Advertisement
ಮಹಾತ್ಮಾ ಗಾಂಧೀಜಿ ಬಂದು ಭಾಷಣ ಮಾಡಿದ್ದ ಸ್ಥಳದಲ್ಲಿ ಈಗ ಗಾಂಧಿ ಪ್ರತಿಮೆ, ಗಾಂಧಿ ಕಟ್ಟೆಯೂ ಇಲ್ಲ. ಖಾಲಿಯಾಗಿರುವ ಸ್ಮಾರಕ ಸ್ಥಳದಲ್ಲಿ ಬುಧವಾರ ಗಾಂಧೀಜಿ ಅವರ 150ನೇ ಜನ್ಮದಿನದಂದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ನಡೆಯಲಿದೆ.
Related Articles
ಗಾಂಧಿಕಟ್ಟೆ ಅಭಿವೃದ್ಧಿ ಸಮಿತಿ ಅ. 2ರಂದು ಗಾಂಧಿ ಕಟ್ಟೆ ಸ್ಥಳದಲ್ಲಿ ಸಾಂಕೇತಿಕವಾಗಿ ಗಾಂಧಿ ಜಯಂತಿ ಆಚರಿಸಲು ನಿರ್ಧರಿಸಿದೆ. ರಾಷ್ಟ್ರಪಿತನ ಭಾವಚಿತ್ರ ಇಟ್ಟು ಪುಷ್ಪಾರ್ಚನೆ ಮಾಡಲಿದ್ದೇವೆ. ಪ್ರತೀ ವರ್ಷ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡುತ್ತಿದ್ದೆವು. ಈ ಬಾರಿ ಅದಾಗುತ್ತಿಲ್ಲ ಎಂಬುದು ಬೇಸರದ ಸಂಗತಿ ಎಂದು ಸಮಿತಿಯ ಮುಖಂಡ ಕೃಷ್ಣ ಪ್ರಸಾದ್ ಆಳ್ವ ಪ್ರತಿಕ್ರಿಯಿಸಿದ್ದಾರೆ.
Advertisement
ಗಾಂಧಿ ಭೇಟಿ ನೆನಪುಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ 1934ರಲ್ಲಿ ಪುತ್ತೂರಿಗೆ ಆಗಮಿಸಿದ್ದರು. ಇಲ್ಲಿನ ಕೇಂದ್ರ ಸ್ಥಾನದ ಬಸ್ಸು ನಿಲ್ದಾಣದ ಬಳಿಯಲ್ಲಿದ್ದ ಅಶ್ವತ್ಥ ಮರದ ಅಡಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಆ ಸಂದರ್ಭದಲ್ಲಿ ಅವರನ್ನು ಹಿರಿಯರಾಗಿದ್ದ ಕಾರ್ನಾಡ್ ಸದಾಶಿವ ರಾಯ, ಡಾ| ಶಿವರಾಮ ಕಾರಂತ, ಸುಂದರ್ ರಾವ್ ಸ್ವಾಗತಿಸಿ, ಗೌರವಿಸಿದ್ದರು. ಪುತ್ತೂರಿಗೆ ಆಗಮಿಸಿದ್ದಾಗ ಮೊದಲಿಗೆ ರಾಗಿದಕುಮೇರು ಕಾಲನಿಗೆ ತೆರಳಿದ್ದ ಗಾಂಧೀಜಿ, ಕೋರ್ಟ್ ರಸ್ತೆಯಲ್ಲಿರುವ ಸುಂದರ್ ರಾವ್ ಅವರ ಮನೆಯಲ್ಲಿ ಸ್ಪಲ್ಪ ಹೊತ್ತು ವಿಶ್ರಾಂತಿ ಪಡೆದಿದ್ದರು. ಆ ಬಳಿಕ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಅಶ್ವತ್ಥ ಮರದ ಅಡಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಮಡಿಕೇರಿಯಿಂದ ಸುಳ್ಯ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಪುತ್ತೂರಿಗೆ ಆಗಮಿಸಿದ ಮಹಾತ್ಮಾ ಗಾಂಧೀಜಿ ಅವರು ಇಲ್ಲಿಂದ ಮಂಗಳೂರು ಮೂಲಕ ತೆರಳಿದ್ದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಗಾಂಧೀಜಿ ನಗರದ ಹೊರವಲಯದಲ್ಲಿರುವ ರಾಗಿದಕುಮೇರು ದಲಿತ ಕಾಲನಿ ಹಾಗೂ ಬೊಟ್ಟತ್ತಾರು (ಬ್ರಹ್ಮನಗರ) ಕಾಲನಿಗೆ ಭೇಟಿ ನೀಡಿ ಅಲ್ಲಿನ ದಲಿತರ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದರು. ಈ ಸಂದರ್ಭ ರಾಗಿದಕುಮೇರಿ ಕಾಲನಿಯ ಜನರು ಕುಡಿಯಲು ತೋಡಿನ ನೀರನ್ನು ಬಳಸುತ್ತಿರುವುದನ್ನು ಗಮನಿಸಿದ ಗಾಂಧೀಜಿ ಅಲ್ಲೊಂದು ತೆರೆದ ಬಾವಿ ತೋಡಿಸುವಂತೆ ಸೂಚನೆ ನೀಡಿದ್ದರು. ಕಾಲನಿಯ ಜನರಿಗೆ ಕುಡಿಯುವ ನೀರಿಗಾಗಿ ತೆರೆದ ಬಾವಿ ನಿರ್ಮಿಸಲಾಗಿತ್ತು. ಆ ಬಾವಿ ಈಗಲೂ ಇದ್ದರೂ ಬಳಕೆಯಾಗುತ್ತಿಲ್ಲ. ಗಾಂಧೀಜಿ ನೆನಪಿನ ಬಾವಿಯನ್ನು ಅಭಿವೃದ್ಧಿಪಡಿಸಿ ಮತ್ತೆ ಬಳಕೆ ಮಾಡಬೇಕೆನ್ನುವ ಆಗ್ರಹ ವ್ಯಕ್ತವಾದರೂ ಇದುವರೆಗೆ ಸಾಧ್ಯವಾಗಿಲ್ಲ. ಪುತ್ತೂರು ಸಹಾಯಕ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಕ್ರಮ ಕೈಗೊಂಡಿಲ್ಲ. ನಿರೀಕ್ಷೆ ಈಡೇರಲಿಲ್ಲ
ಗಾಂಧಿ ಕಟ್ಟೆಯ ತಡೆಯಾಜ್ಞೆ ತೆರವಿಗೆ ನಗರಸಭೆ ಹೈಕೋರ್ಟ್‌ನಲ್ಲಿ ಪ್ರಯತ್ನ ನಡೆಸುತ್ತಿದೆ. ಸಮಯ ಇನ್ನೂ ಒಂದು ತಿಂಗಳು ಮುಂದಕ್ಕೆ ಹೋಗಿದೆ. ಗಾಂಧಿ ಜಯಂತಿಗೆ ಮುನ್ನ ತೊಡಕು ನಿವಾರಣೆಯಾದೀತು ಎಂಬ ನಿರೀಕ್ಷೆ ಇತ್ತು. ಅದು ಈಡೇರಿಲ್ಲ.
– ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ, ನಗರಸಭೆ ಶೀಘ್ರ ಕಟ್ಟೆ ನಿರ್ಮಾಣವಾಗಲಿ
ಮಹಾತ್ಮಾ ಗಾಂಧೀಜಿಯವರ ಕುರಿತು ಆಡಳಿತ ವ್ಯವಸ್ಥೆ ನಿರ್ಲಕ್ಷ್ಯದ ಧೋರಣೆ ತೋರದು ಎನ್ನುವ ನಂಬಿಕೆ, ಭರವಸೆ ಇದೆ. ಗಾಂಧಿ ಕಟ್ಟೆ ಶೀಘ್ರದಲ್ಲಿ ಆಗಬೇಕು ಎಂದು ಆಗ್ರಹಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟಗಳೂ ಮುಂದುವರಿಯಲಿವೆ. ಈ ಬಾರಿ ಅದೇ ಸ್ಥಳದಲ್ಲಿ ಸಾಂಕೇತಿಕವಾಗಿ ಗಾಂಧಿ ಜಯಂತಿ ಆಚರಿಸುತ್ತೇವೆ. ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಸಮಿತಿಯಿಂದ ಈ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
– ಕೃಷ್ಣಪ್ರಸಾದ್ ಆಳ್ವ, ಸಂಚಾಲಕ, ಗಾಂಧಿ ಕಟ್ಟೆ ಅಭಿವೃದ್ಧಿ ಸಮಿತಿ ರಾಜೇಶ್ ಪಟ್ಟೆ