Advertisement

ಮಳೆಗಾಲದಲ್ಲಿ ಮತ್ತೆ ಅನಾಹುತ ಭೀತಿ

01:00 AM Mar 21, 2019 | Team Udayavani |

ಸುಬ್ರಹ್ಮಣ್ಯ: ಕಳೆದ ಮಳೆ ಗಾಲದಲ್ಲಿ ಭಾರೀ ಪ್ರಕೃತಿ ವೈಪರೀತ್ಯ ಘಟಿಸಿದ ಬಿಸಿಲೆ ಘಾಟಿ ಈಗ ಮತ್ತೂಂದು ಆತಂಕ ಎದುರಿಸುತ್ತಿದೆ. ಭೂಕುಸಿತ, ಜಲಪ್ರಳಯದಿಂದ ವಿಶಾಲ ಪ್ರದೇಶದ ಅರಣ್ಯ ನಾಶವಾಗಿ ಮಣ್ಣು ಹಸಿರು ಹೊದಿಕೆ ಕಳೆದುಕೊಂಡಿದ್ದು, ಮುಂದಿನ ಮಳೆಗಾಲದಲ್ಲಿ ಭೂ ಸವೆತ ತೀವ್ರ ಸಮಸ್ಯೆ ಸೃಷ್ಟಿಸುವ ಸಾಧ್ಯತೆಯಿದೆ.

Advertisement

ಭೂಕುಸಿತ, ಜಲಪ್ರಳಯದಿಂದ ಘಟ್ಟದ ಹಲವೆಡೆ ಕಣಿವೆ, ತೋಡುಗಳು ಸೃಷ್ಟಿಯಾಗಿವೆ. ವೀಕ್ಷಣಾ ಗೋಪುರದ ಬಳಿ, ಸಕಲೇಶಪುರ ರಾ.ಹೆ. ಉದ್ದಕ್ಕೂ ದ.ಕ. ಮತ್ತು ಸಕಲೇಶಪುರ ವಿಭಾಗಕ್ಕೆ ಸೇರಿದ ಅನೇಕ ಕಡೆ ರಸ್ತೆ, ಸೇತುವೆಗಳು ಮಾಯವಾಗಿ ಸಂಪರ್ಕ ಕಡಿತವಾಗಿತ್ತು. ನೂರಾರು ಎಕರೆ ಅರಣ್ಯ ನಾಶವಾಗಿತ್ತು.
ಈ ಪ್ರಾಕೃತಿಕ ವಿಕೋಪದ ಭೀಕರತೆಗೆ ಅಲ್ಲಿನ ಅವಶೇಷಗಳು ಸಾಕ್ಷಿ ಹೇಳುತ್ತವೆ.

ಒರತೆ ಮತ್ತು ನೆರೆ ಬಿಟ್ಟರೆ ಚಿತ್ರಣ ಬದಲಾಗಿಲ್ಲ.

ಸವಕಳಿ ಖಚಿತ
ಬಿಸಿಲೆಯಲ್ಲಿ ವಿಶಾಲ ಭೂಭಾಗದ ಹಸಿರು ಹೊದಿಕೆ ನಾಶವಾಗಿದೆ. ಇದರಿಂದ ಮುಂದಿನ ಮಳೆಗಾಲದಲ್ಲಿ ಮಣ್ಣು ಸವೆತ ಹೆಚ್ಚುವ ಸಾಧ್ಯತೆಗಳಿವೆ. ಸವಕಳಿ ತಡೆಯದಿದ್ದರೆ ಸಸ್ಯ ಸಂಕುಲ, ಅರಣ್ಯ ಉಳಿಸಿಕೊಳ್ಳಲಾಗದು. ಹಾಗಾಗದಂತೆ ಕ್ರಮಗಳ ಅಗತ್ಯವಿದೆ.

ಮಣ್ಣು ಸವಕಳಿ ತಡೆಯುವುದಕ್ಕೆ ಸಸ್ಯಸಂಕುಲ, ಅರಣ್ಯ ಅಗತ್ಯ. ಅವುಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳದಿದ್ದಲ್ಲಿ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ. ಆದರೆ ಘಾಟಿ ಪ್ರದೇಶ ದಲ್ಲಿ ಕೃತಕ ತೋಡುಗಳಾಗಿರುವುದು, ಸಸ್ಯಸಂಕುಲ ನಾಶ ಮಣ್ಣು ಸವಕಳಿಗೆ ಅನುಕೂಲ ಮಾಡಿಕೊಟ್ಟಿದೆ. ಸವಕಳಿ ತಡೆಗೆ ಕ್ರಮ ಕೈಗೊಳ್ಳದೆ ಇದ್ದರೆ ಘಟ್ಟದ ಮಣ್ಣು ಮಳೆನೀರಿನೊಂದಿಗೆ ಹರಿದು ನದಿಗಳಲ್ಲಿ ಹೂಳು ತುಂಬಬಹುದು. 

Advertisement

ಇಳಿಜಾರಿನಲ್ಲಿ ನೀರು ಹರಿಯುವ ವೇಗ ಹೆಚ್ಚಿದ್ದಷ್ಟು ಸವೆತ ಅಧಿಕ. ಬಿಸಿಲೆಯಲ್ಲಿ ಉಂಟಾಗಿರುವ ಕೃತಕ ಕಣಿವೆ, ತೋಡುಗಳಲ್ಲಿ ಬೃಹತ್‌ ಬಂಡೆಗಲ್ಲು, ಮರದ ದಿಮ್ಮಿಗಳು ತುಂಬಿದ್ದು, ಸ್ಥಳಾಂತರ ಕಷ್ಟ. ಮಣ್ಣು ಸವಕಳಿ ತಡೆಗೆ ಕ್ರಮ ಅನುಸರಿಸುವುದು ಅಗತ್ಯ.

ಸಂಪರ್ಕ ಕಾಮಗಾರಿ ನಡೆಯುತ್ತಿದೆ
ಸಕಲೇಶಪುರ-ಸುಬ್ರಹ್ಮಣ್ಯ ಬಿಸಿಲೆ ಘಾಟಿ ರಸ್ತೆಯಲ್ಲಿ ಜಲಪ್ರಳಯದ ವೇಳೆ ಹಾನಿಗೀಡಾದ ಸೇತುವೆಗಳ ಪುನರ್‌ನಿರ್ಮಾಣ ಕಾರ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿದೆ. 

ಏನು ಮಾಡಬಹುದು?
ಮಳೆಗಾಲ ಆರಂಭಕ್ಕೆ ಒಂದೆರಡು ತಿಂಗಳು ಮಾತ್ರವೇ ಇವೆ. ಹಸಿರು ಹೊದಿಕೆ ನಾಶವಾಗಿರುವ ಘಾಟಿ ಪ್ರದೇಶದಲ್ಲೆಲ್ಲ ಬೀಜದುಂಡೆಗಳನ್ನು ವ್ಯಾಪಕವಾಗಿ ಚೆಲ್ಲುವ ಮೂಲಕ ಮೊದಲ ಮಳೆಗೆ ಅವು ಮೊಳಕೆಯೊಡೆ
ಯುವಂತೆ ಮಾಡಬಹುದು. ವಿವಿಧ ಜಾತಿಯ ಹುಲ್ಲಿನ ಬೀಜಗಳನ್ನು ಬಿತ್ತಿದರೆ ಉಪಯೋಗವಾಗಬಹುದು. ಇವು ಒಂದೇ ವರ್ಷದಲ್ಲಿ ಪೂರ್ಣ ಫ‌ಲ ಕೊಡುವ ಕ್ರಮಗಳಲ್ಲವಾದರೂ ಹಸಿರು ಹೊದಿಕೆಯನ್ನು ಮರುಸ್ಥಾಪಿಸುವ ಪ್ರಯತ್ನ ಎಂಬುದಂತೂ ನಿಜ.

ಸಕಲೇಶಪುರ-ದಕ್ಷಿಣ ಕನ್ನಡ ಇವೆರಡೂ ಭಾಗಗಳಲ್ಲಿ ಜಲಪ್ರಳಯ ದಿಂದ ಅಪಾರ ಅರಣ್ಯ ನಾಶವಾಗಿದೆ. ಬೃಹತ್‌ ಗಾತ್ರದ ಬಂಡೆಗಳು, ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಸಂಗ್ರಹಗೊಂಡಿದ್ದು, ಅವುಗಳ ತೆರವು ಸಾಧ್ಯವಾಗಿಲ್ಲ. ಮಣ್ಣು ಸವೆತ ತಡೆಯಲು ಕ್ರಮಗಳನ್ನು ಅನುಸರಿಸಲು ಸಾಧ್ಯವಿದೆ. ಈ ಕುರಿತು ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಮುಂದಿನ ಮಳೆಗಾಲದಲ್ಲಿ ಮಳೆ ಅಗಾಧವಾಗಿ ಸುರಿದರೆ ಮತ್ತಷ್ಟು ಅರಣ್ಯ ನಾಶವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
– ತ್ಯಾಗರಾಜ್‌, ರೇಂಜ್‌ ಆಫೀಸರ್‌, ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ವಿಭಾಗ 

– ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next