ಬೆಂಗಳೂರು: ಕ್ಯಾನ್ಸರ್ ರೋಗಿಗಳ ಆರೈಕೆಗೆ ಹೆಸರು ಮಾಡಿರುವ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಇದೀಗ ಹೊಸ ಆರೋಗ್ಯ ಕಾರ್ಯಕ್ಕೆ ಕೈ ಹಾಕಿದೆ. ತನ್ನ ಆಶ್ರಯ ಮತ್ತು ಆರೈಕೆ ಬಯಸಿ ಬರುವ ರೋಗಿಗಳಿಗೆ “ಮಾನಸಿಕ ಚಿಕಿತ್ಸಾ ಕೇಂದ್ರ’ವನ್ನು ತೆರೆಯಲು ಮುಂದಾಗಿದೆ.
ಈ ಬಗ್ಗೆ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಆಡಳಿತ ಮಂಡಳಿ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರ ಇದಕ್ಕೆ ಹಸಿರು ನಿಶಾನೆ ತೋರಿದರೆ ಜನವರಿ ವೇಳೆಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಈ ಸೇವೆ ದೊರೆಯಲಿದೆ. ಮಾನಸಿಕ ಚಿಕಿತ್ಸಾ ಕೇಂದ್ರ ತೆರೆಯಲು ಬೇಕಾಗುವ ಸ್ಥಳ ಕಿದ್ವಾಯಿ ಸಂಸ್ಥೆಯಲ್ಲಿದೆ. ಜತೆಗೆ ಇದಕ್ಕೆ ಬೇಕಾಗುವ ಸಿಬ್ಬಂದಿ ವರ್ಗದ ಕೊರತೆಯಿಲ್ಲ. ಆದರೆ ಇದನ್ನು ಪ್ರಾರಂಭಿಸಲು ಸರ್ಕಾರದ ಅನುಮತಿ ಬೇಕು. ಕ್ಯಾನ್ಸರ್ ಸಂಬಂಧಿಸಿದ ರೋಗಿಗಳಿಗೆ ಈ ಕೇಂದ್ರ ಸ್ಥಾಪನೆ ಮಾಡುವುದರಿಂದ ಸಾಕಷ್ಟು ಅನುಕೂಲತೆಗಳಿವೆ. ರೋಗಿಗಳ ಹಿತದೃಷ್ಟಿಯಿಂದ ರಾಜ್ಯಸರ್ಕಾರ ಇದಕ್ಕೆ ಅನುಮತಿ ನೀಡುವ ನಿರೀಕ್ಷೆಯಿದೆ ಎಂದು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಹಿರಿಯ ಆಡಳಿತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೌನ್ಸಿಲಿಂಗ್ ಅಗತ್ಯ: ವಿವಿಧ ರೀತಿಯ ಕ್ಯಾನ್ಸರ್ ನಿಂದ ಬಳಲುತ್ತಿರುವ ಸುಮಾರು ಒಂದು ಸಾವಿರದಿಂದ ಒಂದು ಸಾವಿರ ಐನೂರು ರೋಗಿಗಳು ಪ್ರತಿನಿತ್ಯ ಕಿದ್ವಾಯಿಗೆ ಭೇಟಿ ನೀಡುತ್ತಾರೆ. ಕರ್ನಾಟಕದಲ್ಲಿ ಇದ್ದವರಷ್ಟೇ ಅಲ್ಲ. ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಉತ್ತರ ಭಾರತದವರು ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಕ್ಯಾನ್ಸರ್‌ಗೆ ಸಂಬಂಧಿಸಿದ ನಾನಾ ನಮೂನೆಯ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆಯ ಮೊದಲು ಮತ್ತು ನಂತರ ಕೌನ್ಸೆಲಿಂಗ್ ಅಗತ್ಯವಿದೆ. ಕೆಲವು ಬಾರಿ ಗುಣಪಡಿಸಬಹುದಾದ ಕ್ಯಾನ್ಸರ್‌ನಿಂದ ಬಳಲುತ್ತಿರುವವರೂ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಅಂತಹವರಿಗೆ ಕೌನ್ಸೆಲಿಂಗ್ ಅನುಕೂಲವಾಗಲಿದೆ.
