Advertisement

ಸಾಲ ಮನ್ನಾ ಹೆಸರಲ್ಲಿ ರೈತರಿಗೆ ಕಾಂಗ್ರೆಸ್‌ ಟೋಪಿ

05:14 PM Mar 13, 2018 | Team Udayavani |

ಲಿಂಗಸುಗೂರು: ರಾಜ್ಯ ಸರ್ಕಾರ ಜೂನ್‌ ತಿಂಗಳಿನಲ್ಲಿ ಘೋಷಣೆ ಮಾಡಿದ ಸಾಲ ಮನ್ನಾ ಹಣ ಇನ್ನೂ ರೈತರ ಖಾತೆಗೆ ಜಮೆ ಆಗಿಲ್ಲ. ಬರುವ ಜೂನ್‌ ತಿಂಗಳಲ್ಲಿ ಖಾತೆಗೆ ಜಮಾ ಮಾಡುತ್ತೇವೆ ಅಂತ ಸಿಎಂ ಸಿದ್ದರಾಮಯ್ಯನವರು
ಹೇಳುತ್ತಿದ್ದಾರೆ. ಜೂನ್‌ವರೆಗೂ ಅವರ ಸರ್ಕಾರ ಇರುತ್ತಾ? ಇದು ರೈತರಿಗೆ ಟೋಪಿ ಹಾಕುವ ಕೆಲಸ ಎಂದು
ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು. 

Advertisement

ಪಟ್ಟಣದಲ್ಲಿ ಸೋಮವಾರ ನಡೆದ ವಿಕಾಸ ಪರ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 3,700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ ಗಳಲ್ಲಿನ ರಾಜ್ಯದ ರೈತರ 51 ಸಾವಿರ ಕೋಟಿ ರೂ. ಹಾಗೂ ಮಹಿಳಾ ಸ್ವಸಹಾಯ ಸಂಘಗಳು ಪಡೆದಿರುವ 4 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡಲಾಗುವುದು ಎಂದರು.

ರಾಜ್ಯಕ್ಕೆ ವಿದ್ಯುತ್‌ ನೀಡುವ ರಾಯಚೂರು ಜಿಲ್ಲೆಯಲ್ಲೇ ವಿದ್ಯುತ್‌ ಗಾಗಿ ಪರದಾಡುವ ಸ್ಥಿತಿ ಇದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ 24 ಗಂಟೆ ವಿದ್ಯುತ್‌ ನೀಡಲಾಗುತ್ತದೆ. ಮಾತೃಪೂರ್ಣ ಯೋಜನೆ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ನನ್ನದೇ ಆದ ಹೊಸ  ಯೋಜನೆಯನ್ನು ತರಲು ತಿರ್ಮಾನಿಸಿದ್ದೇನೆ. ಬಾಣಂತಿಯರಿಗೆ ಪ್ರತಿ ತಿಂಗಳು 6 ಸಾವಿರದಂತೆ 6 ತಿಂಗಳಿಗೆ 36 ಸಾವಿರ ರೂ. ಆರೋಗ್ಯ ಭತ್ಯೆ ನೀಡುವ ಉದ್ದೇಶವಿದೆ ಎಂದರು.

ಸರ್ಕಾರಿ ಅರಣ್ಯ ಭೂಮಿಯಲ್ಲಿ ಸಸಿ ನೆಡುತ್ತೇವೆ ಎಂದು ಸಾವಿರಾರು ಕೋಟಿ ರೂ.ಗಳ ದರೋಡೆ ಮಾಡಲಾಗುತ್ತಿದೆ.
ಹೀಗಾಗಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿಸಿ ಅರಣ್ಯ ರಕ್ಷಿಸುವ
ಕೆಲಸ ಮಾಡಲಾಗುತ್ತದೆ. ಹಿರಿಯ ನಾಗರಿಕರಿಗೆ ಮಾಸಿಕ 5 ಸಾವಿರ ರೂ. ಗಳ ಮಸಾಶನ ನೀಡಲಾಗುವುದು
ಎಂದರು. 

