Advertisement

ದಟ್ಟ ಕಾನನದ ಮಧ್ಯದಲ್ಲೊಂದು ಮಳೆ ದೇವರು

10:14 AM Jun 14, 2019 | Suhan S |

ಮೈಸೂರು: ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನ ಮಾವುಕಲ್ಲೇಶ್ವರ ದೇಗಲವೊಂದು ದಟ್ಟ ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿದ್ದು, ಸುತ್ತಲಿನ ಹತ್ತೇಳು ಗ್ರಾಮಗಳ ರೈತರು ಮಳೆಗಾಗಿ ಈ ದೇಗುಲಕ್ಕೆ ಭೇಟಿ ಒಂದು ರಾತ್ರಿ ತಂಗುವುದು ವಾಡಿಕೆ.

Advertisement

ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಗಿಲವಾಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಸುತ್ತಲು ಏಳು ಬೆಟ್ಟಗಳನ್ನು ಹೊಂದಿರುವ ಮಾವುಕಲ್ಲೇಶ್ವರ ಬೆಟ್ಟದಲ್ಲಿ ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇಗುಲ ಇದೆ. ಇಲ್ಲಿ ವರ್ಷಕ್ಕೆ ಒಮ್ಮೆ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯಲಿದೆ. ದೇಗುಲದಲ್ಲಿರುವ ಲಿಂಗ ರೂಪದ ಮಾವುಕಲ್ಲೇಶ್ವರ, ತಾಲೂಕು ಸೇರಿದಂತೆ ಕೊಡಗಿನ ಗಡಿಭಾಗದ ಗ್ರಾಮಗಳ ರೈತರಿಗೆ ಮಳೆ ದೇವರಾಗಿದ್ದಾನೆ.

ವಿಶೇಷ ಪೂಜೆ: ಮುಂಗಾರು ಆರಂಭವಾಗಿ ನಂತರ ಮಳೆ ಬಾರದಿದ್ದರೆ ಪಿರಿಯಾಪಟ್ಟಣ, ಕೋಗಿಲವಾಡಿ, ಚೌತಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ರೈತರು ಹಾಗೂ ಕೊಡಗಿನ ಗಡಿ ಭಾಗದ ಗ್ರಾಮಗಳಾದ ಸಿದ್ದಾಪುರ, ತಿತಿಮತಿ, ಗೋಣಿಕೊಪ್ಪ, ಕುಶಾಲನಗರ ಸೇರಿದಂತೆ ನಾನಾ ಹಳ್ಳಿಗಳ ರೈತರು ಈ ದೇಗುಲಕ್ಕೆ ಭೇಟಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ ಒಂದು ರಾತ್ರಿ ಅಲ್ಲಿಯೇ ತಂಗುವ ಮೂಲಕ ತಳಿಗೆ ಮಾಡುತ್ತಾರೆ. ನಂತರ ಬೆಳಗ್ಗೆ ಎದ್ದು, ದೇವರಿಗೆ ಕೋಳಿ ಬಲಿ ನೀಡಿ ನಂತರ ಪರ್ವ ಮಾಡಿ ವಾಪಸ್ಸಾಗುವುದು ವಾಡಿಕೆ.

ಒಂದೊಂದು ಗ್ರಾಮದವರು ಮನೆಗೆ ಒಬ್ಬರಂತೆ ವಾರದಲ್ಲಿ ಒಮ್ಮೆ ಈ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಹರಕೆ ಅರ್ಪಿಸಿ ಮಳೆಗಾಗಿ ಪ್ರಾರ್ಥಿಸುವುದು ವಿಶೇಷ.

ಕಾಲ್ನಡಿಗೆ ಪಯಣ:ಮಾವುಕಲ್ಲೇಶ್ವರ ದೇಗುಲವು ದಟ್ಟ ಕಾಡು ಹಾಗೂ ಬೆಟ್ಟಗಳ ಸಾಲಿನಲ್ಲಿ ಇರುವುದರಿಂದ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ಜಾನುವಾರು ಮತ್ತು ಪ್ರಾಣಿಗಳು ನಡೆದಾಡಿರುವ ದಾರಿಯನ್ನೇ ಅನುಸರಿಸಿ ದೇಗುಲಕ್ಕೆ ತೆರಳಬೇಕು. ಬೆಟ್ಟವು ಕಾಡಂಚಿನಿಂದ ಸುಮಾರು 14 ಕಿ.ಮೀ. ದೂರವಿದ್ದು, ಕಾಡುಪ್ರಾಣಿಗಳ ದಾಳಿ ಮಾಡುವ ಸಂಭವ ಇರುವ ಕಾರಣ, ಜನರು ತಂಡೋಪ ತಂಡವಾಗಿ ಈ ದೇಗುಲಕ್ಕೆ ತೆರಳುತ್ತಾರೆ.

