Advertisement

ಹಳ್ಳಿಹಕ್ಕಿಗೆ ಮುಂದಿನ ದಿನಗಳಲ್ಲಿ ಸ್ಥಾನಮಾನ

07:05 AM Jun 20, 2020 | Lakshmi GovindaRaj |

ತುಮಕೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಜೂ.29 ರಂದು ನಡೆಯಲಿರುವ ಚುನಾವಣೆಗೆ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರಿಗೆ ಟಿಕೆಟ್‌ ಕೈತಪ್ಪಿರುವ ಸಂಬಂಧ ಈಗಾಗಲೇ ನಾವು ಮುಖ್ಯಮಂತ್ರಿಗಳೊಂದಿಗೆ  ಚರ್ಚಿಸಿದ್ದೇವೆ. ಅವರಿಗೆ ಮುಂದಿನ ದಿನಗಳಲ್ಲಿ ಸ್ಥಾನ ಕೊಡುವ ಭರವಸೆ ನೀಡಿದ್ದಾರೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮ ಶೇಖರ್‌ ಹೇಳಿದರು.

Advertisement

ನಗರದ ಶ್ರೀಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರೊಂದಿಗೆ  ಶುಕ್ರವಾರ ಭೇಟಿ ನೀಡಿ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಆಶೀರ್ವಾದ ಪಡೆದು ಮಾತನಾಡಿದರು. ಮುಖ್ಯಮಂತ್ರಿಗಳು ಭರವಸೆ ನೀಡಿರುವು ದ ರಿಂದ ಮುಂದಿನ  ದಿನಗಳಲ್ಲಿ ವಿಶ್ವನಾಥ್‌ ಅವರಿಗೂ ಸೂಕ್ತ ಸ್ಥಾನ ಸಿಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಸೂಕ್ತ ಸ್ಥಾನಮಾನ: ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ವಿಶ್ವನಾಥ್‌ ಅವರ ಹೆಸರು ಸಹ ಶಿಫಾರಸು ಮಾಡಲಾಗಿತ್ತು. ಹೈಕಮಾಂಡ್‌ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಅವರ ಹೆಸರು ಕೈಬಿಟ್ಟಿರಬಹುದು. ಮುಂದಿನ ದಿನಗಳಲ್ಲಿ ವಿಶ್ವನಾಥ್‌ ಅವರಿಗೆ ಸೂಕ್ತ ಅವಕಾಶ ನೀಡುವುದಾಗಿ ಹೈಕಮಾಂಡ್‌ ತಿಳಿಸಿದೆ ಎಂದರು.

ಬೇಡಿಕೆ ಈಡೇರಿಕೆ: ಈಗಾಗಲೇ ಮುಖ್ಯಮಂತ್ರಿಗಳು ಶೇ.90 ರಷ್ಟು ಬೇಡಿಕೆಗಳನ್ನು ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವನಾಥ್‌ ಅವರಿಗೂ ಸೂಕ್ತ ವ್ಯವಸ್ಥೆ ಆಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ: ಮಾಜಿ ಸಚಿವ ವಿಶ್ವನಾಥ್‌ ಅವರೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾರೆ. ನಮಗೆಲ್ಲರಿಗೂ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸ, ನಂಬಿಕೆ ಇದೆ. ಹಾಗೆಯೇ  ಹೈಕಮಾಂಡ್‌ ತೀರ್ಮಾನಕ್ಕೂ ಬದ್ಧರಾಗಿದ್ದೇವೆ. ನಮ್ಮಲ್ಲಿ ಯಾರಿಗೂ ಅಸಮಾಧಾನ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು. ಇನ್ನು ಮುನಿರತ್ನ ಹಾಗೂ ಪ್ರತಾಪ್‌ ಗೌಡ ಪಾಟೀಲ್‌ ಅವರ ಕ್ಷೇತ್ರಗಳಿಗೆ  ಚುನಾವಣೆ ನಡೆಯಬೇಕಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಅಸಮಾಧಾನ ಇಲ್ಲ: ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಿಗೆ ಕೇಂದ್ರದಿಂದ ಬರುವ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿಯ ಯಾವೊಬ್ಬ ಶಾಸಕರೂ ಸಹ ಅಸಮಾಧಾನಗೊಂಡಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ  ಅನುದಾನ ಬಂದಿಲ್ಲ. ಆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರ ಬಳಿ ಹೇಳಿಕೊಂಡಿದ್ದಾರೆ ಅಷ್ಟೇ. ಅದನ್ನು ಬಿಟ್ಟರೆ ಯಾರಿಂದಲೂ ಅಸಮಾಧಾನ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಕಾಯ್ದೆ ತಿದ್ದುಪಡಿಯಿಂದ ತೊಂದರೆ ಇಲ್ಲ: ಎಪಿಎಂಸಿ ಇರುವುದೇ ರೈತರಿಗೋಸ್ಕರ. ಕಾಯ್ದೆ ತಿದ್ದುಪಡಿಯಿಂದ ಯಾರಿಗೂ ತೊಂದರೆಯಾಗಿಲ್ಲ. ಇದರಿಂದ ಎಪಿಎಂಸಿ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗದು. ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಸಚಿವ ಸೋಮಶೇಖರ್‌ ಹೇಳಿದರು. ರೈತರು ಎಲ್ಲಿ ಬೇಕಿದ್ದರೂ ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದಾಗಿದೆ. ಮಲ್ಟಿ ನ್ಯಾಷನಲ್‌ ಕಂಪನಿಗಳು ಬರುವುದರಿಂದ  ಯಾವುದೇ ಸಮಸ್ಯೆಯಾಗದು. ಅವರೇ ರೈತರ ಹೊಲಗಳಿಗೆ ಬಂದು ನೇರವಾಗಿ ಖರೀದಿಸಲಿದ್ದಾರೆ ಎಂದು ಹೇಳಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next