ಜಿನೇವಾ: ಸದ್ಯ ಜಗತ್ತು ಕೋವಿಡ್-19 ಎರಡನೇ ಹಂತದ ಸೋಂಕು ದಾಳಿಯನ್ನು ಎದುರಿಸುತ್ತಿದ್ದು, ಪ್ರಾರಂಭಿಕ ಹಂತಕ್ಕಿಂತ ವೇಗವಾಗಿ ಸೋಂಕು ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದ ಒಟ್ಟಾರೆ ಸೋಂಕು ಪ್ರಕರಣಗಳ ಶೇ.60ರಷ್ಟು ಸೋಂಕು ಪ್ರಕರಣಗಳು ಕಳೆದ ಒಂದೇ ತಿಂಗಳು ವರದಿಯಾಗಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದು, ಪ್ರಪಂಚಾದ್ಯಂತ 1.3 ಕೋಟಿ ಸೋಂಕು ಪ್ರಕರಣಗಳು ದಾಖಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ. ಕಳೆದ ಒಂದು ವಾರದಲ್ಲಿ 1.60 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ.
ದೇಶಗಳು ಲಾಕ್‌ಡೌನ್ ನಿಬಂಧನೆಗಳನ್ನು ತೆರವುಗೊಳಿಸಲು ಪ್ರಾರಂಭಿಸಿದಾಗಲೇ ಸೋಂಕು ಹೆಚ್ಚಳವನ್ನು ನಿರೀಕ್ಷಿಸಲಾಗಿತ್ತು. ಆದರೆ ಪುನ: ನಿಷೇಧ ಹೇರುವುದು ಇದಕ್ಕೆ ಪರಿಹಾರವಲ್ಲ. ಅಗತ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರೆ ಪರಿಸ್ಥಿತಿಯನ್ನು ಸೋಂಕು ಪೀಡಿತ ರಾಷ್ಟ್ರಗಳು ನಿಯಂತ್ರಣ ಮಾಡಬಹುದು ಎಂದು ಟೆಡ್ರೊಸ್ ಅಭಿಪ್ರಾಯಪಟ್ಟಿದ್ದಾರೆ.
ತ್ವರಿತವಾಗಿ ಸೋಂಕು ಮೂಲವನ್ನು ಪತ್ತೆ ಹಚ್ಚಿ ಪರೀಕ್ಷೆ ಒಳಪಡಿಸುವ ಮೂಲಕ ಸೋಂಕು ಪ್ರಸರಣಕ್ಕೆ ಕಡಿವಾಣ ಹಾಕಬಹುದಾಗಿದ್ದು, ಐಸೋಲೇಶನ್, ಕ್ವಾರಂಟೈನ್‌ಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಬೇಕಿದೆ. ಜತೆಗೆ ಸಮುದಾಯ ಮಟ್ಟಗಳಲ್ಲಿ ಸೋಂಕು ಹರಡುವಿಕೆ ಸಂಬಂಧಪಟ್ಟಂತೆ ಮತ್ತಷ್ಟು ಜಾಗೃತಿವಹಿಸುವ ಅನಿವಾರ್ಯವಿದೆ. ಆದರೆ ಕೆಲವೊಂದು ದೇಶಗಳು ತಮ್ಮದೇ ಆದ ಕ್ರಮಗಳನ್ನು ಪಾಲಿಸುತ್ತಿದ್ದು, ಆದ್ದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಎಲ್ಲ ದೇಶಗಳ ಸರಕಾರವೂ ಕಾರ್ಯನಿರ್ವಹಿಸಬೇಕಿದೆ ಎಂದು ಟೆಡ್ರೊಸ್ ಅವರು ಹೇಳಿದ್ದಾರೆ.