertisement

ವಿಶೇಷವಾಗಿ ಭಾರತೀಯ ಭೂಸೇನೆ, ನೌಕಾ ಪಡೆ ಮತ್ತು ವಾಯು ಪಡೆಯ ಮಹಿಳಾ ಯೋಧರು ಒಳಗೊಂಡ ತುಕಡಿ ಪರೇಡ್‌ನ‌ಲ್ಲಿ ಪಾಲ್ಗೊಳಲಿದೆ. 148 ಮಹಿಳಾ ಸದಸ್ಯರಿರುವ ಈ ತುಕಡಿಯನ್ನು ಕ್ಯಾಪ್ಟನ್‌ ಸಂಧ್ಯಾ(26) ಅವರು ಮುನ್ನಡೆಸಲಿದ್ದಾರೆ.

“ಈ ತುಕಡಿಯಲ್ಲಿ ಭಾರತೀಯ ಸೇನೆಯ ಮೂರು ವಿಭಾಗದ ಅಗ್ನಿವೀರ ಮಹಿಳಾ ಸಿಬ್ಬಂದಿ ಮತ್ತು ಸೇನಾ ಸಿಬ್ಬಂದಿ ಇರಲಿದ್ದಾರೆ. ಪರೇಡ್‌ನ‌ಲ್ಲಿ ಭಾಗವಹಿಸುವ ಐತಿಹಾಸಿಕ ಕ್ಷಣಕ್ಕಾಗಿ ಡಿಸೆಂಬರ್‌ ಆರಂಭದಿಂದ ಎಲ್ಲಾ 148 ಸದಸ್ಯರು ದೆಹಲಿಯಲ್ಲಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದಕ್ಕೂ ಮುನ್ನ ಎರಡು ತಿಂಗಳು ಅವರವರ ಸ್ಥಳಗಳಲ್ಲಿ ಅಭ್ಯಾಸ ನಡೆಸಿದ್ದಾರೆ. ಮೂರು ವಿಭಾಗಗಳ ಡ್ರಿಲ್‌ಗ‌ಳು ಮತ್ತು ಕಾರ್ಯವಿಧಾನದಲ್ಲಿ ವ್ಯತ್ಯಾಸವಿದ್ದರೂ ಸಮಾನ ಗುರಿಯೊಂದಿಗೆ ಸುಸಂಘಟಿತ ತುಕಡಿಯಾಗಿ ಒಟ್ಟಿಗೆ ತರಬೇತಿ ಪಡೆದಿದ್ದೇವೆ” ಎಂದು ಕ್ಯಾಪ್ಟನ್‌ ಸಂಧ್ಯಾ ಹೇಳಿದ್ದಾರೆ.

ಇನ್ನೊಂದೆಡೆ, ಭಾರತೀಯ ಸಂಗೀತ ಸಾಧನಗಳೊಂದಿಗೆ 100 ಮಹಿಳಾ ಕಲಾವಿದರು ಸಂಗೀತ ನುಡಿಸುತ್ತಾ ಪರೇಡ್‌ನ‌ಲ್ಲಿ ಪಾಲ್ಗೊಳ್ಳಲಿದ್ದಾರೆ. “ವಿಕಸಿತ ಭಾರತ” ಮತ್ತು “ಭಾರತ್‌-ಲೋಕತಂತ್ರ ಕೀ ಮಾತೃಕಾ” ಥೀಮ್‌ಗಳಡಿ ಈ ಬಾರಿಯ ಪೆರೇಡ್‌ ನಡೆಯಲಿದೆ. ಇಸ್ರೋ ಮಹಿಳಾ ವಿಜ್ಞಾನಿಗಳು, ಮಹಿಳಾ ಯೋಗ ಶಿಕ್ಷಕರು, ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳು ಮತ್ತು ಪ್ಯಾರಾಲಿಂಪಿಕ್‌ ಸ್ಪರ್ಧೆಗಳಲ್ಲಿ ವಿಜೇತ ಮಹಿಳಾ ಕ್ರೀಡಾಪಟುಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಬಾರಿಗೆ ಪರೇಡ್‌ನಲ್ಲಿ ಕರ್ನಾಟಕದ ದಂಪತಿ ಸೇನಾ ದಂಪತಿ
ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಕರ್ನಾಟಕದ ದಂಪತಿ ಪಾಲ್ಗೊಳ್ಳುತ್ತಿದ್ದಾರೆ. ದಂಪತಿ ಒಟ್ಟಿಗೆ ಪರೇಡ್‌ನ‌ಲ್ಲಿ ಭಾಗಿಯಾಗುತ್ತಿರುವುದು ಇದೇ ಮೊದಲು. ಕ್ಯಾಪ್ಟನ್‌ ಸುಪ್ರೀತಾ ಮತ್ತು ಮೇಜರ್‌ ಜೆರ್ರಿ ಬ್ಲೇಜ್‌ ಭಾರತೀಯ ಸೇನೆಯ ಬೇರೆ ಬೇರೆ ತುಕಡಿಯನ್ನು ಪ್ರತಿನಿಧಿಸಿ ಪರೇಡ್‌ನ‌ಲ್ಲಿ ಪಾಲ್ಗೊಳ್ಳುತ್ತಿರುವ ದಂಪತಿ. ಕ್ಯಾಪ್ಟನ್‌ ಸುಪ್ರೀತಾ ಅವರು ಮೈಸೂರಿನವರಾಗಿದ್ದು, ಜೆಎಸ್‌ಎಸ್‌ ಕಾನೂನು ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಇವರ ಪತಿ ಮೇಜರ್‌ ಜೆರ್ರಿ ಬ್ಲೇಜ್‌ ಅವರು ತಮಿಳುನಾಡಿನ ವೆಲ್ಲಿಂಗ್ಟನ್‌ನವರಾಗಿದ್ದು, ಬೆಂಗಳೂರಿನ ಜೈನ್‌ ವಿವಿಯಿಂದ ಪದವಿ ಪಡೆದಿದ್ದಾರೆ. “ಇದು ಕಾಕ ತಾಳೀಯ. ನಾವೇನೂ ಯೋಜಿಸಿ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಒಟ್ಟಿಗೆ ಪಾಲ್ಗೊಳ್ಳುತ್ತಿಲ್ಲ. ನನ್ನ ಪತಿ ಮದ್ರಾಸ್‌ ರೆಜಿಮೆಂಟ್‌ ಅನ್ನು ಪ್ರತಿನಿಧಿಸುತ್ತಿದ್ದು, ನಾನು ಕಾರ್ಪ್ಸ್‌ ಆಫ್ ಮಿಲಿಟರಿ ಪೊಲೀಸ್‌ ತುಕಡಿಯ ಭಾಗವಾಗಿದ್ದೇನೆ. ಇಬ್ಬರು ಪ್ರತ್ಯೇಕವಾಗಿ ಪರೇಡ್‌ಗೆ ತರಬೇತಿ ಪಡೆದಿದ್ದೇವೆ. ಇಬ್ಬರೂ ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪರೇಡ್‌ ಕಾರಣಕ್ಕೆ ಕೆಲವು ತಿಂಗಳು ನವದೆಹಲಿಯಲ್ಲಿ ಒಟ್ಟಿಗೆ ವಾಸಿಸುವ ಸದವಕಾಶ ದೊರೆತಿದೆ” ಎಂದು ಕ್ಯಾಪ್ಟನ್‌ ಸುಪ್ರೀತಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next