ಜತೆಗೆ ಕೆಲವು ಸಲ ರೋಗಿಗಳ ಕೈ, ಕಾಲು ಸೇರಿದಂತೆ ಕೆಲವು ಅಂಗಗಳನ್ನು ಕತ್ತರಿಸಿ ತೆಗೆಯಲೇ ಬೇಕಾದ ಸ್ಥಿತಿಯಿರುತ್ತದೆ. ಆಗಲೂ ರೋಗಿಗಳಿಗೆ ಕೌನ್ಸೆಲಿಂಗ್ ಅಗತ್ಯವಿರುತ್ತದೆ. ರೋಗಿಗಳ ಜತೆ ಆಪ್ತ ಸಮಾಲೋಚನೆ ಮಾಡಿದ ಬಳಿಕ ಚಿಕಿತ್ಸೆ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಿದ್ವಾಯಿ ಆಸ್ಪತ್ರೆಗೆ ಮಾನಸಿಕ ಚಿಕಿತ್ಸಾ ಕೇಂದ್ರದ ಅವಶ್ಯಕತೆ ಹೆಚ್ಚಿದೆ. ಈ ಎಲ್ಲಾ ಅಂಶಗಳನ್ನು ಮನಗಂಡು ಕೇಂದ್ರ ಸ್ಥಾಪನೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರು “ಉದಯವಾಣಿ’ಗೆ ಮಾಹಿತಿ ನೀಡಿದರು. ರೋಗಿಗಳ ಆಪ್ತ ಸಮಾಲೋಚನೆ ಜತೆಗೆ ಚಿಕಿತ್ಸೆ ನೀಡಬೇಕು ಎಂಬ ಆಶಯವನ್ನು ಕಿದ್ವಾಯಿ ಆಸ್ಪತ್ರೆ ಹೊಂದಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದವರೇ ಅಧಿಕ: ಕಿದ್ವಾಯಿ ಆಸ್ಪತ್ರೆಗೆ ಹೊರರಾಜ್ಯದವರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಭಾರತದ ವಿವಿಧ ಭಾಗದಿಂದ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರಲ್ಲೂ ಪಶ್ಚಿಮ ಬಂಗಾಳದ 40 ಮಂದಿ ಒಂದೇ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ.ರಮೇಶ್ ಮಾಹಿತಿ ನೀಡಿದರು. ರೈಲಿನಲ್ಲಿ ಬರುವ ಇವರಿಗೆ ಆಯುಷ್ಮಾನ್ ಸೇರಿದಂತೆ ಇನ್ನಿತರ ಯಾವುದೇ ರೀತಿಯ ಆರೋಗ್ಯ ಸವಲತ್ತುಗಳನ್ನು ಪಡೆದುಕೊಳ್ಳುವಂತ ಆರೋಗ್ಯ ಕಾರ್ಡ್‌ಗಳು ಇಲ್ಲ. ಪಶ್ಚಿಮ ಬಂಗಾಳದಲ್ಲಿ ಆಯುಷ್ಮಾನ್ ಆರೋಗ್ಯ ಯೋಜನೆ ಜಾರಿಯಾಗಿಲ್ಲ. ಆರ್ಥಿಕ ಸಮಸ್ಯೆ ಉಂಟಾದಾಗ ದೂರದಿಂದ ಬಂದಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಚಿಕಿತ್ಸೆ ಮಾಡುವುದು ಅನಿವಾರ್ಯವಾಗಿರುತ್ತದೆ ಎಂದು ಹೇಳಿದರು.
ಕ್ಯಾನ್ಸರ್ ರೋಗಿಗಳ ಅನುಕೂಲತೆಯ ಹಿನ್ನೆಲೆಯಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲಿ ಮಾನಸಿಕ ಚಿಕಿತ್ಸಾ ಕೇಂದ್ರ ಅಗತ್ಯವಿದೆ. ಸ್ಥಾಪನೆಗೆ ಸರ್ಕಾರ ಅನುಮತಿ ನೀಡುವ ಭರವಸೆಯಿದೆ.
–ಡಾ.ಸಿ.ರಾಮಚಂದ್ರ , ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ನಿರ್ದೇಶಕ
-ದೇವೇಶ ಸೂರಗುಪ್ಪ