Advertisement

ತೇತ್ರಾಯುಗಕ್ಕೂ ನಂಟಿದೆ: ಈ ದೇಗಲದಲ್ಲಿ ರಾಮ ವನವಾಸದ ವೇಳೆಯಲ್ಲಿ ಈ ಬೆಟ್ಟದಲ್ಲಿರುವ ದೇಗುಲದಲ್ಲಿ ತಂಗಿದ್ದ ಎಂಬ ಪ್ರತೀತಿ ಇದ್ದು, ಸೀತೆ ಸ್ನಾನ ಮಾಡಲು ಬಳಕೆ ಮಾಡುತ್ತಿದ್ದ ಕೊಳವನ್ನು ಇಂದಿಗೂ ಸೀತಾ ಕೊಳ ಹಾಗೂ ಆಕೆ ವಿಹರಿಸುತ್ತಿದ್ದ ವನವನ್ನು ಸೀತಾವನ ಎಂದು ಕರೆಯಲಾಗುತ್ತಿದೆ. ವಿಶೇಷ ಎಂದರೆ ಈ ಸೀತಾವನ ವರ್ಷದ ಎಲ್ಲಾ ಕಾಲದಲ್ಲೂ ಹಸಿರಿನಿಂದ ಕೂಡಿರುತ್ತದೆ. ಜೊತೆಗೆ ಸಾವಿರಾರು ಬಗೆಯ ಔಷಧ ಗಿಡಗಳನ್ನು ಹೊಂದಿದೆ.

ಸೀತಾವನದ ವಿಶೇಷ:

ರಾಜ್ಯದ ಅರೆನಿತ್ಯ ಹರಿದ್ವರ್ಣವನಗಳಲ್ಲಿ ಒಂದಾದ ಸೀತಾವನ ಎಲೆ ಉದುರುವ ಕಾಡುಗಳ ನಡುವೆ 30 ಹೆಕ್ಟೇರ್‌ನಷ್ಟು ವ್ಯಾಪ್ತಿಯಲ್ಲಿ ಹಬ್ಬಿದೆ. ಇಲ್ಲಿ 75ಕ್ಕೂ ಹೆಚ್ಚು ನಾನಾ ಪ್ರಭೇದದ ಮರಗಳು ಕಾಣಸಿಗುವುದು ವಿಶೇಷ. ಜೊತೆಗೆ ರಾಜ್ಯದಲ್ಲಿ ಒಟ್ಟು 7 ಔಷಧ ಸಂರಕ್ಷಣಾ ಪ್ರದೇಶಗಳಿದ್ದು, ಇದರಲ್ಲಿ ಸೀತಾವನವು ಒಂದಾಗಿದೆ. ಇತ್ತೀಚೆಗೆ ಇಲ್ಲಿ ಔಷಧ ಗಿಡಗಳ ಗಣತಿ ಕಾರ್ಯ ನಡೆದಿದ್ದು, ಮೈಸೂರು ಜಿಲ್ಲೆಯಲ್ಲಿಯೆ ವಿಶೇಷ ಪ್ರದೇಶವೆಂದು ಗುರುತಿಸಲಾಗಿದೆ. ಮಳೆ ಬಾರದಿದ್ದರೆ ಮಾವುಕಲ್ಲೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬುದು ಇಂದಿಗೂ ಸುತ್ತಮುತ್ತಲ ಜನರ ನಂಬಿಕೆ.
ಚಾರಣಕ್ಕೆ ಹೇಳಿ ಮಾಡಿಸಿದ ತಾಣ:

ಪಿರಿಯಾಪಟ್ಟಣದಿಂದ 12 ಕಿ.ಮೀ. ದೂರದಲ್ಲಿರುವ ಕೋಗಿಲಾವಾಡಿ ಗ್ರಾಮಕ್ಕೆ ತೆರಳಿ, ಅಲ್ಲಿಂದ ಕಾಲ್ನಡಿಗೆಯಲ್ಲಿ 14 ಕಿ.ಮೀ.ನಷ್ಟು ದೂರ ದುರ್ಗಮ ಕಾಡಿನಲ್ಲಿ ಬೆಟ್ಟ, ಗುಡ್ಡಗಳನ್ನೇರಿ ಸಾಗಬೇಕಿದೆ. ಏಳು ಬೆಟ್ಟಗಳ ಸಾಲಿನಿಂದ ಕೂಡಿದ ಶ್ರೇಣಿಯಲ್ಲಿ ಮಾವು ಕಲ್ಲೇಶ್ವರ ಬೆಟ್ಟವಿದ್ದು, ಅತ್ಯಂತ ಎತ್ತರ ಪ್ರದೇಶವಾಗಿದೆ. ಕಣ್ಣು ಹಾಯಿಸಿದಷ್ಟು ಹಸಿರಿನಿಂದ ಕೂಡಿದ ಕಾಡು, ಪರ್ವತಗಳ ಶ್ರೇಣಿ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.
● ಸತೀಶ್‌ ದೇಪುರ
Advertisement

Udayavani is now on Telegram. Click here to join our channel and stay updated with the latest news.

Next