ಭಾರತೀಯ ಸಂಗೀತ ಶಿಕ್ಷಣಕ್ಕೆ ಪರಂಪರೆಯಲ್ಲಿ ಬಂದ ಪದ್ಧತಿಯೇ ಅತ್ಯುತ್ತಮವೆಂಬ ನಂಬಿಕೆಯಿಂದ ಕುಂದಾಪುರದಲ್ಲಿ ಸತೀಶ್ ಭಟ್ ಮತ್ತು ಪ್ರತಿಮಾ ಭಟ್ ಆರಂಭಿಸಿದ ಗುರುಪರಂಪರಾ ಸಂಗೀತ ಸಭಾದ ಆಶ್ರಯದಲ್ಲಿ ನಡೆದ ಒಂದು ದಿನದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಾಗಾರದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಶಾಸ್ತ್ರದ ಅಗತ್ಯ ಮತ್ತು ಬಳಕೆ, ಜೋಡ್ ರಾಗಗಳ ವೈಶಿಷ್ಟ್ಯ ಮತ್ತು ಪ್ರಯೋಗ ಹಾಗೂ ಸಂಗೀತದ ಕಲಿಕಾ ಕ್ರಮಗಳ ಕುರಿತು ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ಪಂಡಿತ್ ಶ್ರೀಪಾದ ಹೆಗಡೆ, ಕಂಪ್ಲಿ ಅವರು ಭಕ್ತಿ-ಭಾವ ಲಹರಿ ಎಂಬ ಗಾಯನ ಕಾರ್ಯಕ್ರಮವನ್ನೂ ನಡೆಸಿ ಕೊಟ್ಟರು.
ಮಧುರ ಕಂಠದ ಹೆಗಡೆಯವರು ಕಾರ್ಯಕ್ರಮದ ಶೀರ್ಷಿಕೆಗೆ ತಕ್ಕಂತೆ ಭಾವಪೂರ್ಣ ಸಾಹಿತ್ಯವುಳ್ಳ ಹಾಡುಗಳನ್ನು ಲಘು ಧಾಟಿಯಲ್ಲಿ ಶುದ್ಧ ಶಾಸ್ತ್ರೀಯ ರಾಗಗಳನ್ನು ಬಳಸಿ ಹಾಡಿದರು. ಸಾಮಾನ್ಯವಾಗಿ ಭಾವಗೀತೆಗಳಲ್ಲಿ ಸಾಹಿತ್ಯ ಮತ್ತು ಅದು ಹೊಮ್ಮಿಸುವ ಭಾವಕ್ಕಷ್ಟೇ ಪ್ರಾಮುಖ್ಯವಿರುವುದಾದರೂ ಸಾವಧಾನ ಗತಿಯ ಶಾಸ್ತ್ರೀಯ ರಾಗಗಳ ಮೂಲಕ ಹಾಡಿದಾಗ ಇನ್ನಷ್ಟು ಅರ್ಥಸಾಧ್ಯತೆಗಳನ್ನು ಹೇಗೆ ಅರಳಿಸಬಹುದು ಎನ್ನುವುದಕ್ಕೆ ಗಾಯನ ಸಾಕ್ಷಿಯಾಯಿತು.
ಆರಂಭದಲ್ಲಿ ಶ್ರೀಧರ ಹೆಗಡೆಯವರು ಪರಮಪುರುಷ ಹರಿ ಗೋವಿಂದ ಎಂಬ ಭಕ್ತಿಗೀತೆಯನ್ನು ಪಹಾಡಿ ರಾಗದಲ್ಲಿ ಹಾಡಿದರು. ಮುಂದೆ ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಳಿಯನ್ನು ಮಿಶ್ರ ಖಮಾಚ್ ರಾಗದಲ್ಲಿ, ಅದರೊಳಗಿನ ತಾತ್ವಿಕ ಚಿಂತನೆಯ ಹಲವು ಆಯಾಮಗಳು ಕಣ್ಣಿಗೆ ಕಟ್ಟುವಂತೆ ಎಳೆಎಳೆಯಾಗಿ ಬಿಡಿಸಿ ಹಾಡಿದರು. ಮಧುವಂತಿ ರಾಗದಲ್ಲಿ ಹಾಡಿದ ಕರ್ತಾ ಕೃಷ್ಣಯ್ನಾ ನೀ ಬಾರಯ್ನಾ ಎಂಬ ಭಕ್ತಿಗೀತೆಯಲ್ಲಿ ಹೊರಹೊಮ್ಮಿದ ಆರ್ತತೆ , ಮಧ್ಯಮಾದಿ ಸಾರಂಗದಲ್ಲಿ ಶ್ರೀರಂಗನಾಟದ ಪರಿಯಾ ಮೂಡಿಬಂದ ಪದಲಾಲಿತ್ಯ, ಭೈರವಿಯಲ್ಲಿ ರಾಮ ರಾಮ ರಾಮ ಸೀತಾರಾಮ ಎನ್ನಿರೋ ಎಂಬ ಹಾಡಿನಲ್ಲಿ ಮೂಡಿದ ಭಕ್ತಿಭಾವ ರಸಗಳು ಮನಮುಟ್ಟುವಂತಿದ್ದವು. ಮುರಿದು ಬಿದ್ದ ಕೊಳಲು ನಾನು ಪ್ರೀತಿಯ ಜೀವವ ಎದೆಯಲಿ ಬೆಳೆಸಿ ಮರೆಗೆ ಸರಿದೆಯೇನೋ ಎಂಬ ಭಾವಗೀತೆಗಳ ವಿಷಾದ ಧ್ವನಿ ಕರುಣ ರಸವನ್ನು ಉಕ್ಕಿಸುವಂತಿದ್ದವು. ಭೈರವಿ ರಾಗದ ಏರಿಳಿತ ಸಂಚಾರದಲ್ಲಿ ವರ್ಷಧಾರೆಯಂತೆ ಹರಿದು ಬಂದ ತರಾನಾದೊಂದಿಗೆ ಗಾಯಕರು ಕಾರ್ಯಕ್ರಮÊವನ್ನು ಕೊನೆಗೊಳಿಸಿದರು. ಭಾರವಿ ದೇರಾಜೆಯವರ ತಬಲಾ ಸಾಥ್ ಗಾಯನಕ್ಕೆ ಪೂರಕವಾಗಿತ್ತು. ಒಟ್ಟಿನಲ್ಲಿ ಒಂದು ಸುಮಧುರ ಸಂಗೀತ ಸಂಜೆಯನ್ನು ಸವಿದ ಸಾರ್ಥಕ ಭಾವವನ್ನು ಈ ಕಾರ್ಯಕ್ರಮ ಮೂಡಿಸಿತು.
ಡಾ| ಪಾರ್ವತಿ ಜಿ.ಐತಾಳ್