ಧಮ್ಕಿ ನಡೆಯಲ್ಲ: ಈ ಹಿಂದಿನ ಶಾಸಕರು ಹಾಗೂ ಅವರ ಪಿಎ ನಮ್ಮ ಪಕ್ಷದ ಕಾರ್ಯಕರ್ತರಿಗೆ ತಮ್ಮ ಪಕ್ಷಕ್ಕೆ
ಸೇರುವಂತೆ ಧಮ್ಕಿ ಹಾಕುತ್ತಾರಂತೆ. ಆ ಧಮ್ಕಿ ಹಾಕುವ ಕೆಲಸ ಇನ್ನು ಮುಂದೆ ನಡೆಯಲ್ಲ. ಒಂದು ವೇಳೆ ಧಮ್ಕಿ
ಹಾಕಿದರೆ ನನಗೆ ಕರೆ ಮಾಡಿ ಎಂದು ಕುಮಾರಸ್ವಾಮಿ ಹೇಳಿದರು. 

Advertisement

ಲಿಂಗಸುಗೂರು ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದಿಂದ ಶಾಸಕರಾಗಿ ಅಧಿಕಾರ ಅನುಭವಿಸಿ ಮತ್ತು ಕಷ್ಟ ಕಾಲದಲ್ಲಿ ನೆರವು ಪಡೆದು ಈಗ ಪಕ್ಷ ಬಿಟ್ಟು ಬಿಜೆಪಿಗೆ ಸೇರಿದ್ದಾರೆ. ಗುತ್ತಿಗೆದಾರಿಕೆಯಿಂದ ಕಳಪೆ ಕಾಮಗಾರಿ ಮಾಡಿ ಸಾವಿರಾರು ಕೋಟಿ ರೂ.ಗಳನ್ನು ಸಂಪಾದಿಸಿದ್ದಾರೆ.

ಈಗ ಹಣ ಚೆಲ್ಲಿ ಶಾಸಕರಾಗುವ ಭ್ರಮೆಯಲ್ಲಿದ್ದಾರೆ. ಅವರಿಗೆ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಬೇಕು. ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತನ್ನಿ, ಜೆಡಿಎಸ್‌ ಅಭ್ಯರ್ಥಿ ಸಿದ್ದು ಬಂಡಿ ಅವರಿಗೆ ಈ ಬಾರಿ ಆಶೀರ್ವಾದ ಮಾಡಿ ಎಂದು ವಿನಂತಿಸಿದರು.

ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ ಮಾತನಾಡಿ, ಬಿಜೆಪಿ ನಂಬಿ ನಾನು ಮನೆ ಹಾಳು ಮಾಡಿಕೊಂಡೆ. ಅನ್ಯಾಯಕ್ಕೊಳಗಾಗಿದ್ದ ನನ್ನನ್ನು ಜೆಡಿಎಸ್‌ ಕರೆದು ಟಿಕೆಟ್‌ ನೀಡಿದ್ದು ಕುಮಾರಣ್ಣನವರ ದೊಡ್ಡತನವಾಗಿದೆ.
ಕ್ಷೇತ್ರದ ಕೆಲಸ ಮಾಡಲು ಜನರ ಆಶೀರ್ವಾದ ಕೋರಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಮಾಜಿ ಶಾಸಕ ವೆಂಕಟರಾವ್‌  ನಾಡಗೌಡ, ಮಾಜಿ ಎಂಎಲ್ಸಿ ಎಚ್‌.
ಆರ್‌. ಶ್ರೀನಾಥ, ಎಚ್‌.ಸಿ.ನೀರಾವರಿ, ಪ್ರಕಾಶರೆಡ್ಡಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ವಿರೂಪಾಕ್ಷ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next