Advertisement
ಸಿದ್ಧಾಪುರದ ಯಕ್ಷ ನುಡಿಸಿರಿ ಬಳಗವು ರಾಜ್ಯೋತ್ಸವದಂದು ಮಾಯಾಂಗನೆ -ಮಾಯಾಮೃಗ ಎಂಬ ತಾಳಮದ್ದಳೆಯನ್ನು ಏರ್ಪಡಿಸಿತ್ತು. ಕವಿ ಪಾರ್ತಿಸುಬ್ಬ ವಿರಚಿತ ಪಂಚವಟಿ ಪ್ರಸಂಗದ ಶೂರ್ಪನಖಾ ಮಾನಭಂಗ ಹಾಗೂ ಸೀತಾಪಹರಣದ ವೃತ್ತಾಂತಗಳು ಅನುಭವಿ ಕಲಾವಿದರ ಸಮರ್ಥ ನಿರ್ವಹಣೆಯಿಂದ ಕನ್ನಡ ನುಡಿಯ ಬೆಡಗು, ಬಿನ್ನಾಣವನ್ನು ತೆರೆದಿಟ್ಟವು.
Related Articles
Advertisement
ರಾಘವ ನರಪತೆ ಶ್ರಣು ಮಮ ವಚನ ಎಂದು ಪ್ರಾರಂಭಗೊಳ್ಳುವ ರಾಮನೊಡಗಿನ ಶೂರ್ಪನಖೀಯ ಸಂವಾದ ಚೇತೋಹಾರಿಯಾಗಲು ರಾಮ ಪಾತ್ರಧಾರಿ ವಾಸುದೇವ ರಂಗಾ ಭಟ್ಟರ ಸೂಕ್ತ ಪ್ರತಿಸ್ಪಂದನೆಯೇ ಕಾರಣ. ನೀ ಗುಣನಿಧಿ, ಪ್ರಥುವಿಪತಿ, ತರಣಿಪ್ರಕಾಶ, ಮನುಮಥ ಎಂದೆಲ್ಲ ಹೇಳಿ ಅತಿ ಕುಲವತಿ, ರತಿದೇವಿಗೆಣೆ ನಾನು ಎಂದು ಶೂರ್ಪನಖೀ ತನ್ನನ್ನು ಬಣ್ಣಿಸಿಕೊಳ್ಳುವ ಪದ್ಯದ ಎಳೆಯನ್ನೇ ವಿಸ್ತರಿಸಿ, ಹೊಸ ಅರ್ಥ ಸಾಧ್ಯತೆಗಳನ್ನು ಶೋಧಿಸಿ ಹಾಗೂ ಹೊಸ ಹೊಳಹುಗಳನ್ನು ನೀಡಿ ವಿಶ್ವೇಶ್ವರ ಭಟ್ಟರು ಅರ್ಥಗಾರಿಕೆ ಮಾಡಿದರೆ, ರಂಗಾ ಭಟ್ಟರು ಶೂರ್ಪನಖೀಯ ಮಾತುಗಳಿಗೆ ವ್ಯಂಗ್ಯದ ಮೆಚ್ಚುಗೆ ಸೂಚಿಸುತ್ತಾ, ಆಗಾಗ್ಗೆ ಅವಳನ್ನು ಕೆದಕುತ್ತಾ ಮೋಹಕದ ಮಾತಿನಲ್ಲಿ ಸೆರೆ ಹಿಡಿಯುವ ಅವಳ ಪ್ರಯತ್ನಕ್ಕೆ ವಾದದ ತಡೆಯೊಡ್ಡಿ, ಎನಗಿಂತ ನೂರ್ಮಡಿ ಚೆಲುವನೆಂದು ಲಕ್ಷ್ಮಣನಲ್ಲಿಗೆ ಅವಳನ್ನು ಕಳುಹಿಸಿದರು.
ಸಹೋದರ ಸೇವೆಯ ದೀಕ್ಷೆಯಂತೆ ಕಾಮದೀಕ್ಷೆ ತೊಡು ಎಂದು ಯಜ್ಞ, ಸಮುದ್ರ ಮಥನದ ಉಪಮೆಗಳನ್ನು ಶೂರ್ಪನಖೀ ನೀಡಿದಾಗ ಲಕ್ಷ್ಮಣ ಪಾತ್ರಧಾರಿ ಗಣೇಶ್ ಕನ್ನಡಿಕಟ್ಟೆ ಅಪಾರ್ಥದ ಉಪಮೆಗಳನ್ನು ಖಂಡಿಸಿದ ರೀತಿ ಅವರ ವಾಕ್ ಪ್ರೌಡಿಮೆ ತೋರಿಸಿತು.
ರಾವಣನಾಗಿ ಜಬ್ಟಾರ್ ಸಮೋ, ಮಾರೀಚ ಪಾತ್ರಧಾರಿ ಸತೀಶ ಶೆಟ್ಟಿ ಮೂಡುಬಗೆಯೊಂದಿಗೆ ಸಂವಾದ ನಡೆಸಿದರು. ಶೂರ್ಪನಖಾ ಮಾನಭಂಗದಿಂದ ಲಂಕೆಯ ಪ್ರತಿಷ್ಠೆಗೆ ಘಾಸಿಯಾದ ಕಾರಣ ಪ್ರತೀಕಾರಕ್ಕಾಗಿ ಸೀತಾಪಹರಣ ಮಾಡಬೇಕೆಂದು, ಮಾರೀಚ ಹೊನ್ನ ಜಿಂಕೆಯಾಗಬೇಕೆಂದು ಜಬ್ಟಾರ್ ವಾದ ಹೂಡಿದರೆ, ಅದೊಂದು ನೆಪವೆಂದು ಹಂಗಿಸಿ, ವೈಯಕ್ತಿಕ ಹಿತ ಸಾಧನೆಗಾಗಿ ಲಂಕೆ ಹಾಗೂ ರಾಕ್ಷಸ ಕುಲವನ್ನು ಬಲಿ ಕೊಡಬೇಡೆಂದು ಸತೀಶ್ ಶೆಟ್ಟಿ ಸಮರ್ಥವಾಗಿ ಉತ್ತರಿಸಿದರು.
ಭಾವಕಿ ಸೀತೆ, ನೋಡಿದೆಯಾ ರಾಮ ಎನ್ನುತ್ತಾ ಮಾಯಾ ಜಿಂಕೆಯನ್ನು, ಚಿಕ್ಕ ಚಿಕ್ಕ ಕಾಲು ಬೆರಳು, ಕಾಲಿನುಗುರು, ಭಾವಂಗಳ ಎಂದು ತನಗೆ ಭಾವನೆಗಳೇ ಪ್ರಧಾನ, ಕಾಧಿನ ಮೃಗದಿಂದ ಕೇಡು ಬರಬಹುದೆಂಬ ರಾಮನ ತರ್ಕವಲ್ಲ ಎಂಬುದನ್ನು ಸಂಕದಗುಂಡಿ ಗಣಪತಿ ಭಟ್ ಭಾವಪೂರ್ಣವಾಗಿ ಕಟ್ಟಿಕೊಟ್ಟರು.
ಅನುಭವಿ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ದಿನೇಶ ಅಮ್ಮಣ್ಣಾಯರ ನೇತೃತ್ವದ ಸುಶ್ರಾವ್ಯ ಹಿಮ್ಮೇಳ ತಾಳಮದ್ದಲೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಸತ್ಯನಾರಾಯಣ ತೆಕ್ಕಟ್ಟೆ